ಅಕ್ಟೋಬರ್ 3, 2010

ಇಷ್ಟ ಸಾಧನೆಗಾಗಿ ಬರಿ ನೆಲದಲ್ಲಿ ಊಟ !

ಕಷ್ಟ ನಿವಾರಣೆಯಾಗಿ, ಸುಖ ಸಿಗುತ್ತದೆ ಎಂದಾದರೆ ಮಾನವ ಏನೂ ಮಾಡಲು ಸಿದ್ಧ. ಅದರಲ್ಲಿ ನಾಚಿಗೆ, ದಾಕ್ಷಿಣ್ಯ ಇಲ್ಲ; ಬಡವ ಬಲ್ಲಿದನೆಂಬ ಬೇಧವೂ ಇಲ್ಲ. ಅಂಥ ಒಂದು ವಿಶಿಷ್ಟ ಪದ್ಧತಿ ಉಡುಪಿಯಲ್ಲಿ ಆಚರಣೆಯಲ್ಲಿದೆ. ಅದೇ ಬರಿ ನೆಲದಲ್ಲಿ ಭೋಜನ ಕ್ರಮ!
ಊಟಕ್ಕೆ ಕುಳಿತುಕೊಳ್ಳುವ ಸ್ಥಳಶುದ್ಧಿ ಮಾಡಿ, ಎಲೆಯನ್ನು ಬಳಸದೇ ಬರಿ ನೆಲದಲ್ಲಿ ಎಲೆಯ ಮೇಲೆ ಬಡಿಸುವ ಎಲ್ಲಾ ಪರಿಕರಗಳನ್ನು ಬಡಿಸಲಾಗುತ್ತದೆ. ಯಾವ ಮುಜುಗರವೂ ಇಲ್ಲದೇ ಈ ಕ್ರಮದಲ್ಲಿ ಊಟ ಮಾಡುವವರು ಸುಗ್ರಾಸ ಭೋಜನ ಸವಿಯುತ್ತಾರೆ. ಶ್ರಾವಣ ಮಾಸದ ಶನಿವಾರಗಳಂದು ಈ ರೀತಿ ಊಟ ಮಾಡುವವರ ಸಂಖ್ಯೆ ಅಧಿಕವಾಗಿರುತ್ತದೆ. ಈ ಪದ್ಧತಿ ಎಂದು ಆರಂಭವಾಯಿತೆಂದು ಗೊತ್ತಿಲ್ಲ. ಇಂದಿಗೂ ಅದು ಚಾಲ್ತಿಯಲ್ಲಿದೆ. ಈ ಕ್ರಮದಲ್ಲಿ ಊಟ ಮಾಡಿ ತಮ್ಮ ಅರಿಕೆಯನ್ನು ದೇವರ ಸನ್ನಿಧಿಯಲ್ಲಿ ಹರಕೆ ಒಪ್ಪಿಸಿ ಕೃತಾರ್ಥರಾದವರು ನೂರಾರು ಮಂದಿ. ಅಲ್ಲಿ ಜಾತಿಯ ಅಡ್ಡಗೋಡೆಯಿಲ್ಲ, ಬಡವ- ಸಿರಿವಂತನೆಂಬ ಅಂತರವಿಲ್ಲ.
ಉಡುಪಿ, ಸಾಧಕರಿಗೆ ಸಾಧನಾಸ್ಥಳ. ಲೋಕಗುರು ಆಚಾರ್ಯ ಮಧ್ವರ ತಪೋಭೂಮಿಯೂ ಆಗಿರುವ ಇಲ್ಲಿ, ಕಷ್ಟ ನಿವಾರಿಸುವ ಅನಂತೇಶ್ವರ ದೇವರ ದಿವ್ಯ ಸನ್ನಿಧಾನ ಭಕ್ತರಿಗೆ ಆಪ್ಯಾಯಮಾನವಾಗಿದೆ. ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಶ್ರೀಕೃಷ್ಣ ಪ್ರಧಾನ ಆಕರ್ಶಣೆ. ಆತನದು ಬಹು ಸುಂದರ ರೂಪ. ಅಷ್ಟಮಠದ ಯತಿಗಳು ಪ್ರತಿದಿನವೂ ವಿನೂತನ ಅಲಂಕಾರ ಮಾಡಿ ಪೂಜಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಭಾವೀಸಮೀರ ವಾದಿರಾಜ ಗುರು ಸಾರ್ವಭೌಮರು ಪ್ರತಿಷ್ಠಾಪಿಸಿದ ಮುಖ್ಯಪ್ರಾಣ ದೇವರು, ರಥಬೀದಿಯಲ್ಲಿ ಕಂಗೊಳಿಸುವ ಪ್ರಾಚೀನವಾದ ಚಂದ್ರಮೌಳೀಶ್ವರ ದೇವಸ್ಥಾನ, ಶ್ರೀಕೃಷ್ಣಮಠದ ಒಳಭಾಗದಲ್ಲಿರುವ ನಿರ್ಮಲ ಮಧ್ವ ಸರೋವರ, ಭೋಜನ ಶಾಲೆಯ ಮುಖ್ಯಪ್ರಾಣ ದೇವರು ಭಕ್ತಿಯ ಜಾಗೃತಿಯನ್ನು ನೀಡುತ್ತವೆ.
ಉಡುಪಿಯ ಶ್ರೀಕೃಷ್ಣ ಅನ್ನಬ್ರಹ್ಮನೆಂದೇ ಸುವಿಖ್ಯಾತ. ಇಲ್ಲಿ ನಿತ್ಯಾನ್ನದಾನ ಪುರಾತನದಿಂದ ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ. ಮಠ ಅತ್ಯಂತ ವಿಶಿಷ್ಟವಾದ ಪ್ರದೇಶ ಭೋಜನಶಾಲೆ ಹೊಂದಿದೆ. ಅಲ್ಲಿ ಮುಖ್ಯಪ್ರಾಣದೇವರ ದಿವ್ಯ ಸನ್ನಿಧಾನವೂ ಇದೆ. ಬುದ್ಧಿ- ಬಲ- ಯಶ- ಧೈರ್ಯ- ನಿರ್ಭಯತ್ವ- ಆರೋಗ್ಯ- ಜಾಢ್ಯ ನಿವಾರಣೆ- ವಾಕ್ಪಟುತ್ವಗಳಿಗಾಗಿ ಭಕ್ತರು ಈ ಸನ್ನಿಧಾನದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಾರೆ. ಮುಖ್ಯಪ್ರಾಣ ದೇವರ ಪ್ರಸನ್ನತೆಗಾಗಿ ನೆಲದಲ್ಲಿ ಊಟವನ್ನು ಮಾಡುವ ಸೇವೆ ಇಲ್ಲಿ ಪ್ರಧಾನ. ಶ್ರಾವಣ ಮಾಸದ ಶನಿವಾರಗಳಂದು ನೆಲದ ಊಟಕ್ಕಾಗಿ ಜನರ ಪ್ರವಾಹವೇ ಹರಿದುಬರುತ್ತದೆ.
ಪ್ರಸ್ತುತ ಭೋಜನಶಾಲೆಯ ಮುಖ್ಯಪ್ರಾಣ ವಿಗ್ರಹ ಜೋಡುಟ್ಟೆಯಲ್ಲಿತ್ತು. (ಈಗ ಪರ್ಯಾಯೋತ್ಸವ ಮೆರವಣಿಗೆ ಆರಂಭವಾಗುವ ಸ್ಥಳ) ನಿತ್ಯ ಪೂಜೆಯ ವ್ಯವಸ್ಥೆಗಾಗಿ ಆ ಬಳಿಕ ಕೃಷ್ಣಮಠಕ್ಕೆ ಸ್ಥಳಾಂತರಿಸಲಾಯಿತು. ಸುಮಾರು 100 ವರ್ಷಗಳ ಹಿಂದೆ ಶೀರೂರು ಮಠಾಧೀಶ ಲಕ್ಷ್ಮೀಸಾಗರತೀರ್ಥ ಶ್ರೀಪಾದರು ವಿಗ್ರಹ ಸ್ಥಳಾಂತರ ಮಾಡಿ, ಪ್ರತಿಷ್ಠಾಪಿಸಿದರು. ಕಾರಣೀಕಕ್ಕೆ ಹೆಸರಾದ ಮುಖ್ಯಪ್ರಾಣ ದೇವರ ಅಖಂಡ ಸೇವೆಯಿಂದ ವಿಶೇಷ ಫಲವನ್ನೂ ಪಡೆದರು. ಅಂದಿನಿಂದ ಈ ಸನ್ನಿಧಿಯಲ್ಲಿ ವಿಶೇಷ ಪೂಜೆ, ಸೇವೆಗಳು ಪ್ರಾರಂಭಗೊಂಡವು. ಇಂದಿಗೂ ಇಲ್ಲಿ ಸಲ್ಲಿಸಿದ ಸೇವೆಗಳಿಂದ ಭಕ್ತರು ಕಷ್ಟಗಳನ್ನು ಕಳೆದುಕೊಂಡ ನಿದರ್ಶನಗಳು ಬಹಳಷ್ಟಿವೆ.

(ಸಂಯುಕ್ತ ಕರ್ನಾಟಕ: ಜು. 25, 2009)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ