ಶೂಲ ಸುದರ್ಶನ ಸುರುಚಿಂ ಫಾಲೇಂದೂಜ್ವಲ ಕಿರೀಟ ಶೋಭಿತ ಶಿರಸಂ/
ಪಂಕಜ ಮುಖಕರ ಚರಣಂ ಶ್ರೀ ಶಂಕರ ನಾರಾಯಣಂ ವಂದೇ//
ಉಡುಪಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿ ಕರಾವಳಿ ತೀರ ಸಮೀಪದ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಕ್ರೋಡಾಶ್ರಮ. ಇಂದ್ರಾಳೀ ನದೀ ತೀರದಲ್ಲಿರುವ, ಪಡುದಿಕ್ಕಿನಲ್ಲಿ ಮುನ್ನೂರು ಬ್ರಾಹ್ಮಣ ಕುಲಗಳಿದ್ದ ಪಡುಮನ್ನೂರೆಂಬ ಈ ಕ್ಷೇತ್ರ ಕೊಡವೂರು ಎಂದೇ ಪ್ರಸಿದ್ದವಾಗಿದೆ.
ಹಿಂದೆ ಭೂಲೋಕದ ಜನರಲ್ಲಿ ಕೆಲವರು ವಿಷ್ಣುವನ್ನು, ಇನ್ನೂ ಕೆಲವರು ಶಿವನನ್ನೂ ಪೂಜಿಸುತ್ತಾ ತಮ್ಮ ತಮ್ಮ ದೇವರೇ ಮೇಲೆಂದು ಪರಸ್ಪರ ಕಚ್ಚಾಡುತ್ತಿದ್ದಾಗ, ತ್ಯಾಗಿಯೂ ದೈವಾರಾಧಕನೂ ಆದ ಕ್ರೋಡನೆಂಬ ಮುನಿ ಪುಂಗವ ದ್ವೈತಾದ್ವೈತಗಳ ಉದ್ದೇಶ ಸಾರ್ಥಕವಾಗುವಂತೆ ಶಂಕರ ಹಾಗೂ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಭಕ್ತರಿಗೆ ದರ್ಶನವೀಯುವಂತಾಗಬೇಕು ಎಂದು ತಪಸ್ಸಿಗೆ ಕುಳಿತರು.
ಅದೇ ಸಂದರ್ಭದಲ್ಲಿ ದಾನವರೀರ್ವರು ಶಿವ ಮತ್ತು ವಿಷ್ಣು ಒಂದೇ ರೂಪದಲ್ಲಿ ಬಂದು ಕೊಲ್ಲುವುದಿದ್ದರೆ ನಮಗೆ ಮರಣ ಬರಲಿ ಎಂದು ಶಿವನಿಂದ ವರ ಪಡೆದಿದ್ದರು. ಆ ದಾನವರೀರ್ವರೂ ದೇವಲೋಕಕ್ಕೆ ದಾಳಿ ಮಾಡಿ ದೇವೇಂದ್ರನನ್ನು ಓಡಿಸಿ ದೇವತೆಗಳನ್ನು ಸಂಕಷ್ಟಕ್ಕೀಡುಮಾಡಿದರು. ದೇವತೆಗಳೆಲ್ಲ ಬ್ರಹ್ಮನ ಆಜ್ಞೆಯಂತೆ ಶಂಕರ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಬಂದು ದಾನವರನ್ನು ಸಂಹರಿಸಲು ಪ್ರಾರ್ಥಿಸಿದರು.
ಇತ್ತ, ಕ್ರೋಡ ಮುನಿಯ ಘೋರ ತಪಸ್ಸಿಗೆ ಒಲಿದ ಶಂಕರ-ನಾರಾಯಣರಿಬ್ಬರೂ ಒಂದಾಗಿ ಬಲಭಾಗದಲ್ಲಿ ಶಂಕರನೂ ಎಡಭಾಗದಲ್ಲಿ ನಾರಾಯಣನೂ ಒಟ್ಟಾಗಿ ಕಾಣಿಸಿಕೊಂಡು ತಮ್ಮೊಳಗೆ ಬೇಧವಿಲ್ಲ ಎಂದೂ, ದ್ವೈತಾದ್ವೈತಿಗಳು ಹೊಡೆದಾಡಬಾರದೆಂದು ನುಡಿದು ಮುನಿಯ ಪ್ರಾರ್ಥನೆಯಂತೆ ಶಾಶ್ವತವಾಗಿ ಅಲ್ಲೇ ನೆಲೆ ನಿಂತರು. ಕ್ರೋಡಮುನಿಯ ಉದ್ದೇಶ ಹಾಗೂ ಕಾರ್ಯಗಳು ಜನಕ್ಕೆ ಆದರ್ಶವಾಗಿದ್ದು, ಮುಂದೆ ಈ ಕ್ಷೇತ್ರ `ಕ್ರೋಡಾಶ್ರಮ' ಎಂದು ಪ್ರಸಿದ್ಧಿ ಆಗಲೆಂದು ಹರಸಿದರು.
ಅತ್ತ ದೇವತೆಗಳ ಪ್ರಾರ್ಥನೆಯಂತೆ ಶಂಕರ ನಾರಾಯಣರು ಒಂದಾಗಿ ಒಂದೇ ದೇಹ ಧರಿಸಿ ಆಯುಧ ಪಾಣಿಯಾಗಿ ದಾನವರನ್ನು ಯುದ್ದದಲ್ಲಿ ಸೋಲಿಸಿ ಮೋಕ್ಷ ಕರುಣಿಸಿದರು. ಕ್ರೋಡಾಶ್ರಮದಲ್ಲಿ ಶಂಕರ ನಾರಾಯಣನೊಂದಿಗೆ ಎಲ್ಲ ದೇವತೆಗಳೂ, ಭೂತ ಗಣಗಳೂ ನೆಲೆ ನಿಂತರು. ಎಡಬದಿಯಲ್ಲಿ ದುರ್ಗೆ, ನಂದಿಕೇಶ್ವರ, ಕ್ಷೇತ್ರಪಾಲ, ಬ್ರಹ್ಮಶಾಸ್ತಾರ. ಬಲಬದಿಯಲ್ಲಿ ಗಣಪತಿ, ಮುಖ್ಯಪ್ರಾಣ.
ದೇವಸ್ಥಾನದ ತುಸು ದೂರದಲ್ಲಿ ಬೊಬ್ಬರ್ಯ, ಕಂಗಣಬೆಟ್ಟು ಪಂಜುರ್ಲಿ, ಭಗವತಿ ಮಾರಿಯಮ್ಮ ದೇವಾಲಯ, ಕೆರೆಮಠ- ಕಲ್ಲಮಠ- ಕಂಬಳಕಟ್ಟದ ಮಾಣಿ ದೇವಾಲಯ, ಬೆಳ್ಕೆಳೆ ಮಹಾಲಿಂಗೇಶ್ವರ, ಕಾನಂಗಿ ಮದರಂಗಿ ಬೆಟ್ಟು ರಕ್ತೇಶ್ವರಿ, ವಡಭಾಂಡೇಶ್ವರದ ಬಲರಾಮ, ಮಂಡೆ ಚಾವಡಿ ಮಠ ಮುಂತಾದ ಹತ್ತು ಹಲವು ದೇವಸ್ಥಾನ- ಮಠಗಳಿರುವ ಈ ಕ್ಷೇತ್ರ ನಿಜಕ್ಕೂ ಆಸ್ತಿಕರ ಆಸಕ್ತಿ ಕೆರಳಿಸುತ್ತದೆ.
ಇಲ್ಲಿಯ ದೇವಸ್ಥಾನದ ಗರ್ಭಗುಡಿಯಲ್ಲಿ ಮೂಲಸ್ಥಾನ ದೇವತೆಯಾಗಿ ಆರಾಧಿಸುವ ಶಂಕರ ನಾರಾಯಣ ದೇವರು ಲಿಂಗಾಕಾರದಲ್ಲಿದ್ದು, ಪಾಣಿಪೀಠಕ್ಕಿಂತ ತಗ್ಗಿನಲ್ಲಿ ಒಂದಕ್ಕೊಂದು ಆಲಂಗಿಸಿಕೊಂಡಿದ್ದು, ತಳದಲ್ಲಿ ಎರಡೂ ಲಿಂಗಗಳು ಒಂದೇ ಆಗಿದ್ದು, ಮೇಲಕ್ಕೆ ಎರಡು ಪಾಲಾಗಿದೆ. ಬಲಿ ದೇವತಾಮೂರ್ತಿಯಾಗಿ ಆರಾಧಿಸುವ ಕಂಚಿನ ಶಂಕರ ನಾರಾಯಣ ವಿಗ್ರಹ ಆಕರ್ಷಕವಾಗಿದೆ. ಕೆರೆಕಟ್ಟೆಯ ಮೂಡುಗಣಪತಿ ಇಷ್ಟಾರ್ಥ ಸಿದ್ದಿಗಾಗಿ ನೆಲೆನಿಂತು ತನ್ನ ವಿಶೇಷ ಕಾರಣೀಕದಿಂದ ಪ್ರಸಿದ್ದಿಯಾಗಿದೆ.
ಗುರು ರಾಘವೇಂದ್ರ ರಾಯರ ವೃಂದಾವನ, ಮಲ್ಲಿಕಾರ್ಜುನ ದೇವರು ಹಾಗೂ ನಾಗಬನಗಳಿಂದ ಕೂಡಿದ ಈ ದೇವಸ್ಥಾನದಲ್ಲಿ ಹಿಂದೂಗಳ ಬಹುತೇಕ ಹಬ್ಬ ಹರಿದಿನಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಲಕ್ಷ ದೀಪೋತ್ಸವ, ರಾಯರ ಆರಾಧನೆ, ಶಿವರಾತ್ರಿ, ನವರಾತ್ರಿಗಳ ದಿನಗಳಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಆಕರ್ಷಿಸುತ್ತದೆ.
(ಸಂಯುಕ್ತ ಕರ್ನಾಟಕ: ಜ. 10, 2009)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ