ಫೆಬ್ರವರಿ 20, 2010
ಈ ನೃತ್ಯ ಸಾಧಕಿಗೆ ಒಂದೇ ಕಾಲು!
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸಬೇಕೆಂಬ ವಾಂಛೆ, ಅದಕ್ಕಾಗಿನ ಛಲ ಇದ್ದಲ್ಲಿ ಏನನ್ನೂ ಸಾಧ್ಯ ಮಾಡಬಹುದು. ಅದಕ್ಕೆ ವಿಕಲಾಂಗತೆಯೂ ತೊಡಕಾಗದು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅದೆಷ್ಟೋ ಮಂದಿ ಅಂಗವಿಕಲರು, ಸರ್ವಾಂಗಗಳೂ ಸರಿ ಇರುವವರಿಗೆ ಸರಿದೊರೆಯಾಗಿ ಅಥವಾ ಅವರನ್ನೂ ಮೀರಿಸುವಂತೆ ಕಾರ್ಯನಿರ್ವಹಿಸಿಯೂ ಸಮಾಜದಲ್ಲಿ `ಗುಪ್ತ'ರಾಗಿ ಅಥವಾ ಕೆಲವೊಮ್ಮೆ ಒಂದು ರೀತಿಯಲ್ಲಿ ಉದ್ಯೋಗದಾತರ ಅಸಡ್ಡೆಗೊಳಗಾಗಿಯೂ ತಮ್ಮ ಕರ್ತವ್ಯಪರತೆಯನ್ನು ಮೆರೆಯುತ್ತಿರುವುದನ್ನು ಕಾಣಬಹುದು. ಅಂಥವರು ಸೇವಾಕ್ಷೇತ್ರ, ಕ್ರೀಡಾ ಕ್ಷೇತ್ರ, ಮಾಧ್ಯಮ ಕ್ಷೇತ್ರ, ಸಂಗೀತ ಕ್ಷೇತ್ರದಲ್ಲಿರುವುದನ್ನು ಕಾಣಬಹುದು. ನೃತ್ಯ ಕ್ಷೇತ್ರದಲ್ಲೂ ಸುಧಾ ಚಂದ್ರನ್ ಅಂಥ ಅದ್ಭುತ ಪ್ರತಿಭೆಗಳು ಹೆಸರಾಗಿರುವುದು ಇತಿಹಾಸ. ಆ ಸಾಲಿಗೆ ಕೇರಳದ ತರುಣಿ ವಂದನಾ ಕೂಡಾ ಸೇರುತ್ತಾಳೆ.
ಭರತನಾಟ್ಯ ಹಾಗೂ ಮೋಹಿನಿಯಾಟ್ಟಂ ನೃತ್ಯಪಟುವಾದ 18ರ ಹರೆಯದ ವಂದನಾ ವಿಕಲಾಂಗ ಯುವತಿ. ಆಕೆಗೆ ಒಂದೇ ಕಾಲು. ಕೇರಳ ತಿರುವನಂತಪುರ ಪೆರುಕಡ ನಿವಾಸಿ ರವೀಂದ್ರ ಮತ್ತು ವತ್ಸಲಾ ದಂಪತಿ ಪುತ್ರಿ ವಂದನಾ ಹುಟ್ಟು ವಿಕಲಾಂಗೆ. ಜನಿಸುವಾಗಲೇ ಬಲಗಾಲು ರಹಿತವಾಗಿ ಹುಟ್ಟಿದ ಆಕೆಗೆ ಎಡಗಾಲು ಮಾತ್ರ ಇರುವುದು. ಹೀಗೆ ಜನಿಸಿದ ಮಗುವನ್ನು ಕಂಡು ಅಂದು ಹೆತ್ತವರು ಮಮ್ಮಲಮರುಗಿದ್ದರು. ಆದರೆ, ಇದೀಗ ಅದೇ ಪುತ್ರಿಯಿಂದ ಮನೆ ಬೆಳಗಿದೆ. ಆರತಿ ಹಾಗೂ ಕೀರುತಿಗೆ ವಂದನಾಳೇ ಮೂಲತ: ಕೂಲಿ ಕಾರ್ಮಿಕರಾದ ರವೀಂದ್ರ- ವತ್ಸಲಾರಿಗೆ ದಿಕ್ಕು!
ಅಂಗವಿಕಲೆಯಾದರೇನಂತೆ, ಮನಸ್ಸಿಗೆ ವಿಕಲಾಂಗತೆ ಇಲ್ಲವಲ್ಲ. ಅಂಥ ಕಠಿಣ ಹೃದಯದ ಮಗಳು ವಂದನಾಳಿಗೆ ಚಿಕ್ಕಂದಿನಿಂದಲೇ ಸಂಗೀತದಲ್ಲಿ ಆಸಕ್ತಿ. ಮನೆ ಸಮೀಪದ ಸಂಗೀತ ಶಾಲೆಗೆ ಸಂಗೀತಾಭ್ಯಾಸಕ್ಕೆಂದು ತೆರಳಿದ್ದಾಗ ಅಲ್ಲಿನ ಓರಗೆಯವರು ನೃತ್ಯಾಭ್ಯಾಸದಲ್ಲಿ ತೊಡಗಿದ್ದುದನ್ನು ಕಂಡು, ತಾನೂ ನೃತ್ಯಪಟುವಾಗಬೇಕೆಂಬ ಆಸೆ ಮೊಳಗಿತಂತೆ. ಕೇಂದ್ರದ ಶಿಕ್ಷಕಿ ರಾಧಿಕಾ ಸುಂದರೇಶನ್ ಬಳಿ ವಿಚಾರಿಸಿದಾಗ, ಆರಂಭದಲ್ಲಿ ಅವರು ಅಸಮ್ಮತಿ ತೋರಿದರೂ, ವಂದನಾಳಿಗಿದ್ದ ಅದಮ್ಯ ಆಸಕ್ತಿಯನ್ನು ಮನಗಂಡು ನೃತ್ಯ ಶಿಕ್ಷಣ ನೀಡಲು ಸಮ್ಮತಿಸಿದರು. ನೃತ್ಯಪಟುವಿಗಿರಬೇಕಾದ ಶಾರೀರ ವಂದನಾಳಲ್ಲಿದ್ದರೂ ತೊಡಕಾಗಿದ್ದು ಆಕೆಗೆ ಒಂದೇ ಕಾಲು ಎಂಬುದು. ಆದರೂ, ಅಭ್ಯಾಸದಿಂದಾಗಿ ವಂದನಾ ಯಶ ಸಾಧಿಸಿದಳು. ಹಾಗಂತ ಆಕೆಗೇನೂ ಪ್ರತ್ಯೇಕ ತರಗತಿಗಳಿರಲಿಲ್ಲ.
ಮುಂದಿನ ಶಿಕ್ಷಣವನ್ನು ನೃತ್ಯ ಗುರುಶಕ್ತಿ ಹಾಗೂ ಪ್ರಸ್ತುತ ಶಿವ ನಾಟ್ಯಶಾಲೆಯಲ್ಲಿ ಸಂತೋಷಕುಮಾರ್ ಮಾರ್ಗದರ್ಶನದಲ್ಲಿ ಮುಂದುವರಿಸಿದ ವಂದನಾ, ಭರತನಾಟ್ಯ ಹಾಗೂ ಮೋಹಿನಿಯಾಟ್ಟಂಗಳಲ್ಲಿ ಎಷ್ಟೇ ವೇಗದ ಹೆಜ್ಜೆ ಇಡಬಲ್ಲಳು. ತಾಳಬದ್ಧವಾಗಿ, ಲಯಬದ್ಧವಾಗಿ ಹೆಜ್ಜೆ ಇಕ್ಕಬಲ್ಲ ಆಕೆ ಒಂಟಿಕಾಲಿನ ನೃತ್ಯಪಟು ಎಂದು ಯಾರಿಗೂ ಎನಿಸದು. ನಾಟ್ಯದ ಅಂಗಶುದ್ಧಿ, ಭಾವಶುದ್ಧಿಗಳಿಗೆ ಅಂಗವಿಕಲತೆ ಅಡ್ಡಿಯುಂಟುಮಾಡದು. ಹಾಗಂತ, ಆಕೆ ನೃತ್ಯ ಸಂದರ್ಭದಲ್ಲಿ ಕೃತಕ ಕಾಲು ಅಳವಡಿಸಿಕೊಳ್ಳುವುದಿಲ್ಲ. ಆಕೆ ಒಂಟಿ ಕಾಲಿನಿಂದಲೇ ಮಯೂರಿಯಂತೆ ಜಿಗಿಯಬಲ್ಲಳು, ಕುಪ್ಪಳಿಸಬಲ್ಲಳು, ಕುಳಿತು- ಏಳುವಾಗಲೂ ಆಕೆಗೆ ತೊಡಕಾಗದು. ವಂದನಾ ನೃತ್ಯ ಪ್ರದರ್ಶನಕ್ಕೆ ಪ್ರೇಕ್ಷಕರ ದಂಡೇ ಮುಗಿಬೀಳುತ್ತದೆ. ಅವರಲ್ಲಿ ಒಂದಿಷ್ಟು ಕುತೂಹಲವೂ ಇರುತ್ತದೆ.
ನೃತ್ಯಗುರು ಸಂತೋಷಕುಮಾರ್, ಆಕೆಗೆ ನೃತ್ಯಾಭ್ಯಾಸ ಹೇಗೆ ಮಾಡಿಸಬೇಕೆಂದು ನಾನು ಸ್ವತ: ಆಕೆಯಿಂದಲೇ ತಿಳಿದೆ
ಎಂದು ವಿನಮ್ರರಾಗಿ ಹೇಳುತ್ತಾರೆ. ಆಕೆ ಭರವಸೆಯ ನೃತ್ಯಗಾರ್ತಿ ಎಂದೂ ಹೆಮ್ಮೆಯ ನುಡಿ ನುಡಿಯುತ್ತಾರೆ. ಕೃತಕ ಕಾಲು ಧರಿಸಿ, ವೇದಿಕೆ ಮೇಲೆ ನರ್ತಿಸುವ ಸುಧಾ ಚಂದ್ರನ್ಗಿಂತಲೂ ವಂದನಾ ಉತ್ತಮ ಕಲಾವಿದೆ ಎಂಬುದು ಸಂತೋಷಕುಮಾರ್ ನುಡಿ.
ಈಗಾಗಲೇ ಕೇರಳ, ಕರ್ನಾಟಕದ ವಿವಿಧೆಡೆಗಳಲ್ಲಿ ಕಾರ್ಯಕ್ರಮ ನೀಡಿರುವ ಒಂಟಿಕಾಲಿನ ಕಲಾವಿದೆ ವಂದನಾಳ ಕಾರ್ಯಕ್ರಮ ಮುಂಬೈಯಲ್ಲೂ ಪ್ರದರ್ಶನವಾಗಿದೆ. ಈಚೆಗೆ ಉಡುಪಿ ರಾಜಾಂಗಣದಲ್ಲಿ ಎರಡು ಬಾರಿ ಕಾರ್ಯಕ್ರಮ ನೀಡಿದ್ದಾಳೆ. ಆಕೆಯ ನೃತ್ಯ ಪ್ರೌಢಿಮೆಗೆ ಬೆರಗಾದ ಅಂದಿನ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿದ್ದಾರೆ. ಕರ್ನಾಟಕ ಅರಣ್ಯ ಪಾಲಕರ ಕುಂದಾಪುರ ವಿಭಾಗದ ಸದಸ್ಯರು ತಮ್ಮ ವಾರ್ಷಿಕೋತ್ಸವ ಸಂದರ್ಭದಲ್ಲಿ ಉಡುಪಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿದ್ದಾರೆ.
ಕೇರಳ ತಿರುವನಂತಪುರ ಮಾರ್ ಇಲಾನಿಯಸ್ ಕಾಲೇಜಿನಲ್ಲಿ ಬಿಕಾಂ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಂದನಾ ಎಲ್ಲಾ ವಿಕಲಾಂಗರೂ ಬಯಸುವಂತೆ ಅನುಕಂಪ ಬೇಡ, ಅವಕಾಶ ಕಲ್ಪಿಸಿ ಎಂದು ಹೇಳುತ್ತಾಳೆ. ಇತರ ಅಂಗವಿಕಲರ ಸೇವೆ ಮಾಡುವ ಆಸೆಯೂ ಅವಳಿಗಿದೆ. ಸಮಾಜದಲ್ಲಿ ಇಂತವರು `ದೊಡ್ಡವರು' ಎಂದೆನಿಸುವುದಿಲ್ಲವೇ?
ಸಂಯುಕ್ತ ಕರ್ನಾಟಕ: 14,ಫೆ.2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)