ಮೇ 29, 2010

`ಸ್ಟೇಟ್ಹೋಂ' ಯುವತಿಯರ ಕೈಹಿಡಿದ ಬ್ರಾಹ್ಮಣ ಯುವಕರು!

ಇಲ್ಲಿ ಬಾಯಾರಿ ಬಂದವರಿಗೆ ಪಾನಕದ ವ್ಯವಸ್ಥೆಯಿತ್ತು. ನಗುಮೊಗದ ಸ್ವಾಗತವಿತ್ತು. ವಾದ್ಯಘೋಷ ಮೊಳಗುತ್ತಿತ್ತು. ಮಂತ್ರ ಪಠಣವೂ ಕೇಳಿಬರುತ್ತಿತ್ತು.
ಉಡುಪಿ ಸ್ಟೇಟ್ಹೋಂ (ಸ್ತ್ರೀನಿಕೇತನ) ಮದುವೆ ಮಂಟಪವಾಗಿತ್ತು. ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ನಿರ್ಗತಿಕ ಹೆಣ್ಣುಮಕ್ಕಳಿಗೆ ಆಸರೆ ನೀಡುವ ಸ್ತ್ರೀನಿಕೇತನ ಕಲ್ಯಾಣ ಮಂಟಪವಾಗಿತ್ತು! ಎಲ್ಲಿಂದಲೋ ಬಂದು ಇಲ್ಲಿನವರೇ ಆದ ನಾಲ್ವರು ತರುಣಿಯರಿಗೆ ಕಂಕಣಭಾಗ್ಯ ಒಲಿದುಬಂದಿತ್ತು. ಅವರ ಪಾಣಿಗ್ರಹಣಕ್ಕಾಗಿ ನಾಲ್ವರು ಯುವಕರು, ಅದರಲ್ಲೂ ಸುಸ್ಥಿತಿಯ ಬ್ರಾಹ್ಮಣ ತರುಣರು ಅಭಿಜಿನ್ ಸುಮೂರ್ತಕ್ಕಾಗಿ ಇದಿರುನೋಡುತ್ತಿದ್ದರು!
ಇದು ಉಡುಪಿ ನಿಟ್ಟೂರು ಬಳಿಯ ಸ್ಟೇಟ್ಹೋಂನಲ್ಲಿ ನಡೆದ ಅಪೂರ್ವ ವಿವಾಹ ಮಹೋತ್ಸವದ ಸಂಭ್ರಮದ ನೋಟ.
ವಿವಾಹ ಸ್ವರ್ಗದಲ್ಲಿ ನಡೆಯುತ್ತದೆ ಎಂಬ ಮಾತಿದೆ. ಈಚಿನ ದಿನಗಳಲ್ಲಿ ಮಹಿಳೆ ಹಾಗೂ ಪುರುಷರ ಜನನ ಪ್ರಮಾಣದಲ್ಲಿನ ಅಂತರ ಬಹಳಷ್ಟಿದ್ದು, ವಧುಗಳ ಕೊರತೆ ತರುಣರನ್ನು ಕಾಡುತ್ತಿದೆ. ಈ ಸಮಸ್ಯೆ ಎಲ್ಲಾ ವರ್ಗಗಳವರಲ್ಲಿದ್ದರೂ ಬ್ರಾಹ್ಮಣರಲ್ಲಿ ಅದು ಹೆಚ್ಚಿದೆ. ಅದಕ್ಕೆ ಕಾರಣ 1970ರ ದಶಕದಲ್ಲಿ ಆರಂಭವಾದ ಭ್ರೂಣಪತ್ತೆಯ ಅಲ್ಟ್ರಾಸ್ಕ್ಯಾನಿಂಗ್ ಎಂಬ ಅಂದಿನ ಅನಿಷ್ಟ ಪದ್ಧತಿಯನ್ನು ಇತರರಿಗಿಂತ ಬ್ರಾಹ್ಮಣರು ಬೇಗನೇ ನೆಚ್ಚಿಕೊಂಡ ಪರಿಣಾಮವೋ, ಅಥವಾ ಕುಟುಂಬ ಯೋಜನೆ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡ ಫಲವೋ ಅಂತೂ ಈಗ ಮದುವೆಗೆ ವಯಸ್ಸಾದ, ವಯಸ್ಸು ಮೀರಿದ ಯುವಕರಿಗೆ ಯುವತಿಯರಿಲ್ಲ. ಜೊತೆಗೆ ಕೃಷಿಕರು, ಪೌರೋಹಿತ್ಯ ಮಾಡುವವರು, ಹಳ್ಳಿತೋಟದ ಮನೆಯವರು, ಹೋಟೆಲ್ನವರಿಗೆ ಹೆಣ್ಣು ಕೊಡುವುದಿಲ್ಲ ಎಂಬ ಷರತ್ತು ವಿಧಿಸುತ್ತಿರುವ ಹೆಣ್ಣು ಹೆತ್ತವರ ಪರಿ ವಿವಾಹಾಪೇಕ್ಷಿ ತರುಣರಿಗೆ ಕಂಠಕಪ್ರಾಯವಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ ವಧುಗಳ ಕೊರತೆಯಿಂದ ತತ್ತರಿಸಿಹೋಗಿರುವ, ಸಾಕಷ್ಟು ಸ್ಥಿತಿವಂತರಾಗಿರುವ ನಾಲ್ವರು ಬ್ರಾಹ್ಮಣ ವರರು ವಧೂನ್ವೇಷಣೆಗಾಗಿ ಇಲ್ಲಿನ ಸ್ಟೇಟ್ಹೋಂಗೆ ಆಗಮಿಸಿ, ತಮ್ಮ ಮನದನ್ನೆಯರನ್ನು ಆರಿಸಿಕೊಂಡರು. ಹಾಗಂತ ಸ್ಟೇಟ್ಹೋಂನ ತರುಣಿಯರು ಅಷ್ಟೇನೂ ಸುಂದರವಾಗಿಲ್ಲ, ವಿದ್ಯಾವಂತರೂ ಅಲ್ಲ. ಅಂಥವರನ್ನು ಕೈಹಿಡಿಯಲು ಮುಂದೆಬಂದ ಈ ತರುಣರು ಸರ್ವರ ದೃಷ್ಟಿಯಲ್ಲಿ ಎತ್ತರಕ್ಕೇರಿದ್ದಾರೆ!
ಉಡುಪಿ ಮಟ್ಟು ರಾಮಕೃಷ್ಣ ರಾವ್ ಎಂಬವರ ಪುತ್ರ ರಾಜೇಶ ರಾವ್, ವೃತ್ತಿಯಲ್ಲಿ ಖಾಸಗಿ ಬಸ್ ನಿರ್ವಾಹಕ. ಆತ ಕರ್ಕು ಎಂಬವರ ಪುತ್ರಿ ಚೋಂದು ಯಾನೆ ಚಂದನಾ ಎಂಬಾಕೆಯ ಕೈಹಿಡಿದಿದ್ದರೆ, ದ. ಕ. ಜಿಲ್ಲೆಯ ಮೂಲ್ಕಿ ದಿ. ರಾಘವ ರಾವ್ ಮಾಂಟ್ರಡಿ ಎಂಬವರ ಪುತ್ರ ಶಂಕರನಾರಾಯಣ ಕೂಸಪ್ಪ ಆಚಾರಿ ಪುತ್ರಿ ಶಶಿಕಲಾಳ ಪಾಣಿಗ್ರಹಣ ಮಾಡಿದ್ದಾರೆ. ಅವರು ಹಳೆಯಂಗಡಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಪರಿಚಾರಕ. ಉ. ಕ. ಜಿಲ್ಲೆಯ ನಡಿಮನೆ ವೆಂಕಟರಮಣ ಹೆಗಡೆ ಅವರ ಪುತ್ರ ವಿನಾಯಕ ವೆಂ. ಹೆಗಡೆ ದಿ. ಬಂಡೆಪ್ಪನವರ ಪುತ್ರಿ ಕಾವ್ಯ ಅವರನ್ನು ಹಾಗೂ ಹಾಸನ ಶೆಟ್ಟಿಹಳ್ಳಿ ಹಿರಗನಹಳ್ಳಿ ಎಚ್. ಎಲ್. ಅನಂತಮೂತರ್ಿ ಪುತ್ರ ಶ್ರೀನಿವಾಸಮೂತರ್ಿ ದಿ. ಬೊಳ್ಳಿ ಅವರ ಪುತ್ರಿ ಕಾವೇರಿಯನ್ನು ಮದುವೆಯಾಗಿದ್ದಾರೆ. ಅವರೀರ್ವರೂ ವೃತ್ತಿಯಲ್ಲಿ ಕೃಷಿಕರು.

ಜಿಲ್ಲಾಧಿಕಾರಿಯಿಂದ ಧಾರೆ: ಮಧ್ಯಾಹ್ನ 12.10ರ ಅಭಿಜಿನ್ ಮುಹೂರ್ತದಲ್ಲಿ ವೈದಿಕರ ಮಂತ್ರಘೋಷ ನಡೆಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹೇಮಲತಾ ಪೊನ್ನುರಾಜ್ ಧಾರೆ ಎರೆದು ವಿವಾಹ ನೆರವೇರಿಸಿದರು. ಇಲಾಖಾಧಿಕಾರಿಗಳು, ವರರ ಕಡೆಯಿಂದ ಆಗಮಿಸಿದ ನೂರಾರು ಬಂಧುಮಿತ್ರರು, ಸ್ಟೇಟ್ಹೋಂ ನಿವಾಸಿಗಳು ಈ ವಿವಾಹಮಹೋತ್ಸವಕ್ಕೆ ಸಾಕ್ಷಿಗಳಾದರು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದವರು ಸುಗ್ರಾಸ ಭೋಜನದ ವ್ಯವಸ್ಥೆ ಮಾಡಿದ್ದರೆ, ಕೃಷ್ಣಮಠದವರು ಪೆಂಡಾಲ್ ಹಾಕಿಸಿದ್ದರು.
ಅನಾಥಾಲಯಗಳಿಗೆ ಹೋಗಿ ಮದುವೆಯಾಗುವುದು, ಅಂತರ್ಜಾತೀಯ ವಿವಾಹ ಇತ್ಯಾದಿಗಳೇ ದೊಡ್ಡ ಸುದ್ದಿಯಾಗುತ್ತಿದ್ದ ದಿನಗಳು ಸರಿದು ಇದೀಗ ಸ್ಟೇಟ್ಹೋಂಗಳಿಗೆ ವಧುಗಳಿಗೆ ತಡಕಾಡುವ ಕಾಲ ಬಂದಿದೆ. ವಧುಗಳನ್ನು ವಿಚಾರಿಸಿ ದಿನವಹಿ ಸರ್ವೇ ಸಾಧಾರಣ 5- 6 ದೂರವಾಣಿ ಕರೆಗಳು ಸ್ಟೇಟ್ಹೋಂಗೆ ಬರುತ್ತಿವೆ. ಅವುಗಳಲ್ಲಿ ಬ್ರಾಹ್ಮಣ ಯುವಕರ ಕರೆಗಳೂ ಇರುತ್ತವೆ. ಹುಡುಗಿಯರನ್ನು ಕೇಳಿಕೊಂಡುಬಂದವರಿಗೆ ತಮ್ಮ ಮೇಲಧಿಕಾರಿಗಳ ಸಮ್ಮತಿ ಪಡೆದು, ರಕ್ತ ಪರೀಕ್ಷೆ ಇತ್ಯಾದಿಗಳನ್ನು ನೆರವೇರಿಸಿದ ಬಳಿಕವಷ್ಟೇ ವಿವಾಹ ನೋಂದಣಿ ಮಾಡಿಸಿ ಅಧಿಕೃತವಾಗಿ ವರನಿಗೊಪ್ಪಿಸಲಾಗುತ್ತದೆ. ಈ ರೀತಿ ಮದುವೆಯಾಗುವವರಿಗೆ ತಲಾ 20 ಸಾವಿರ ನಗದು, ವಧುವಿಗೆ ತಾಳಿ, ಸೀರೆ, ವರನಿಗೆ ಪ್ಯಾಂಟ್-ಶರ್ಟ್ ನೀಡಲಾಗುವುದು. ಸ್ಟೇಟ್ಹೋಂನಲ್ಲೇ ಮದುವೆಯಾಗುವುದಿದ್ದರೆ ದಾನಿಗಳ ಸಹಕಾರದಿಂದ ಯಥೋಚಿತ ವಿವಾಹ ಸಮಾರಂಭ ಸಂಘಟಿಸಲಾಗುವುದು ಎಂದು ಸ್ಟೇಟ್ಹೋಂನ ಸೂಪರಿಂಟೆಂಡೆಂಟ್ ಕುಸುಮಾ ಹೇಳಿದರು.

(ಸಂಯುಕ್ತ ಕರ್ನಾಟಕ, ಮಾ. 31, 2008)

ಉಡುಪಿ ನಗರಕ್ಕೊಂದೇ ಪಾರ್ಕ್- ಅದೇ ಭುಜಂಗ ಪಾರ್ಕ್


ಬೆಳೆಯುತ್ತಿರುವ ನಗರ ಉಡುಪಿಯಲ್ಲಿ ಆರಾಮದಾಯಕ ವಿಹಾರ ತಾಣ ಕಡಿಮೆ. ಆಧ್ಯಾತ್ಮಿಕತೆಯ ಒಲವುಳ್ಳವರು ಶ್ರೀಕೃಷ್ಣ ಮಠಕ್ಕೆ ಹೋಗಬೇಕು. ನೈಸರ್ಗಿಕ ಆಕರ್ಷಣೆಯುಳ್ಳವರು ದೂರದ ಮಲ್ಪೆ ಅಥವಾ ಕಾಪು ಕಡಲತೀರಕ್ಕೆ ತೆರಳಬೇಕು. ಪ್ರಕೃತಿಯೊಂದಿಗೆ ಸಮ್ಮಿಳಿತವಾಗಿ ಕೊಂಚ ಹೊತ್ತು ಆರಾಮದಾಯಕ ವೇಳೆ ಕಳೆಯಲು ಉಡುಪಿಯಲ್ಲಿ ಅವಕಾಶಗಳು ಕಡಿಮೆ. ಆದರೆ, ಇಲ್ಲವೇ ಇಲ್ಲವೆಂದಲ್ಲ; ಇದೆ. ಅದೇ ಭುಜಂಗ ಪಾರ್ಕ್. ನಗರದ ಹೃದಯ ಭಾಗದಲ್ಲಿರುವ ಅಜ್ಜರಕಾಡು ಜಿಲ್ಲಾ ಕೇಂದ್ರ ಕ್ರೀಡಾಂಗಣ ಬಳಿ ಸದ್ರಿ ಪಾರ್ಕ್ ಇದೆ.
ಭುಜಂಗ ಪಾರ್ಕ್ ಸುಮಾರು 9 ಎಕರೆ ವಿಸ್ತೀರ್ಣ ಹೊಂದಿದೆ. ಅಲ್ಲೇ ಸನಿಹದಲ್ಲಿ ಗಾಂಧಿಕಟ್ಟೆ, ಮುನಿಯಾಲು ಆಯುರ್ವೇದ ಕಾಲೇಜಿನವರ ಆಯುರ್ವೇದ ವನ, ಅದಕ್ಕೆ ಹೊಂದಿಕೊಂಡಂತೆ ಪಾರ್ಕ್. ಎಲ್ಲವೂ ಒಟ್ಟಾಗಿ ಭುಜಂಗ ಪಾರ್ಕ್ ಎಂದೇ ಜನಜನಿತ.
ಸಂಗೀತ ಶಿಕ್ಷಕರಾಗಿದ್ದ ಭುಜಂಗರಾಯರ ಸ್ಮರಣಾರ್ಥವಾಗಿ ಅವರ ಪುತ್ರ ನಿರ್ಮಿಸಿರುವ ಪಾರ್ಕ್ ಭುಜಂಗ ಪಾರ್ಕ್ ಎಂದೇ ಹೆಸರಾಯಿತು. ಇದೀಗ ಅಲ್ಲಿ ಕೊಂಚಮಟ್ಟಿನ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಶ್ರಮಿಸಲಾಗುತ್ತಿದೆ. ಪಾರ್ಕ್ ಅಭಿವೃದ್ಧಿಗಾಗಿ ಸ್ಥಳೀಯರನ್ನೊಳಗೊಂಡ ಸಮಿತಿಯೊಂದಿದೆ. ಪಾರ್ಕನ್ನು ಅಭಿವೃದ್ಧಿಪಡಿಸಲು ಸಮಿತಿ ಶ್ರಮಿಸುತ್ತಿದೆ.
ಇದೀಗ ವಿವಿಧ ಜಾತಿಯ ಹೂವಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯ, ಕುಡಿಯುವ ನೀರು ಇತ್ಯಾದಿ ವ್ಯವಸ್ಥೆ ಇದೆ.
ಈ ಪಾರ್ಕಿಗೆ ಹೊಂದಿಕೊಂಡಂತಿರುವ ಒಂದಷ್ಟು ಜಾಗವನ್ನು ಮಣಿಪಾಲ ಸಮೀಪದ ಮುನಿಯಾಲು ಆಯುರ್ವೇದ ಕಾಲೇಜಿನವರು ಆಯುರ್ವೇದ ವನವನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ವಿವಿಧ ನಕ್ಷತ್ರ ವನ, ರಾಶಿ ವನ, ನವಗ್ರಹ ವನ ಇತ್ಯಾದಿ ಮಾಡಲಾಗಿದ್ದು, ಅಳಿಯುತ್ತಿರುವ ಸಸ್ಯಗಳಿಗೆ ಕಾಯಕಲ್ಪ ನೀಡಲಾಗಿದೆ. ಭುಜಂಗರಾಯರ ಸಂಗೀತಪ್ರೇಮಕ್ಕೆ ಪೂರಕವಾಗಿ ಆಗಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವುದೂ ಇದೆ.
ಇದೇ ಪಾರ್ಕ್ ಪ್ರದೇಶಕ್ಕೆ ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಬಂದಿದ್ದರು! ಅವರು ಕುಳಿದ ಬಂಡೆಗಲ್ಲೊಂದು ಇಂದಿಗೂ ಇದ್ದು, ಅದನ್ನು ಗಾಂಧಿಕಟ್ಟೆ ಎಂದು ಕರೆಯಲಾಗುತ್ತಿದೆ. ರೇಡಿಯೋ ಟವರ್ ಕೂಡಾ ಇಂದು ಕಾಣಬಹುದು. ಉಡುಪಿಗೆ ಗಾಂಧಿ ಬಂದ ಕುರುಹಾಗಿ ಅವೆಲ್ಲವೂ ಇವೆ.
ಒಟ್ಟು ಭುಜಂಗ ಪಾರ್ಕ್ ಸಾರ್ವಜನಿಕರಿಗೆ ಮುಕ್ತವಾಗಿದೆ. ಮಕ್ಕಳು, ವಯೋವೃದ್ಧರನ್ನು ಸಂಜೆ ವೇಳೆ ಅಲ್ಲಿ ಕಾಣಬಹುದು. ಆದರೆ, ಸಂತಸದ ಸಂಗತಿ ಎಂದರೆ ಇತರ ಪಾರ್ಕುಗಳಂತೆ ಇಲ್ಲಿ ಪ್ರೇಮಿಗಳ ಹಾವಳಿ ಇಲ್ಲ!
ಭುಜಂಗ ಪಾರ್ಕ್ ಜೊತೆಗೆ ಪಾರ್ಕ್ ಎಂದು ಹೇಳಿಕೊಳ್ಳಬಹುದಾದ ನಾಯರ್ಕೆರೆ ಪಾರ್ಕ್, ಮಣಿಪಾಲದಲ್ಲಿ ಇದೀಗ ಅಭಿವೃದ್ಧಿಪಡಿಸಲಾಗುತ್ತಿರುವ ಪೀಕಾಕ್ ಪಾಯಿಂಟ್ ಇತ್ಯಾದಿಗಳಿವೆ. ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದ ಮಣಿಪಾಲ ಪೈ ಬಂಧುಗಳ ಒಡೆತನದಲ್ಲಿರುವ ಖಾಸಗಿ ಪಾರ್ಕುಗಳು ಮಣಿಪಾಲದ ತುಂಬೆಲ್ಲಾ ಇವೆ. ಅವು `ನಾಯಿ ಮೊಲೆಯಲ್ಲಿ ಹಾಲಿದ್ದಂತೆ' ಇವೆ! .

(ಸಂಯುಕ್ತ ಕರ್ನಾಟಕ: ಮಾ. 15, 2008)