ಶಕ್ತಿ ಆರಾಧನೆಗೆ ಪ್ರಶಸ್ತವಾದ ಶರನ್ನವರಾತ್ರಿ ದಿನಗಳಲ್ಲಿ ಉಡುಪಿ ಕೃಷ್ಣನನ್ನು ಕಾಣುವುದೇ ಕಣ್ಣಿಗೆ ಹಬ್ಬ. ಶಾಲಗ್ರಾಮ ಶಿಲೆಯ ಕೃಷ್ಣಮೂರ್ತಿ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಸ್ತ್ರೀವೇಷಧಾರಿ! ಈ ದಿನಗಳಲ್ಲಿ ಕೃಷ್ಣನಿಗೆ ಹೆಣ್ಣುರೂಪದ ಅಲಂಕಾರ ಮಾಡಲಾಗುತ್ತದೆ. ಶಕ್ತಿಗೆ ಸ್ಪೂರ್ತಿಯ ಸೆಲೆಯಾದ ಪುರುಷರೂಪಿ ಭಗವಂತನಿಗೆ ದೇವಿ ಅಲಂಕಾರ ಮಾಡಲಾಗುತ್ತದೆ ಎಂದು ವಿದ್ವಾಂಸ ಗೋಪಾಲಾಚಾರ್ ಅಭಿಪ್ರಾಯಪಡುತ್ತಾರೆ. ಈ ತೆರನ ಪದ್ಧತಿ ಬಲು ಹಿಂದಿನಿಂದಲೂ ಉಡುಪಿ ಕೃಷ್ಣಮಠದಲ್ಲಿ ಜಾರಿಗೆ ಬಂದಿದೆ. ಭಗವತಿ, ಕೃಷ್ಣನ ತಂಗಿ ಎಂದೇ ವೈಷ್ಣವರು ನಂಬುತ್ತಾರೆ. ಮಾತ್ರವಲ್ಲದೇ ಕಳೆದ ಆಷಾಢ ಏಕಾದಶಿಯಿಂದ ಮುಂದಿನ ಉತ್ಥಾನ ದ್ವಾದಶಿ ವರೆಗೆ ಶಯನದಲ್ಲಿರುವ ಮಹಾವಿಷ್ಣು ಲಕ್ಷ್ಮೀ ಅಂತರ್ಗತನಾಗಿರುತ್ತಾನೆ ಎಂಬ ನಂಬಿಕೆಯೂ ಇದೆ. ಜಗನ್ನಿಯಾಮಕ ಭಗವಂತನನ್ನು ನಿದ್ರೆಯಿಂದೆಬ್ಬಿಸಲು ಲಕ್ಷ್ಮೀ ಒಲುಮೆ ಗಳಿಸಿಕೊಳ್ಳುವುದು ಅಗತ್ಯ. ಹಾಗಾಗಿ ರಮಾಂತರ್ಗತ ರಮಾರಮಣ ಶ್ರೀಕೃಷ್ಣನಿಗೆ ಹೆಣ್ಣುರೂಪ. ದೇವಿ, ಕೃಷ್ಣನ ಅನುಜೆ ಎಂದು ತಿಳಿಹೇಳಲೂ ಈ ರೂಪ. ಕೃಷ್ಣನ ವಿಶೇಷ ಸನ್ನಿಧಾನದಲ್ಲಿ ಭಾಮೆಯನ್ನು ಕಂಡು ಪುಳಕಗೊಳ್ಳಲು ಇದು ಸುಸಂದರ್ಭ. ಪರಶುರಾಮ ಸೃಷ್ಟಿಯಲ್ಲಿ ಶಕ್ತಿ ಆರಾಧನೆ ವಿಶೇಷವಾಗಿರುವ ಹಿನ್ನೆಲೆಯೂ ಕೃಷ್ಣನ ಸ್ತ್ರೀವೇಷಕ್ಕೆ ಪೂರಕ.
ಮಾತ್ರವಲ್ಲದೇ ಕೃಷ್ಣ ತ್ರಿಗುಣ ಸ್ವರೂಪಿ. ಸತ್ವ, ರಜ ಮತ್ತು ತಮೋಗುಣಗಳಿಗೆ ಒಡೆಯ. ತ್ರಿಗುಣಗಳಿಗೆ ಅನುಕ್ರಮವಾಗಿ ಶ್ರೀ, ಭೂ ಮತ್ತು ದುರ್ಗೆ ಅಧಿದೇವತೆಗಳು. ಅದನ್ನೇ ಪುರಂದರದಾಸರು `ಎಡಕೆ ಭೂಮಿ, ಬಲಕೆ ಶ್ರೀಯು, ಎದುರಿನಲಿ ದುರ್ಗಾದೇವಿ, ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ ಮರಳು ಮಾಡಿಕೊಂಡೆಯಲ್ಲ.... ಮಾಯಾದೇವಿಯೇ' ಎಂದು ಭಾಮೆರೂಪಿ ಕೃಷ್ಣನನ್ನು ಸ್ತುತಿಸಿದ್ದು!
ವಾದಿರಾಜರ ಕಾಲದಿಂದಲೂ ಉಡುಪಿ ಕೃಷ್ಣನಿಗೆ ನವರಾತ್ರಿ ದಿನಗಳಲ್ಲಿ ಸ್ತ್ರೀರೂಪಿ ಅಲಂಕಾರ ಹಾಗೂ ಪ್ರತೀ ಶುಕ್ರವಾರಗಳಂದು ಮೋಹಿನಿ ರೂಪದಲ್ಲಿ ಅಲಂಕರಿಸುವ ವಾಡಿಕೆ ಇತ್ತು. ಅವರು ತಮ್ಮ ಕೀರ್ತನೆಯೊಂದರಲ್ಲಿ ` ಲಾವಣ್ಯದಿಂದ ಮೆರೆವ ನಿಜಸತಿಯ ಹೆಣ್ಣು ರೂಪದಿ ಕಾಂಬ ಮಹಾಲಕುಮಿ ಇವಗಿನ್ಯಾರು ಯಾಕೆ' ಎಂದು ಕೃಷ್ಣನ ಹೆಣ್ಣು ರೂಪವನ್ನು ಕಂಡು ಬೆರಗಾಗಿ ಸ್ವತ: ಹೆಣ್ಣಾಗಿರುವ ಕೃಷ್ಣನಿಗೆ ಅನ್ಯ ಹೆಣ್ಣುಗಳು ಯಾಕೆ ಮತ್ತು ಕೃಷ್ಣನಿಗಿಂತ ಮಿಗಿಲಾದ ಹೆಣ್ಣುಗಳು ಯಾರು ಎಂದು ಪ್ರಶ್ನಿಸಿದ್ದಾರೆ.
ಅಂತೂ ನವರಾತ್ರಿಯ ಈ ದಿನಗಳಲ್ಲಿ ಕೃಷ್ಣನನ್ನು ಸತ್ಯಭಾಮೆ, ಮೋಹಿನಿ, ಪದ್ಮಾವತಿ, ವೀಣಾಪಾಣಿ... ಹೀಗೆ ನವವಿಧ ರೂಪಗಳಿಂದ ಕಾಣುವ ಸುಯೋಗ.
(ಸಂಯುಕ್ತ ಕರ್ನಾಟಕ: ಅ. 6, 2008)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ