ಅಕ್ಟೋಬರ್ 3, 2010

ಕುಡುಬಿಯರ ವಿಶಿಷ್ಟ ಹೋಳಿ

ಗೋವಾ ಮೂಲದ, ಕುಡುಬಿ ಜನಾಂಗದವರ ಹೋಳಿ ಹಬ್ಬ ಆಚರಣೆಯಲ್ಲಿ ಅವರದೇ ಆದ ವೈಶಿಷ್ಟ್ಯವಿದೆ. ಅವರು ಹೋಳಿಯನ್ನು ತಮ್ಮದೇ ಆದ ರೀತಿಯಲ್ಲಿ ತಲೆತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಜಾನಪದ ಸೊಗಡಿದೆ, ಅವರದ್ದೇ ಆದ ವಿಧಿ- ವಿಧಾನಗಳಿವೆ.
ಉಡುಪಿ ಮತ್ತು ದ. ಕ. ಜಿಲ್ಲೆಗಳ ಕೆಲವೆಡೆಗಳಲ್ಲಿ ಕುಡುಬಿಯರು ವಾಸವಾಗಿದ್ದಾರೆ. ಅವರಲ್ಲಿ ಎರಡು ಪಂಗಡಗಳಿವೆ. ಅವರಾಡುವ ಭಾಷೆಯಲ್ಲೂ ಕೊಂಚ ವ್ಯತ್ಯಾಸ ಉಂಟು. ಬ್ರಹ್ಮಾವರ ಸಮೀಪದ ಸುರಾಲು, ಹೆಬ್ರಿ ಪರಿಸರದಲ್ಲಿ ಕುಡುಬಿ ಜನಾಂಗದವರು ಇದ್ದಾರೆ. ಆದರೆ, ಕೊಡಿಯಾಲ ಕುಡುಬಿಯರೆಂದು ಕರೆಯಲ್ಪಡುವ ದ. ಕ. ಜಿಲ್ಲೆಯ ಮೂಡುಬಿದಿರೆ ಪರಿಸರದ ಅಶ್ವತ್ಥಪುರ, ವಂಟಿಮಾರು, ಕೊಲತ್ತಾರು, ಕೊಂಪದವು, ಎಡಪದವು, ಮುಚ್ಚೂರು, ಮಂಜನಬೈಲು, ಬಜ್ಪೆ ಸಮೀಪದ ಕುಡುಬಿಪದವು ಮೊದಲಾದ ಕಡೆಗಳಲ್ಲಿ ವಾಸವಾಗಿರುವ ಕುಡಿಬಿಯರ ಹೋಳಿ ಆಚರಣೆಗಿಂತ ಸೂರಾಲು ಪರಿಸರದ ಕುಡುಬಿಯರ ಹೋಳಿ ಆಚರಣೆಯಲ್ಲಿ ಕೊಂಚ ವ್ಯತ್ಯಾಸವಿದೆ.
ಪೋರ್ಚುಗೀಸರ ಉಪಟಳ ತಾಳಲಾರದೇ ಗೋವಾದಿಂದ ವಲಸೆ ಬಂದ ಕುಡುಬಿ ಜನಾಂಗ ಕೃಷಿಯನ್ನೇ ನಂಬಿದವರು. ಸಾಹಸಿಗರೂ, ನಂಬಿಗಸ್ಥರೂ ಆಗಿರುವ ಈ ಜನಾಂಗ ಆರಂಭದಲ್ಲಿ ಬಾರಕೂರು ಪ್ರದೇಶದಲ್ಲಿ ನೆಲೆಯಾಯಿತು. ಅಂದು ಸೂರಾಲು ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಸುರೇಂದ್ರ ತೋಳಾರ್ ಎಂಬಾತ ವಲಸೆ ಕುಡುಬಿ ಜನಾಂಗದವರಿಗೆ ಆಶ್ರಯ ನೀಡಿದ. ಬಳಿಕ ಆ ಜನಾಂಗ ಮಂಗಳೂರು ಕಡೆಗೆ ವಲಸೆಹೋಯಿತು. ಮಂಗಳೂರು ಕಡೆಗೆ ತೆರಳಿದ ಕುಡುಬಿಯರು `ಕೊಡಿಯಾಲ ಕುಡುಬಿ' ಎಂದು ಕರೆಯಲ್ಪಟ್ಟು, ಗೌಡ ಉಪನಾಮ ಹೊಂದಿದರು. ಸೂರಾಲು ಪ್ರದೇಶದ ಕುಡುಬಿಯರಿಗೆ ನಾಯ್ಕ ಎಂಬ ಉಪನಾಮವಿದೆ. ಇವರೀರ್ವರ ಭಾಷೆ ಕೊಂಕಣಿಯನ್ನು ಹೋಲುವ ಕುಡುಬಿ ಭಾಷೆಯಾಗಿದ್ದರೂ ಸ್ವಲ್ಪ ವ್ಯತ್ಯಾಸವಿದೆ.
ಹೋಳಿಹಬ್ಬವನ್ನು 5 ದಿನಗಳ ಪರ್ಯಂತ ವಿಶಿಷ್ಟವಾಗಿ ಆಚರಿಸುವ ಈ ಜನಾಂಗ ಅದಕ್ಕಾಗಿ ಹೋಳಿ ಹುಣ್ಣಿಮೆಯ ಮುಂಚಿನ ಏಕಾದಶಿಯಿಂದಲೇ ಸಿದ್ಧತೆ ನಡೆಸುತ್ತಾರೆ. ಕುಡುಬಿ ಜನಾಂಗದ ಪುರುಷರು ಆಬಾಲ ವೃದ್ಧರಾದಿಯಾಗಿ ಸರ್ವರೂ ಅದರಲ್ಲಿ ಭಾಗವಹಿಸುತ್ತಾರೆ. ಹೆಂಗಳೆಯರ ವೇಷ ತೊಡುತ್ತಾರೆ. ತಲೆಗೆ ಮುಂಡಾಸು, ಅಬ್ಬಲಿಗೆ (ಕನಕಾಂಬರ) ಹೂ ದಂಡು, `ಹಟ್ಟಿಮುದ್ದ' ಎಂಬ ಹಕ್ಕಿಯ ಗರಿ (ಇದು ಕೊಡಿಯಾಲ ಕುಡುಬಿಯರಲ್ಲಿ ಇಲ್ಲ) ತೊಡುತ್ತಾರೆ. ಗುಮ್ಟಾ ಎಂಬ ಉಡದ ಚರ್ಮ ಬಿಗಿದ ಘಟವನ್ನು ಹೋಲುವ ಮಡಕೆಯ ವಿಶಿಷ್ಟ ವಾದನವನ್ನು ನುಡಿಸಿ ರಾಮಾಯಣ ಕಥೆ ಹೇಳುತ್ತಾರೆ. ಜೊತೆಗೆ ವಿಶಿಷ್ಟ ಹೆಜ್ಜೆಹಾಕುತ್ತಾರೆ. ತಮಗೆ ಆಸರೆ ನೀಡಿದ ಸುರೇಂದ್ರ ತೋಳಾರ್ನನ್ನು ಸ್ಮರಿಸುತ್ತಾರೆ.
ಸೂರಾಲು ಕುಡುಬಿಯರ ಆರಾಧ್ಯ ದೈವ ಮಲ್ಲಿಕಾರ್ಜುನ ಅಥವಾ ಮಹಾಲಿಂಗೇಶ್ವರ ದೇವಳದಲ್ಲಿ ಪ್ರಥಮ ಗುಮ್ಟಾ ನರ್ತನ ಮಾಡಿ, ಬಳಿಕ ತಮ್ಮ ಸಮುದಾಯದ `ಗುರಿಕಾರ'ನ ಮನೆಯಲ್ಲಿ ಕುಣಿಯುತ್ತಾರೆ. ತಮ್ಮ ಸಮುದಾಯ ಹಾಗೂ ಆಹ್ವಾನಿತರ ಮನೆಗಳಿಗೆ ತೆರಳಿ ನರ್ತಿಸುತ್ತಾರೆ. ಕೋಲಾಟ ಕುಣಿಯುತ್ತಾರೆ. ಹುಣ್ಣಿಮೆಯಂದು ಹೋಳಿ ಆಚರಿಸಿ, ಮಾರಿ ಓಡಿಸಿ, ಬೆಂಕಿಹಾಯುತ್ತಾರೆ. ಈ ದಿನಗಳಲ್ಲಿ ಸಸ್ಯಾಹಾರಿಗಳಾಗಿರುವ ಅವರು, ಹೋಳಿ ಹಬ್ಬದಾಚರಣೆ ಬಳಿಕ ಕಾಡುಬೇಟೆ ನಡೆಸುತ್ತಾರೆ. ಇದು ವಾಡಿಕೆ.
ಈ ಪದ್ಧತಿಯನ್ನು ಈಗೀಗ ಸುಶಿಕ್ಷಿತರಾಗುತ್ತಿರುವ ವಿದ್ಯಾವಂತರೂ ಅನುಸರಿಸುತ್ತಿದ್ದಾರೆ. ಇದು ಮೆಚ್ಚಲೇಬೇಕಾದ ಸಂಗತಿ

(ಸಂಯುಕ್ತ ಕರ್ನಾಟಕ: ಮಾ. 11. 2009)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ