ಕುಂದಾಪುರ ತಾಲ್ಲೂಕಿನ ಕೋಟದಲ್ಲಿ ಅಪೂರ್ವವಾದ ಗಣಪತಿಯ ವಿಗ್ರಹವೊಂದು ಪತ್ತೆಯಾಗಿದೆ. ಅದು 17ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂಬುದು ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಪುರಾತತ್ವ ವಿಭಾಗ ಉಪನ್ಯಾಸಕ ಪ್ರೊ. ಟಿ. ಮುರುಗೇಶಿ ಅಭಿಪ್ರಾಯ. ಕೇವಲ ಒಂದು ಅಡಿ ಎತ್ತರವಿರುವ ಚತುರ್ಭುಜ ಗಣಪತಿ ವಿಗ್ರಹ ಕುಳಿತ ಭಂಗಿಯಲ್ಲಿದೆ. ಸರಳವಾದ ಕರಂಡಕ ಮುಕುಟ ಮತ್ತು ಪ್ರಭಾವಳಿ ಇದೆ. ವಿಶೇಷವೆಂದರೆ ಈ ವಿಗ್ರಹಕ್ಕೆ 3 ಎಳೆಯ ಪವಿತ್ರ ಜನಿವಾರವಿದೆ. ಸಾಮಾನ್ಯವಾಗಿ ಒಂದು ಅಥವಾ ಎರಡು ಎಳೆಯ ಜನಿವಾರ ಶಿಲ್ಪಗಳಲ್ಲಿ ಕಂಡುಬರುತ್ತದೆ. 3 ಎಳೆಯ ಜನಿವಾರ ಅತ್ಯಂತ ಅಪರೂಪ.
ಎಡಮುರಿ ಶೈಲಿಯಲ್ಲಿರುವ ಈ ಗಣಪತಿ ವಿಗ್ರಹ, ತನ್ನ ಬಲ ಮುಂದಿನ ಕೈಯಲ್ಲಿ ಮುರಿದ ದಂತ ಹಿಡಿದಿದೆ. ಬಲ ಹಿಂದಿನ ಕೈಯಲ್ಲಿ ಅಂಕುಶ ಇದೆ. ಎಡ ಮುಂದಿನ ಕೈಯಲ್ಲಿ ಮೋದಕ ಉಂಟು. ಎಡ ಹಿಂದಿನ ಕೈಯಲ್ಲಿ ಪಾಶವಿದೆ.
ಸಂಯುಕ್ತ ಕರ್ನಾಟಕ: ಏ. 14, 2010