ಉಡುಪಿ ಎಂದಾಕ್ಷಣ ಶ್ರೀಕೃಷ್ಣನ ನಾಡಲ್ಲಿ ರಥಗಳ ಸಾಲು ಸಾಲು ನಮ್ಮ ಕಣ್ಣಮುಂದೆ ಬಂದು ನಿಲ್ಲುತ್ತವೆ. ರಜತಪೀಠಪುರಾಧಿವಾಸ, ಪೊಡವಿಗೊಡೆಯ ಉಡುಪಿ ಶ್ರೀಕೃಷ್ಣ ಉತ್ಸವಪ್ರಿಯ. ತಿರುಪತಿಯ ವೇಂಕಟೇಶ ಕಾಂಚನಬ್ರಹ್ಮನಾದರೆ, ಪಂಢರಾಪುರ ವಿಠಲ ನಾದಬ್ರಹ್ಮ. ಅನ್ನದಾನದಿಂದ ಸಂತುಷ್ಟಗೊಳ್ಳುವ ಉಡುಪಿ ಶ್ರೀಕೃಷ್ಣನಿಗೆ ಉತ್ಸವ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಉಡುಪಿಯಲ್ಲಿ ನಿತ್ಯೋತ್ಸವ. ವರ್ಷದ ಮಳೆಗಾಲದ ಚಾತುರ್ಮಾಸ್ಯದ ಒಂದಷ್ಟು ಅವಧಿಯನ್ನು ಹೊರತುಪಡಿಸಿ, ಪ್ರತಿದಿನ ಚತುರ್ದಶ ವಿಧದ ಪೂಜೆ ಕೈಗೊಂಬ ಮಧ್ವಕರಾರ್ಚಿತ ಪೂಜಿತ ರುಕ್ಮಿಣೀ ಅರ್ಚಿತ ಶ್ರೀಕೃಷ್ಣನಿಗೆ ಉಳಿದೆಲ್ಲ ದಿನಗಳಲ್ಲೂ ಉತ್ಸವ, ಉತ್ಸವ, ಮಹೋತ್ಸವ.
ಶ್ರೀಕೃಷ್ಣ ಸನ್ನಿಧಿಗೆ ಸಪ್ತರಥ
ದ್ವೈತ ಮತ ಸಂಸ್ಥಾಪನಾಚಾರ್ಯ ಲೋಕಗುರು ಆಚಾರ್ಯ ಮಧ್ವರು 700 ವರ್ಷದ ಹಿಂದೆ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ, ಅಂದಿನ ಹಿಂದು ಮುಂದಿನ ಏಳೇಳು ದಿನಗಳಲ್ಲಿ ವೈಭವದ ಜಾತ್ರೆ ಮಾಡಿ ಅವಭೃಥೋತ್ಸವ ನಡೆಸಿದ್ದರು ಎಂಬುದು ಪ್ರತೀತಿ. ಆ ಬಳಿಕ ಅವರ ಶಿಷ್ಯ ಪರಂಪರೆಯಲ್ಲಿ ಬಂದ ಯತಿಗಳು ಶ್ರೀಕೃಷ್ಣ ಸನ್ನಿಧಿಗೆ ಅನೇಕ ರಥಗಳನ್ನು ಸಮರ್ಪಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಬ್ರಹ್ಮರಥ, ಗರುಡ ರಥ, ಪೂಜಾ ರಥ, ಚಂದ್ರಮಂಡಲ ರಥ, ಬೆಳ್ಳಿರಥ ಹಾಗೂ ಚಿನ್ನದ ರಥಗಳಲ್ಲಿ ಇದುವರೆಗೆ ಆರೂಢನಾಗಿ ರಥಬೀದಿಯಲ್ಲಿ ಪ್ರದಕ್ಷಿಣೆ ಬಂದು ಭಕ್ತರಿಗೆ ಕಂಗೊಳಿಸಿದ್ದಾನೆ. ಇದೀಗ, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕೃಷ್ಣಸನ್ನಿಧಿಗೆ ಸಪ್ತಮ ರಥವನ್ನು ಸಮರ್ಪಿಸುವ ತವಕದಲ್ಲಿದ್ದು, ವಿಶ್ವದಲ್ಲೇ ಅಭೂತಪೂರ್ವವಾದ ನವರತ್ನ ರಥವನ್ನು ನಿರ್ಮಿಸಿ, ಜಾಗತಿಕ ಪರ್ಯಾಯ ಎಂಬ ತಮ್ಮ ದ್ವೈವಾರ್ಷಿಕ ಕೃಷ್ಣಪೂಜಾ ಪರ್ಯಾಯದ ಪರಿಕಲ್ಪನೆಯನ್ನು ಅನ್ವರ್ಥಗೊಳಿಸಿದ್ದಾರೆ, ಸಾಕಾರಗೊಳಿಸಿದ್ದಾರೆ.
ಪರ್ಯಾಯ ಪೀಠಸ್ಥ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಹಾಗೂ ದೇಶದಲ್ಲೇ ಪ್ರಥಮ ಬಾರಿಗೆ ನಿರ್ಮಿಸಲಾದ ನವರತ್ನ ರಥ ಶ್ರೀಕೃಷ್ಣ ಸನ್ನಿಧಿಗೆ 2009ರ ಡಿ. 24ರಂದು ಸಮರ್ಪಣೆ. 25ರಂದು ಶ್ರೀಕೃಷ್ಣಾರ್ಪಣ, 26ರಂದು ನವರತ್ನ ರಥದ ಪ್ರಥಮೋತ್ಸವ, 27ರಿಂದ ಜ. 4ರ ವರೆಗೆ ನವೋತ್ಸವ ನಡೆಯಲಿದೆ.
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಪೂರ್ವ ರಥ 12 ಕಿ. ಗ್ರಾಂ. ಚಿನ್ನ, 18 ಕಿ. ಗ್ರಾಂ. ಬೆಳ್ಳಿ, 500 ಕಿ. ಗ್ರಾಂ. ತಾಮ್ರಗಳನ್ನೊಳಗೊಂಡಿದೆ. 1 ಲಕ್ಷ 25 ಸಾವಿರ ನವರತ್ನ ಹರಳುಗಳನ್ನು ಒಪ್ಪಗೊಳಿಸಲಾಗಿದೆ. ಸಾಂಪ್ರದಾಯಿಕ ಅಷ್ಟಪಟ್ಟಿಯ ಮಂಟಪದ ನಡುವೆ ಶ್ರೀಕೃಷ್ಣನ ರತ್ನಖಚಿತ ಪೀಠ ಕಂಗೊಳಿಸುತ್ತದೆ. ಅಷ್ಟದಳ ಪದ್ಮದ ಹೃದಯ ಮಂಟಪದಲ್ಲಿ ಬಿಂಬನ ಚಿಂತನೆಯನ್ನು ಅದು ಸಾಕಾರಗೊಳಿಸಲಿದೆ. ಮಧುರೈನ ಕುಶಲಕರ್ಮಿಗಳು ಪ್ರಥಮದ್ದಾದ ನವರತ್ನ ರಥವನ್ನು ಸಿದ್ಧಗೊಳಿಸಿದ್ದಾರೆ. ಮರದ ರಥಕ್ಕೆ ತಾಮ್ರ ಹೊದಿಸಿ, ಬಳಿಕ ಬೆಳ್ಳಿ- ಚಿನ್ನದ ಲೇಪನ ಮಾಡಿ, ರತ್ನಗಳನ್ನು ಜೋಡಿಸಲಾಗಿದೆ. ತೋರಣ ಜಾಲರಿಗಳಾಗಿ ಹವಳ ದಂಡೆಗಳು ಸುತ್ತ ತೂಗುತ್ತಿವೆ.
ಬಹುಕೋಟಿ ರೂ. ವೆಚ್ಚದ ಈ ನವರತ್ನ ರಥದ ಹಿಂಬದಿಯಲ್ಲಿ ಆಚಾರ್ಯ ಮಧ್ವರು ಉಪೇಂದ್ರತೀರ್ಥರಿಗೆ ನೀಡಿದ ವಿಠಲನನ್ನು ಹೊತ್ತಿದೆ. ಪೀಠದ ಎದುರುಬದಿ ಗರುಡ- ಹನುಮರಿಂದ ಸೇವ್ಯನಾಗಿ ಶ್ರೀಕೃಷ್ಣ ತೋರಿಬರುವಂತೆ ಪ್ರಭಾವಳಿಯ ರೂಪದಲ್ಲಿ ಗರುಡ- ಹನುಮರನ್ನು ಮೂಡಿಸಲಾಗಿದೆ. ರಥದ ವಿಮಾನಗೋಪುರದಲ್ಲಿ 4 ಬದಿಗಳಲ್ಲಿ ಪ್ರಣವಪ್ರತಿಪಾದ್ಯರಾದ ರಾಮ ಕೃಷ್ಣ ವರಾಹ ನೃಸಿಂಹರು ಸಾದಕರಿಗೆ ವರಾಭಯಪ್ರದರಾಗಿ ಕಂಗೊಳಿಸಿದ್ದಾರೆ. ಆಚಾರ್ಯ ಮಧ್ವರು ತಮ್ಮೆಲ್ಲಾ ಶಿಷ್ಯರಿಗೆ ಈ ನಾಲ್ಕು ರೂಪಗಳ ಪ್ರತಿಮೆಗಳನ್ನೇ ಆರಾಧನೆಗಾಗಿ ನೀಡಿರುವರು. ಹೀಗೆ ರಥವೊಂದರಲ್ಲೇ ಶ್ರೀಕೃಷ್ಣನ ಎಲ್ಲ ರೂಪಗಳ, ಉಡುಪಿಯ ಚರಿತ್ರೆಯ ಪುಟಗಳ ಸ್ಮರಣಾವೈಭವವನ್ನು ಕಾಣುವ ಸೌಭಾಗ್ಯ ಸಾಧಕರಿಗೆ ಸಾಧ್ಯ. ಪೂರ್ಣಪುರುಷ ಪ್ರಮಾಣದ ಈ ರಥ 108 ಇಂಚು ಎತ್ತರ ಹೊಂದಿದೆ. ಹಾಗಾಗಿ ಇದು ಜ್ಞಾನಾನಂದಪೂರ್ಣರಾದ ಆಚಾರ್ಯ ಮಧ್ವರ ಪ್ರತೀಕದಂತಿದ್ದು, ಶ್ರೀಕೃಷ್ಣನ ದಿವ್ಯಮಂಗಲೋತ್ಸವಕ್ಕೆ ಸಾಕ್ಷಿಯಾಗಿದೆ. 42 ಇಂಚು ಬ್ರಹ್ಮಬಾಹು ಪಡೆದ ಈ ರಥ ಆಚಾರ್ಯ ಮಧ್ವರ ತಂತ್ರಕೃತಿ ಪ್ರಣೀತ ದೇವಾಲಯಕ್ಕೆ ಹೇಳಿದ ಕಿಷ್ಕು ಪ್ರಮಾಣ ಹೊಂದಿದ್ದು ಸಣ್ಣ ದೇವಾಲಯದಂತೆ ಕಂಗೊಳಿಸುತ್ತಿದೆ.
ಗುರು ಕನಕರಿಗೆ ಸಮರ್ಪಣೆ
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಆಶ್ರಮ ಗುರುಗಳಾದ ಶ್ರೀ ಸುಜ್ಞಾನೇಂದ್ರರು,ವಿದ್ಯಾಗುರುಗಳಾದ ಶ್ರೀ ವಿದ್ಯಾಮಾನ್ಯರು ಹಾಗೂ ಶಿಕ್ಷಣ ಗುರುಗಳಾದ ಶ್ರೀ ವಿಬುಧೇಶತೀರ್ಥರ ಸಂಸ್ಮರಣೆಗಾಗಿ ರಥ ಸಮರ್ಪಿಸಲಾಗಿದ್ದು,ಕೃಷ್ಣನನೊಲಿಸಿದ ಕನಕದಾಸರ ನೆನಪಿಗಾಗಿ ನವಕನಕ ರತ್ನರಥ ಎಂದು ಹೆಸರಿಸಲಾಗಿದೆ. ಇತಿಹಾಸದಲ್ಲೇ ಅಭೂತಪೂರ್ವವೆನಿಸಿದ ರತ್ನರಥ ಇನ್ನೆಲ್ಲೂ ಕಂಡುಬಂದಿಲ್ಲ- ಕೇಳಿಬಂದಿಲ್ಲ. ಶ್ರೀಕೃಷ್ಣನ ಸೇವೆಯಲ್ಲಿ ನಿರಂತರ ಪಾಲ್ಗೊಳ್ಳುವ ಈ ರಥ ವಜ್ರಕವಚದಂತೆ ಶಾಶ್ವತ ಕಾಣಿಕೆಯಾಗಿದೆ. ಶ್ರೀಕೃಷ್ಣ ಮಠದ ಒಳಗಡೆ ಪ್ರದಕ್ಷಿಣೆ ಬರಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಈ ಬಾರಿಯ ಪುತ್ತಿಗೆ ಪರ್ಯಾಯದ ಸಮಾಪನ ದಿನಗಳಲ್ಲಿ ಮಾತ್ರ ನವರತ್ನ ರಥವನ್ನು ರಥಬೀದಿಯಲ್ಲಿ ಎಳೆಯಲಾಗುವುದು.
ಮನೋರಥದ ಉತ್ಸವ
`ತಂ ಯಥಾ ಯಥಾ ಉಪಾಸತೇ ತಥೈವ ಭವತಿ' ಎಂಬ ಶಾಸ್ತ್ರವಚನದಂತೆ ನಾವು ಏನನ್ನು ಬಯಸುತ್ತೇವೆಯೋ ಅದೇ ಪ್ರಕಾರದಲ್ಲಿ ಭಗವಂತನನ್ನು ನಾವು ಸೇವಿಸಿದಲ್ಲಿ ಅದು ನಮಗೆ ಪ್ರಾಪ್ತವಾಗುತ್ತದೆ. ರಥೋತ್ಸವದಿಂದ ಮನೋರಥ ಪ್ರಾಪ್ತಿಯಾಗುತ್ತದೆ. ನವರತ್ನ ರಥೋತ್ಸವದಿಂದ ನವಚಿಂತಾರತ್ನ ಪ್ರಾಪ್ತಿಯಾಗುತ್ತದೆ ಎಂಬ ನಂಬುಗೆ ಇದೆ.
ಸಂಯುಕ್ತ ಕರ್ನಾಟಕ: 23-12-2009ರಲ್ಲಿ ಪ್ರಕಟ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ