ಜುಲೈ 21, 2010

ಉಡುಪಿ ಯುವಕನ ಕೈಹಿಡಿದ ಜರ್ಮನಿ ಗೃಹಿಣಿ!

ಪ್ರೀತಿ- ಪ್ರೇಮಕ್ಕೆ ಜಾತಿ, ಅಂತಸ್ತು, ದೇಶಕಾಲ ಯಾವುದೂ ಅಡ್ಡಿಯಾಗದು ಎಂಬ ಮಾತಿನೊಂದಿಗೆ ಹರೆಯವೂ ತೊಡಕಾಗದು ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಅದಕ್ಕೆ ಉಡುಪಿಯಲ್ಲಿ ನಡೆದ ಮದುವೆ ಪೂರಕವಾಗಿದೆ. ಜರ್ಮನಿಯ ಗೃಹಿಣಿಯೋರ್ವಳು ಉಡುಪಿ ಯುವಕನನ್ನು ಮೋಹಿಸಿ ಮದುವೆಯಾಗಿದ್ದಾಳೆ. 52ರ ಹರೆಯದ ಗ್ಯಾಬ್ರಿಯಲ್ ಮಾರ್ತಾ ಎಂಬಾಕೆ ಉಡುಪಿ ಬನ್ನಂಜೆ ನಿವಾಸಿ ಪ್ರಾಣೇಶ ಶೇಟ್ ಎಂಬ 38ರ ಯುವಕನ ಕೈಹಿಡಿದಿದ್ದಾಳೆ! ಹಿಂದೂ ಸಂಪ್ರದಾಯ ಪ್ರಕಾರ ಉಡುಪಿ ರಥಬೀದಿಯ ರಾಘವೇಂದ್ರ ಸ್ವಾಮಿ ಮಠದ ಮಂತ್ರಾಲಯ ಸಭಾಂಗಣದಲ್ಲಿ ವಿವಾಹ ಸಮಾರಂಭ ನಡೆದಿದ್ದು, ವಧೂ- ವರರ ಕಡೆಯವರೀರ್ವರೂ ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದರು.
ಜರ್ಮನಿಯಲ್ಲಿ ರೆಸಾರ್ಟ್ವೊಂದರ ಒಡತಿಯಾಗಿರುವ ಗ್ಯಾಬ್ರಿಯಲ್, 2005ರ ಡಿಸೆಂಬರ್ನಲ್ಲಿ ಉಡುಪಿಗಾಗಮಿಸಿದ್ದಳು. ಉಡುಪಿಯಲ್ಲಿ ಪ್ರವಾಸಿಗರ ಮಾಹಿತಿದಾರ (ಟೂರಿಸ್ಟ್ ಗೈಡ್) ಆಗಿರುವ ಪ್ರಾಣೇಶ ಶೇಟ್ನ ಪರಿಚಯವಾಗಿ, ಕ್ರಮೇಣ ಪರಿಚಯ ಪ್ರೇಮಕ್ಕೆ ತಿರುಗಿತು. ಬಳಿಕ 5- 6 ಬಾರಿ ಉಡುಪಿಗಾಗಮಿಸಿದ್ದ ಆಕೆ, ಪ್ರಾಣೇಶನ ಮನೆಗೂ ಬಂದಿದ್ದಳು. ಅವರಿಬ್ಬರೂ ರಿಜಿಸ್ಟರ್ಡ್ ಮದುವೆ ಆಗಿದ್ದರು.
ಆದರೂ, ಹಿಂದೂ ಸಂಪ್ರದಾಯ ಪ್ರಕಾರ ಮದುವೆಯಾಗಬೇಕೆಂಬ ಉತ್ಕಟ ಇಚ್ಛೆ ಈರ್ವರಿಗೂ ಇದ್ದ ಕಾರಣ ರಾಘವೇಂದ್ರ ಮಠದಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಶ್ರೀನಿವಾಸ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಮದುವೆ ನಡೆಸಲಾಯಿತು. ಮದುವೆಗೆ ವಧೂ- ವರರ ಕಡೆಯಿಂದ ತಲಾ ಸುಮಾರು 20- 25 ಮಂದಿ ಆಗಮಿಸಿದ್ದರು. ವರನ ಕಡೆಯವರೇ ವಧುವನ್ನು ಧಾರೆ ಎರೆದುಕೊಡುವ ಸಂಪ್ರದಾಯ ನಡೆಸಿದರು. ಗ್ಯಾಬ್ರಿಯಲ್ ಮಾರ್ತಾ- ಪ್ರಾಣೇಶ ಸತಿ- ಪತಿಯರಾಗಿ ಸಪ್ತಪದಿ ತುಳಿದರು. ವರ ಪ್ರಾಣೇಶನ ತಾಯಿ, ತಂಗಿ, ಭಾವ, ತಮ್ಮ ಸೇರಿದಂತೆ ಸಂಬಂಧಿಗಳು, ಮಿತ್ರರು ಭಾಗವಹಿಸಿದ್ದರು. ಗ್ಯಾಬ್ರಿಯಲ್ ವಿದೇಶಿ ಮಿತ್ರರೂ ಆಗಮಿಸಿದ್ದರು.
ಗ್ಯಾಬ್ರಿಯಲ್ ವಿವಾಹಿತೆಯಾಗಿದ್ದು, ಆಕೆಗೆ 25ರ ಹರೆಯದ ಮಗನೊಬ್ಬನಿದ್ದಾನೆ. ಆದರೆ, ಆಕೆ ಈಗ ವಿಚ್ಛೇದಿತೆ. ಆಕೆಗೆ ಈರ್ವರು ಸಹೋದರಿಯರು ಮತ್ತು ಓರ್ವ ಸೋದರ ಇದ್ದಾರೆ. ಅವಿವಾಹಿತನಾಗಿರುವ ಪ್ರಾಣೇಶ ಶೇಟ್ಗೆ ಓರ್ವ ತಮ್ಮ ಮತ್ತು ಒಬ್ಬಾಕೆ ತಂಗಿ ಇದ್ದಾರೆ. ತಂಗಿಗೆ ಮದುವೆ ಆಗಿದೆ.
ಗ್ಯಾಬ್ರಿಯಲ್ ಪುತ್ರ ಜರ್ಮನಿಯಿಂದ ತಾಯಿಗೆ ಫೋನಾಯಿಸಿ, ಶುಭಾಶಯ ಕೋರಿದ್ದ ಎಂದು ಗ್ಯಾಬ್ರಿಯಲ್ ಮಾರ್ತಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದಳು. ಇನ್ನು ಪ್ರಾಣೇಶನೊಂದಿಗೆ ಬಾಳುವುದಾಗಿ ತಿಳಿಸಿದ ಆಕೆ, 6 ತಿಂಗಳು ಉಡುಪಿಯಲ್ಲಿ ಹಾಗೂ ಇನ್ನುಳಿದ 6 ತಿಂಗಳು ಜರ್ಮನಿಯಲ್ಲಿರುವುದಾಗಿ ತಿಳಿಸಿದಳು. ಪ್ರಾಣೇಶನನ್ನು ಜರ್ಮನಿಗೆ ಕರೆದೊಯ್ಯುವುದಾಗಿ ತಿಳಿಸಲು ಮರೆಯಲಿಲ್ಲ.
ಜರ್ಮನಿ ಗೃಹಿಣಿಯ ಯಾವ ಮೋಹ ಉಡುಪಿಯ ಯುವಕನನ್ನು ಮೋಡಿ ಮಾಡಿತೋ? ಎಂದು ಮದುವೆಗಾಗಮಿಸಿದವರು ತಮ್ಮ ತಮ್ಮಲ್ಲೇ ಗುಸುಗುಡುತ್ತಿದ್ದರು!

(ಸಂಯುಕ್ತ ಕರ್ನಾಟಕ: ಡಿ. 2, 2009)

ಹರಿ- ಹರರಲ್ಲಿ ಬೇಧವಿಲ್ಲವೆಂದಿನಿಪ ಕ್ಷೇತ್ರ: ಕ್ರೋಡಾಶ್ರಮ

              ಶೂಲ ಸುದರ್ಶನ ಸುರುಚಿಂ ಫಾಲೇಂದೂಜ್ವಲ ಕಿರೀಟ ಶೋಭಿತ ಶಿರಸಂ/
               ಪಂಕಜ ಮುಖಕರ ಚರಣಂ ಶ್ರೀ ಶಂಕರ ನಾರಾಯಣಂ ವಂದೇ//

ಉಡುಪಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿ ಕರಾವಳಿ ತೀರ ಸಮೀಪದ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಕ್ರೋಡಾಶ್ರಮ. ಇಂದ್ರಾಳೀ ನದೀ ತೀರದಲ್ಲಿರುವ, ಪಡುದಿಕ್ಕಿನಲ್ಲಿ ಮುನ್ನೂರು ಬ್ರಾಹ್ಮಣ ಕುಲಗಳಿದ್ದ ಪಡುಮನ್ನೂರೆಂಬ ಈ ಕ್ಷೇತ್ರ ಕೊಡವೂರು ಎಂದೇ ಪ್ರಸಿದ್ದವಾಗಿದೆ.
ಹಿಂದೆ ಭೂಲೋಕದ ಜನರಲ್ಲಿ ಕೆಲವರು ವಿಷ್ಣುವನ್ನು, ಇನ್ನೂ ಕೆಲವರು ಶಿವನನ್ನೂ ಪೂಜಿಸುತ್ತಾ ತಮ್ಮ ತಮ್ಮ ದೇವರೇ ಮೇಲೆಂದು ಪರಸ್ಪರ ಕಚ್ಚಾಡುತ್ತಿದ್ದಾಗ, ತ್ಯಾಗಿಯೂ ದೈವಾರಾಧಕನೂ ಆದ ಕ್ರೋಡನೆಂಬ ಮುನಿ ಪುಂಗವ ದ್ವೈತಾದ್ವೈತಗಳ ಉದ್ದೇಶ ಸಾರ್ಥಕವಾಗುವಂತೆ ಶಂಕರ ಹಾಗೂ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಭಕ್ತರಿಗೆ ದರ್ಶನವೀಯುವಂತಾಗಬೇಕು ಎಂದು ತಪಸ್ಸಿಗೆ ಕುಳಿತರು.
ಅದೇ ಸಂದರ್ಭದಲ್ಲಿ ದಾನವರೀರ್ವರು ಶಿವ ಮತ್ತು ವಿಷ್ಣು ಒಂದೇ ರೂಪದಲ್ಲಿ ಬಂದು ಕೊಲ್ಲುವುದಿದ್ದರೆ ನಮಗೆ ಮರಣ ಬರಲಿ ಎಂದು ಶಿವನಿಂದ ವರ ಪಡೆದಿದ್ದರು. ಆ ದಾನವರೀರ್ವರೂ ದೇವಲೋಕಕ್ಕೆ ದಾಳಿ ಮಾಡಿ ದೇವೇಂದ್ರನನ್ನು ಓಡಿಸಿ ದೇವತೆಗಳನ್ನು ಸಂಕಷ್ಟಕ್ಕೀಡುಮಾಡಿದರು. ದೇವತೆಗಳೆಲ್ಲ ಬ್ರಹ್ಮನ ಆಜ್ಞೆಯಂತೆ ಶಂಕರ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಬಂದು ದಾನವರನ್ನು ಸಂಹರಿಸಲು ಪ್ರಾರ್ಥಿಸಿದರು.
ಇತ್ತ, ಕ್ರೋಡ ಮುನಿಯ ಘೋರ ತಪಸ್ಸಿಗೆ ಒಲಿದ ಶಂಕರ-ನಾರಾಯಣರಿಬ್ಬರೂ ಒಂದಾಗಿ ಬಲಭಾಗದಲ್ಲಿ ಶಂಕರನೂ ಎಡಭಾಗದಲ್ಲಿ ನಾರಾಯಣನೂ ಒಟ್ಟಾಗಿ ಕಾಣಿಸಿಕೊಂಡು ತಮ್ಮೊಳಗೆ ಬೇಧವಿಲ್ಲ ಎಂದೂ, ದ್ವೈತಾದ್ವೈತಿಗಳು ಹೊಡೆದಾಡಬಾರದೆಂದು ನುಡಿದು ಮುನಿಯ ಪ್ರಾರ್ಥನೆಯಂತೆ ಶಾಶ್ವತವಾಗಿ ಅಲ್ಲೇ ನೆಲೆ ನಿಂತರು. ಕ್ರೋಡಮುನಿಯ ಉದ್ದೇಶ ಹಾಗೂ ಕಾರ್ಯಗಳು ಜನಕ್ಕೆ ಆದರ್ಶವಾಗಿದ್ದು, ಮುಂದೆ ಈ ಕ್ಷೇತ್ರ `ಕ್ರೋಡಾಶ್ರಮ' ಎಂದು ಪ್ರಸಿದ್ಧಿ ಆಗಲೆಂದು ಹರಸಿದರು.
ಅತ್ತ ದೇವತೆಗಳ ಪ್ರಾರ್ಥನೆಯಂತೆ ಶಂಕರ ನಾರಾಯಣರು ಒಂದಾಗಿ ಒಂದೇ ದೇಹ ಧರಿಸಿ ಆಯುಧ ಪಾಣಿಯಾಗಿ ದಾನವರನ್ನು ಯುದ್ದದಲ್ಲಿ ಸೋಲಿಸಿ ಮೋಕ್ಷ ಕರುಣಿಸಿದರು. ಕ್ರೋಡಾಶ್ರಮದಲ್ಲಿ ಶಂಕರ ನಾರಾಯಣನೊಂದಿಗೆ ಎಲ್ಲ ದೇವತೆಗಳೂ, ಭೂತ ಗಣಗಳೂ ನೆಲೆ ನಿಂತರು. ಎಡಬದಿಯಲ್ಲಿ ದುರ್ಗೆ, ನಂದಿಕೇಶ್ವರ, ಕ್ಷೇತ್ರಪಾಲ, ಬ್ರಹ್ಮಶಾಸ್ತಾರ. ಬಲಬದಿಯಲ್ಲಿ ಗಣಪತಿ, ಮುಖ್ಯಪ್ರಾಣ.
ದೇವಸ್ಥಾನದ ತುಸು ದೂರದಲ್ಲಿ ಬೊಬ್ಬರ್ಯ, ಕಂಗಣಬೆಟ್ಟು ಪಂಜುರ್ಲಿ, ಭಗವತಿ ಮಾರಿಯಮ್ಮ ದೇವಾಲಯ, ಕೆರೆಮಠ- ಕಲ್ಲಮಠ- ಕಂಬಳಕಟ್ಟದ ಮಾಣಿ ದೇವಾಲಯ, ಬೆಳ್ಕೆಳೆ ಮಹಾಲಿಂಗೇಶ್ವರ, ಕಾನಂಗಿ ಮದರಂಗಿ ಬೆಟ್ಟು ರಕ್ತೇಶ್ವರಿ, ವಡಭಾಂಡೇಶ್ವರದ ಬಲರಾಮ, ಮಂಡೆ ಚಾವಡಿ ಮಠ ಮುಂತಾದ ಹತ್ತು ಹಲವು ದೇವಸ್ಥಾನ- ಮಠಗಳಿರುವ ಈ ಕ್ಷೇತ್ರ ನಿಜಕ್ಕೂ ಆಸ್ತಿಕರ ಆಸಕ್ತಿ ಕೆರಳಿಸುತ್ತದೆ.
ಇಲ್ಲಿಯ ದೇವಸ್ಥಾನದ ಗರ್ಭಗುಡಿಯಲ್ಲಿ ಮೂಲಸ್ಥಾನ ದೇವತೆಯಾಗಿ ಆರಾಧಿಸುವ ಶಂಕರ ನಾರಾಯಣ ದೇವರು ಲಿಂಗಾಕಾರದಲ್ಲಿದ್ದು, ಪಾಣಿಪೀಠಕ್ಕಿಂತ ತಗ್ಗಿನಲ್ಲಿ ಒಂದಕ್ಕೊಂದು ಆಲಂಗಿಸಿಕೊಂಡಿದ್ದು, ತಳದಲ್ಲಿ ಎರಡೂ ಲಿಂಗಗಳು ಒಂದೇ ಆಗಿದ್ದು, ಮೇಲಕ್ಕೆ ಎರಡು ಪಾಲಾಗಿದೆ. ಬಲಿ ದೇವತಾಮೂರ್ತಿಯಾಗಿ ಆರಾಧಿಸುವ ಕಂಚಿನ ಶಂಕರ ನಾರಾಯಣ ವಿಗ್ರಹ ಆಕರ್ಷಕವಾಗಿದೆ. ಕೆರೆಕಟ್ಟೆಯ ಮೂಡುಗಣಪತಿ ಇಷ್ಟಾರ್ಥ ಸಿದ್ದಿಗಾಗಿ ನೆಲೆನಿಂತು ತನ್ನ ವಿಶೇಷ ಕಾರಣೀಕದಿಂದ ಪ್ರಸಿದ್ದಿಯಾಗಿದೆ.
ಗುರು ರಾಘವೇಂದ್ರ ರಾಯರ ವೃಂದಾವನ, ಮಲ್ಲಿಕಾರ್ಜುನ ದೇವರು ಹಾಗೂ ನಾಗಬನಗಳಿಂದ ಕೂಡಿದ ಈ ದೇವಸ್ಥಾನದಲ್ಲಿ ಹಿಂದೂಗಳ ಬಹುತೇಕ ಹಬ್ಬ ಹರಿದಿನಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಲಕ್ಷ ದೀಪೋತ್ಸವ, ರಾಯರ ಆರಾಧನೆ, ಶಿವರಾತ್ರಿ, ನವರಾತ್ರಿಗಳ ದಿನಗಳಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಆಕರ್ಷಿಸುತ್ತದೆ.

(ಸಂಯುಕ್ತ ಕರ್ನಾಟಕ: ಜ. 10, 2009)

ಜುಲೈ 15, 2010

ಅಪೂರ್ವ ಸೊಬಗಿನ ಕಟ್ಟಿಗೆ ರಥ

ಉಡುಪಿ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಅಲ್ಲಿನ ಶ್ರೀಕೃಷ್ಣ ಮಠ, ಅಷ್ಟ ಮಠಗಳು. ಮಠದೊಳಗಿನ ಸೊಬಗು, ಕೃಪಾಸಾಗರ ಆಚಾರ್ಯ ಮಧ್ವ ಪ್ರತಿಷ್ಠಾಪಿತ, ರುಕ್ಮಿಣೀ ಕರಾರ್ಚಿತ ಶ್ರೀಕೃಷ್ಣನ ಮೂರ್ತಿ. ಬಾಯಿ ನೀರೂರಿಸುವ ಘಮಘಮಿಸುವ ಊಟ!
ಇವಿಷ್ಟೇ ಅಲ್ಲ. ಉಡುಪಿಯಲ್ಲಿ ಇನ್ನೂ ಇದೆ. ಚತುರ್ದಶ ಭುವನದೊಡೆಯನ ಸಂಭ್ರಮಕ್ಕಾಗಿ ಚಿನ್ನ- ಬೆಳ್ಳಿ ರಥಗಳ ಹೊರತಾಗಿಯೂ ಮೂರು ತೇರುಗಳಿವೆ. ಇವೆಲ್ಲವೂ ಕೃಷ್ಣಮೂರ್ತಿಯನ್ನಿಟ್ಟು ಉತ್ಸವವನ್ನಾಚರಿಸಿ ಸಂಭ್ರಮಿಸಲು. ಆದರೆ, ಉಡುಪಿಯಲ್ಲಿ ಇನ್ನೂ ಒಂದು ರಥವಿದೆ. ಅದೇ ಕಟ್ಟಿಗೆ ರಥ!
ಅನ್ನಬ್ರಹ್ಮ ಎಂದೇ ಕರೆಯಲ್ಪಡುವ ಕೃಷ್ಣ ಸನ್ನಿಧಿಗೆ ಬರುವ ಲಕ್ಷಾಂತರ ಮಂದಿ ಭಕ್ತರ ಅಶನ ಸಮಸ್ಯೆಯನ್ನು ತಣಿಸಿ, ಘಡ್ರಸೋಪೇತವಾದ ಭೋಜನ ನಿರಾತಂಕವಾಗಿ ನಡೆಸಲು ಪೂರಕವಾದ ಉರುವಲು ವ್ಯವಸ್ಥೆಗೆ ಸುಗಮವನ್ನಾಗಿಸಲು ಈ ರಥ! ಸಣ್ಣ ವಿಚಾರವಾದರೂ ಆ ಕುರಿತು ಚಿಂತಿಸಿ, ಅದಕ್ಕೊಂದು ಆಧ್ಯಾತ್ಮಿಕ ಸ್ಪರ್ಷ ನೀಡಿದ ಆ ಮಹೋದಯನಿಗೆ ನಮೋ ನಮ: ಎನ್ನೋಣವೇ?
ಕೃಷ್ಣಮಠದೆದುರಿನ ಮಧ್ವಸರೋವರದ ಪಾರ್ಶ್ವಭಾಗದಲ್ಲಿ ಕಟ್ಟಿಗೆ ರಥದ ಶಾಶ್ವತ ಸ್ಥಾನ. ಅಲ್ಲಿಯೇ ಸಮೀಪ ಅನ್ನಬ್ರಹ್ಮನ ನೈವೇದ್ಯ ಸಿದ್ಧಗೊಳ್ಳುವ ಪಾಕಶಾಲೆ. ಅದಕ್ಕೆ ಹೊಂದಿಕೊಂಡಂತೆ ಕಟ್ಟಿಗೆ ರಥಕ್ಕೊಂದು ನೆಲೆಯನ್ನು ಒದಗಿಸಲಾಗಿದೆ. ನಿರಂತರ ಅನ್ನದಾನಕ್ಕೆ ಉರುವಲು ಸಮಸ್ಯೆಯಾಗದಿರಲಿ ಎಂಬ ಸದಾಶಯದಿಂದ ಕಟ್ಟಿಗೆ ರಥ ನಿರ್ಮಾಣ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು, ಅದನ್ನು ಪರ್ಯಾಯಪೂರ್ವ ವಿಧಿಗಳಲ್ಲಿ ಒಂದಾಗಿಸಿದ್ದಾರೆ. ಈ ಕ್ರಮವನ್ನು ಜಾರಿಗೆ ತಂದವರು ಪ್ರಾಯಶ: ಉಡುಪಿ ಪರ್ಯಾಯ ಮಹೋತ್ಸವಕ್ಕೆ ನಾಡಹಬ್ಬದ ರೂಪಕೊಟ್ಟ ವಾದಿರಾಜ ಸಾರ್ವಭೌಮರೇ ಇರಬೇಕು.
ಪರ್ಯಾಯ ವಹಿಸಿ ಕೃಷ್ಣಪೂಜಾ ದೀಕ್ಷೆ ವಹಿಸಿಕೊಳ್ಳುವ ಅಷ್ಟಮಠಗಳ ಯತಿಗಳು ಕಟ್ಟಿಗೆ ಮುಹೂರ್ತ ಅಂದರೆ, ಕಟ್ಟಿಗೆ ಒಟ್ಟುವ ಕಾರ್ಯವನ್ನು ಮಾಡಲೇಬೇಕು. ಪರ್ಯಾಯಪೂರ್ವ ವಿಧಿಗಳಲ್ಲಿ ಬಾಳೆ ಮುಹೂರ್ತ (ಬಾಳೆಗಿಡ ನೆಡುವುದು) ಪ್ರಥಮದ್ದಾದರೆ, ಕಟ್ಟಿಗೆ ಮುಹೂರ್ತ ಎರಡನೆಯದು. ಪರ್ಯಾಯ ವಹಿಸಿಕೊಳ್ಳುವ ಸ್ವಾಮೀಜಿಯವರು ತಮ್ಮ ಮುಂದಿನ 2 ವರ್ಷಗಳಿಗೆ ಬೇಕಾಗುವಷ್ಟು ಉರುವಲನ್ನು ಸಂಗ್ರಹಿಸಿ, ರಥದ ಮಾದರಿಯಲ್ಲಿ ಒಟ್ಟುಮಾಡುತ್ತಾರೆ. ತಮ್ಮ ಪರ್ಯಾಯ ಕಾಲದಲ್ಲಿ ಒಟ್ಟಿಟ್ಟಿರುವ ಆ ಕಟ್ಟಿಗೆಯನ್ನು ಬಳಸಬಹದು. ಮುಂದಿನ ರಥ ನಿಮರ್ಾಣ ಭಾವೀ ಪರ್ಯಾಯ ಶ್ರೀಗಳಿದ್ದು. ಈ ಚಕ್ರ ಮುಂದುವರಿಯುತ್ತಲೇ ಇರುತ್ತದೆ. ಇದುವರೆಗೆ ಅನೂಚಾನವಾಗಿ ನಡೆದುಬಂದಿದೆ.
ಈಗ ಅನಿಲಾಧಾರಿತ ಅಡುಗೆ ವ್ಯವಸ್ಥೆ ಜಾರಿಗೆ ಬಂದಿದ್ದರೂ ಕಟ್ಟಿಗೆ ಮುಹೂರ್ತ ಕೈಬಿಟ್ಟಿಲ್ಲ. ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಕೃಷ್ಣಮಠ ಪ್ರಾಂಗಣ ಪರಿಸರದಲ್ಲಿ ಕಟ್ಟಿಗೆ ರಥಕ್ಕೊಂದು ಶೋಭೆ ಇದೆ.

(ಸಂಯುಕ್ತ ಕರ್ನಾಟಕ: ನ. 9, 2008)

ಜುಲೈ 13, 2010

ನವರಾತ್ರಿಯಲಿ ಉಡುಪಿ ಕೃಷ್ಣ ಸ್ತ್ರೀವೇಷಧಾರಿ!

ಶಕ್ತಿ ಆರಾಧನೆಗೆ ಪ್ರಶಸ್ತವಾದ ಶರನ್ನವರಾತ್ರಿ ದಿನಗಳಲ್ಲಿ ಉಡುಪಿ ಕೃಷ್ಣನನ್ನು ಕಾಣುವುದೇ ಕಣ್ಣಿಗೆ ಹಬ್ಬ. ಶಾಲಗ್ರಾಮ ಶಿಲೆಯ ಕೃಷ್ಣಮೂರ್ತಿ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಸ್ತ್ರೀವೇಷಧಾರಿ! ಈ ದಿನಗಳಲ್ಲಿ ಕೃಷ್ಣನಿಗೆ ಹೆಣ್ಣುರೂಪದ ಅಲಂಕಾರ ಮಾಡಲಾಗುತ್ತದೆ. ಶಕ್ತಿಗೆ ಸ್ಪೂರ್ತಿಯ ಸೆಲೆಯಾದ ಪುರುಷರೂಪಿ ಭಗವಂತನಿಗೆ ದೇವಿ ಅಲಂಕಾರ ಮಾಡಲಾಗುತ್ತದೆ ಎಂದು ವಿದ್ವಾಂಸ ಗೋಪಾಲಾಚಾರ್ ಅಭಿಪ್ರಾಯಪಡುತ್ತಾರೆ.
ಈ ತೆರನ ಪದ್ಧತಿ ಬಲು ಹಿಂದಿನಿಂದಲೂ ಉಡುಪಿ ಕೃಷ್ಣಮಠದಲ್ಲಿ ಜಾರಿಗೆ ಬಂದಿದೆ. ಭಗವತಿ, ಕೃಷ್ಣನ ತಂಗಿ ಎಂದೇ ವೈಷ್ಣವರು ನಂಬುತ್ತಾರೆ. ಮಾತ್ರವಲ್ಲದೇ ಕಳೆದ ಆಷಾಢ ಏಕಾದಶಿಯಿಂದ ಮುಂದಿನ ಉತ್ಥಾನ ದ್ವಾದಶಿ ವರೆಗೆ ಶಯನದಲ್ಲಿರುವ ಮಹಾವಿಷ್ಣು ಲಕ್ಷ್ಮೀ ಅಂತರ್ಗತನಾಗಿರುತ್ತಾನೆ ಎಂಬ ನಂಬಿಕೆಯೂ ಇದೆ. ಜಗನ್ನಿಯಾಮಕ ಭಗವಂತನನ್ನು ನಿದ್ರೆಯಿಂದೆಬ್ಬಿಸಲು ಲಕ್ಷ್ಮೀ ಒಲುಮೆ ಗಳಿಸಿಕೊಳ್ಳುವುದು ಅಗತ್ಯ. ಹಾಗಾಗಿ ರಮಾಂತರ್ಗತ ರಮಾರಮಣ ಶ್ರೀಕೃಷ್ಣನಿಗೆ ಹೆಣ್ಣುರೂಪ. ದೇವಿ, ಕೃಷ್ಣನ ಅನುಜೆ ಎಂದು ತಿಳಿಹೇಳಲೂ ಈ ರೂಪ. ಕೃಷ್ಣನ ವಿಶೇಷ ಸನ್ನಿಧಾನದಲ್ಲಿ ಭಾಮೆಯನ್ನು ಕಂಡು ಪುಳಕಗೊಳ್ಳಲು ಇದು ಸುಸಂದರ್ಭ. ಪರಶುರಾಮ ಸೃಷ್ಟಿಯಲ್ಲಿ ಶಕ್ತಿ ಆರಾಧನೆ ವಿಶೇಷವಾಗಿರುವ ಹಿನ್ನೆಲೆಯೂ ಕೃಷ್ಣನ ಸ್ತ್ರೀವೇಷಕ್ಕೆ ಪೂರಕ.
ಮಾತ್ರವಲ್ಲದೇ ಕೃಷ್ಣ ತ್ರಿಗುಣ ಸ್ವರೂಪಿ. ಸತ್ವ, ರಜ ಮತ್ತು ತಮೋಗುಣಗಳಿಗೆ ಒಡೆಯ. ತ್ರಿಗುಣಗಳಿಗೆ ಅನುಕ್ರಮವಾಗಿ ಶ್ರೀ, ಭೂ ಮತ್ತು ದುರ್ಗೆ ಅಧಿದೇವತೆಗಳು. ಅದನ್ನೇ ಪುರಂದರದಾಸರು `ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲಿ ದುರ್ಗಾದೇವಿ, ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ ಮರಳು ಮಾಡಿಕೊಂಡೆಯಲ್ಲ.... ಮಾಯಾದೇವಿಯೇ' ಎಂದು ಭಾಮೆರೂಪಿ ಕೃಷ್ಣನನ್ನು ಸ್ತುತಿಸಿದ್ದು!
ವಾದಿರಾಜರ ಕಾಲದಿಂದಲೂ ಉಡುಪಿ ಕೃಷ್ಣನಿಗೆ ನವರಾತ್ರಿ ದಿನಗಳಲ್ಲಿ ಸ್ತ್ರೀರೂಪಿ ಅಲಂಕಾರ ಹಾಗೂ ಪ್ರತೀ ಶುಕ್ರವಾರಗಳಂದು ಮೋಹಿನಿ ರೂಪದಲ್ಲಿ ಅಲಂಕರಿಸುವ ವಾಡಿಕೆ ಇತ್ತು. ಅವರು ತಮ್ಮ ಕೀರ್ತನೆಯೊಂದರಲ್ಲಿ ` ಲಾವಣ್ಯದಿಂದ ಮೆರೆವ ನಿಜಸತಿಯ ಹೆಣ್ಣು ರೂಪದಿ ಕಾಂಬ ಮಹಾಲಕುಮಿ ಇವಗಿನ್ಯಾರು ಯಾಕೆ' ಎಂದು ಕೃಷ್ಣನ ಹೆಣ್ಣು ರೂಪವನ್ನು ಕಂಡು ಬೆರಗಾಗಿ ಸ್ವತ: ಹೆಣ್ಣಾಗಿರುವ ಕೃಷ್ಣನಿಗೆ ಅನ್ಯ ಹೆಣ್ಣುಗಳು ಯಾಕೆ ಮತ್ತು ಕೃಷ್ಣನಿಗಿಂತ ಮಿಗಿಲಾದ ಹೆಣ್ಣುಗಳು ಯಾರು ಎಂದು ಪ್ರಶ್ನಿಸಿದ್ದಾರೆ.
ಅಂತೂ ನವರಾತ್ರಿಯ ಈ ದಿನಗಳಲ್ಲಿ ಕೃಷ್ಣನನ್ನು ಸತ್ಯಭಾಮೆ, ಮೋಹಿನಿ, ಪದ್ಮಾವತಿ, ವೀಣಾಪಾಣಿ... ಹೀಗೆ ನವವಿಧ ರೂಪಗಳಿಂದ ಕಾಣುವ ಸುಯೋಗ.

(ಸಂಯುಕ್ತ ಕರ್ನಾಟಕ: ಅ. 6, 2008)