ಅಕ್ಟೋಬರ್ 3, 2010

ಇಷ್ಟ ಸಾಧನೆಗಾಗಿ ಬರಿ ನೆಲದಲ್ಲಿ ಊಟ !

ಕಷ್ಟ ನಿವಾರಣೆಯಾಗಿ, ಸುಖ ಸಿಗುತ್ತದೆ ಎಂದಾದರೆ ಮಾನವ ಏನೂ ಮಾಡಲು ಸಿದ್ಧ. ಅದರಲ್ಲಿ ನಾಚಿಗೆ, ದಾಕ್ಷಿಣ್ಯ ಇಲ್ಲ; ಬಡವ ಬಲ್ಲಿದನೆಂಬ ಬೇಧವೂ ಇಲ್ಲ. ಅಂಥ ಒಂದು ವಿಶಿಷ್ಟ ಪದ್ಧತಿ ಉಡುಪಿಯಲ್ಲಿ ಆಚರಣೆಯಲ್ಲಿದೆ. ಅದೇ ಬರಿ ನೆಲದಲ್ಲಿ ಭೋಜನ ಕ್ರಮ!
ಊಟಕ್ಕೆ ಕುಳಿತುಕೊಳ್ಳುವ ಸ್ಥಳಶುದ್ಧಿ ಮಾಡಿ, ಎಲೆಯನ್ನು ಬಳಸದೇ ಬರಿ ನೆಲದಲ್ಲಿ ಎಲೆಯ ಮೇಲೆ ಬಡಿಸುವ ಎಲ್ಲಾ ಪರಿಕರಗಳನ್ನು ಬಡಿಸಲಾಗುತ್ತದೆ. ಯಾವ ಮುಜುಗರವೂ ಇಲ್ಲದೇ ಈ ಕ್ರಮದಲ್ಲಿ ಊಟ ಮಾಡುವವರು ಸುಗ್ರಾಸ ಭೋಜನ ಸವಿಯುತ್ತಾರೆ. ಶ್ರಾವಣ ಮಾಸದ ಶನಿವಾರಗಳಂದು ಈ ರೀತಿ ಊಟ ಮಾಡುವವರ ಸಂಖ್ಯೆ ಅಧಿಕವಾಗಿರುತ್ತದೆ. ಈ ಪದ್ಧತಿ ಎಂದು ಆರಂಭವಾಯಿತೆಂದು ಗೊತ್ತಿಲ್ಲ. ಇಂದಿಗೂ ಅದು ಚಾಲ್ತಿಯಲ್ಲಿದೆ. ಈ ಕ್ರಮದಲ್ಲಿ ಊಟ ಮಾಡಿ ತಮ್ಮ ಅರಿಕೆಯನ್ನು ದೇವರ ಸನ್ನಿಧಿಯಲ್ಲಿ ಹರಕೆ ಒಪ್ಪಿಸಿ ಕೃತಾರ್ಥರಾದವರು ನೂರಾರು ಮಂದಿ. ಅಲ್ಲಿ ಜಾತಿಯ ಅಡ್ಡಗೋಡೆಯಿಲ್ಲ, ಬಡವ- ಸಿರಿವಂತನೆಂಬ ಅಂತರವಿಲ್ಲ.
ಉಡುಪಿ, ಸಾಧಕರಿಗೆ ಸಾಧನಾಸ್ಥಳ. ಲೋಕಗುರು ಆಚಾರ್ಯ ಮಧ್ವರ ತಪೋಭೂಮಿಯೂ ಆಗಿರುವ ಇಲ್ಲಿ, ಕಷ್ಟ ನಿವಾರಿಸುವ ಅನಂತೇಶ್ವರ ದೇವರ ದಿವ್ಯ ಸನ್ನಿಧಾನ ಭಕ್ತರಿಗೆ ಆಪ್ಯಾಯಮಾನವಾಗಿದೆ. ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಶ್ರೀಕೃಷ್ಣ ಪ್ರಧಾನ ಆಕರ್ಶಣೆ. ಆತನದು ಬಹು ಸುಂದರ ರೂಪ. ಅಷ್ಟಮಠದ ಯತಿಗಳು ಪ್ರತಿದಿನವೂ ವಿನೂತನ ಅಲಂಕಾರ ಮಾಡಿ ಪೂಜಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಭಾವೀಸಮೀರ ವಾದಿರಾಜ ಗುರು ಸಾರ್ವಭೌಮರು ಪ್ರತಿಷ್ಠಾಪಿಸಿದ ಮುಖ್ಯಪ್ರಾಣ ದೇವರು, ರಥಬೀದಿಯಲ್ಲಿ ಕಂಗೊಳಿಸುವ ಪ್ರಾಚೀನವಾದ ಚಂದ್ರಮೌಳೀಶ್ವರ ದೇವಸ್ಥಾನ, ಶ್ರೀಕೃಷ್ಣಮಠದ ಒಳಭಾಗದಲ್ಲಿರುವ ನಿರ್ಮಲ ಮಧ್ವ ಸರೋವರ, ಭೋಜನ ಶಾಲೆಯ ಮುಖ್ಯಪ್ರಾಣ ದೇವರು ಭಕ್ತಿಯ ಜಾಗೃತಿಯನ್ನು ನೀಡುತ್ತವೆ.
ಉಡುಪಿಯ ಶ್ರೀಕೃಷ್ಣ ಅನ್ನಬ್ರಹ್ಮನೆಂದೇ ಸುವಿಖ್ಯಾತ. ಇಲ್ಲಿ ನಿತ್ಯಾನ್ನದಾನ ಪುರಾತನದಿಂದ ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ. ಮಠ ಅತ್ಯಂತ ವಿಶಿಷ್ಟವಾದ ಪ್ರದೇಶ ಭೋಜನಶಾಲೆ ಹೊಂದಿದೆ. ಅಲ್ಲಿ ಮುಖ್ಯಪ್ರಾಣದೇವರ ದಿವ್ಯ ಸನ್ನಿಧಾನವೂ ಇದೆ. ಬುದ್ಧಿ- ಬಲ- ಯಶ- ಧೈರ್ಯ- ನಿರ್ಭಯತ್ವ- ಆರೋಗ್ಯ- ಜಾಢ್ಯ ನಿವಾರಣೆ- ವಾಕ್ಪಟುತ್ವಗಳಿಗಾಗಿ ಭಕ್ತರು ಈ ಸನ್ನಿಧಾನದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಾರೆ. ಮುಖ್ಯಪ್ರಾಣ ದೇವರ ಪ್ರಸನ್ನತೆಗಾಗಿ ನೆಲದಲ್ಲಿ ಊಟವನ್ನು ಮಾಡುವ ಸೇವೆ ಇಲ್ಲಿ ಪ್ರಧಾನ. ಶ್ರಾವಣ ಮಾಸದ ಶನಿವಾರಗಳಂದು ನೆಲದ ಊಟಕ್ಕಾಗಿ ಜನರ ಪ್ರವಾಹವೇ ಹರಿದುಬರುತ್ತದೆ.
ಪ್ರಸ್ತುತ ಭೋಜನಶಾಲೆಯ ಮುಖ್ಯಪ್ರಾಣ ವಿಗ್ರಹ ಜೋಡುಟ್ಟೆಯಲ್ಲಿತ್ತು. (ಈಗ ಪರ್ಯಾಯೋತ್ಸವ ಮೆರವಣಿಗೆ ಆರಂಭವಾಗುವ ಸ್ಥಳ) ನಿತ್ಯ ಪೂಜೆಯ ವ್ಯವಸ್ಥೆಗಾಗಿ ಆ ಬಳಿಕ ಕೃಷ್ಣಮಠಕ್ಕೆ ಸ್ಥಳಾಂತರಿಸಲಾಯಿತು. ಸುಮಾರು 100 ವರ್ಷಗಳ ಹಿಂದೆ ಶೀರೂರು ಮಠಾಧೀಶ ಲಕ್ಷ್ಮೀಸಾಗರತೀರ್ಥ ಶ್ರೀಪಾದರು ವಿಗ್ರಹ ಸ್ಥಳಾಂತರ ಮಾಡಿ, ಪ್ರತಿಷ್ಠಾಪಿಸಿದರು. ಕಾರಣೀಕಕ್ಕೆ ಹೆಸರಾದ ಮುಖ್ಯಪ್ರಾಣ ದೇವರ ಅಖಂಡ ಸೇವೆಯಿಂದ ವಿಶೇಷ ಫಲವನ್ನೂ ಪಡೆದರು. ಅಂದಿನಿಂದ ಈ ಸನ್ನಿಧಿಯಲ್ಲಿ ವಿಶೇಷ ಪೂಜೆ, ಸೇವೆಗಳು ಪ್ರಾರಂಭಗೊಂಡವು. ಇಂದಿಗೂ ಇಲ್ಲಿ ಸಲ್ಲಿಸಿದ ಸೇವೆಗಳಿಂದ ಭಕ್ತರು ಕಷ್ಟಗಳನ್ನು ಕಳೆದುಕೊಂಡ ನಿದರ್ಶನಗಳು ಬಹಳಷ್ಟಿವೆ.

(ಸಂಯುಕ್ತ ಕರ್ನಾಟಕ: ಜು. 25, 2009)

ಕುಡುಬಿಯರ ವಿಶಿಷ್ಟ ಹೋಳಿ

ಗೋವಾ ಮೂಲದ, ಕುಡುಬಿ ಜನಾಂಗದವರ ಹೋಳಿ ಹಬ್ಬ ಆಚರಣೆಯಲ್ಲಿ ಅವರದೇ ಆದ ವೈಶಿಷ್ಟ್ಯವಿದೆ. ಅವರು ಹೋಳಿಯನ್ನು ತಮ್ಮದೇ ಆದ ರೀತಿಯಲ್ಲಿ ತಲೆತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಜಾನಪದ ಸೊಗಡಿದೆ, ಅವರದ್ದೇ ಆದ ವಿಧಿ- ವಿಧಾನಗಳಿವೆ.
ಉಡುಪಿ ಮತ್ತು ದ. ಕ. ಜಿಲ್ಲೆಗಳ ಕೆಲವೆಡೆಗಳಲ್ಲಿ ಕುಡುಬಿಯರು ವಾಸವಾಗಿದ್ದಾರೆ. ಅವರಲ್ಲಿ ಎರಡು ಪಂಗಡಗಳಿವೆ. ಅವರಾಡುವ ಭಾಷೆಯಲ್ಲೂ ಕೊಂಚ ವ್ಯತ್ಯಾಸ ಉಂಟು. ಬ್ರಹ್ಮಾವರ ಸಮೀಪದ ಸುರಾಲು, ಹೆಬ್ರಿ ಪರಿಸರದಲ್ಲಿ ಕುಡುಬಿ ಜನಾಂಗದವರು ಇದ್ದಾರೆ. ಆದರೆ, ಕೊಡಿಯಾಲ ಕುಡುಬಿಯರೆಂದು ಕರೆಯಲ್ಪಡುವ ದ. ಕ. ಜಿಲ್ಲೆಯ ಮೂಡುಬಿದಿರೆ ಪರಿಸರದ ಅಶ್ವತ್ಥಪುರ, ವಂಟಿಮಾರು, ಕೊಲತ್ತಾರು, ಕೊಂಪದವು, ಎಡಪದವು, ಮುಚ್ಚೂರು, ಮಂಜನಬೈಲು, ಬಜ್ಪೆ ಸಮೀಪದ ಕುಡುಬಿಪದವು ಮೊದಲಾದ ಕಡೆಗಳಲ್ಲಿ ವಾಸವಾಗಿರುವ ಕುಡಿಬಿಯರ ಹೋಳಿ ಆಚರಣೆಗಿಂತ ಸೂರಾಲು ಪರಿಸರದ ಕುಡುಬಿಯರ ಹೋಳಿ ಆಚರಣೆಯಲ್ಲಿ ಕೊಂಚ ವ್ಯತ್ಯಾಸವಿದೆ.
ಪೋರ್ಚುಗೀಸರ ಉಪಟಳ ತಾಳಲಾರದೇ ಗೋವಾದಿಂದ ವಲಸೆ ಬಂದ ಕುಡುಬಿ ಜನಾಂಗ ಕೃಷಿಯನ್ನೇ ನಂಬಿದವರು. ಸಾಹಸಿಗರೂ, ನಂಬಿಗಸ್ಥರೂ ಆಗಿರುವ ಈ ಜನಾಂಗ ಆರಂಭದಲ್ಲಿ ಬಾರಕೂರು ಪ್ರದೇಶದಲ್ಲಿ ನೆಲೆಯಾಯಿತು. ಅಂದು ಸೂರಾಲು ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಸುರೇಂದ್ರ ತೋಳಾರ್ ಎಂಬಾತ ವಲಸೆ ಕುಡುಬಿ ಜನಾಂಗದವರಿಗೆ ಆಶ್ರಯ ನೀಡಿದ. ಬಳಿಕ ಆ ಜನಾಂಗ ಮಂಗಳೂರು ಕಡೆಗೆ ವಲಸೆಹೋಯಿತು. ಮಂಗಳೂರು ಕಡೆಗೆ ತೆರಳಿದ ಕುಡುಬಿಯರು `ಕೊಡಿಯಾಲ ಕುಡುಬಿ' ಎಂದು ಕರೆಯಲ್ಪಟ್ಟು, ಗೌಡ ಉಪನಾಮ ಹೊಂದಿದರು. ಸೂರಾಲು ಪ್ರದೇಶದ ಕುಡುಬಿಯರಿಗೆ ನಾಯ್ಕ ಎಂಬ ಉಪನಾಮವಿದೆ. ಇವರೀರ್ವರ ಭಾಷೆ ಕೊಂಕಣಿಯನ್ನು ಹೋಲುವ ಕುಡುಬಿ ಭಾಷೆಯಾಗಿದ್ದರೂ ಸ್ವಲ್ಪ ವ್ಯತ್ಯಾಸವಿದೆ.
ಹೋಳಿಹಬ್ಬವನ್ನು 5 ದಿನಗಳ ಪರ್ಯಂತ ವಿಶಿಷ್ಟವಾಗಿ ಆಚರಿಸುವ ಈ ಜನಾಂಗ ಅದಕ್ಕಾಗಿ ಹೋಳಿ ಹುಣ್ಣಿಮೆಯ ಮುಂಚಿನ ಏಕಾದಶಿಯಿಂದಲೇ ಸಿದ್ಧತೆ ನಡೆಸುತ್ತಾರೆ. ಕುಡುಬಿ ಜನಾಂಗದ ಪುರುಷರು ಆಬಾಲ ವೃದ್ಧರಾದಿಯಾಗಿ ಸರ್ವರೂ ಅದರಲ್ಲಿ ಭಾಗವಹಿಸುತ್ತಾರೆ. ಹೆಂಗಳೆಯರ ವೇಷ ತೊಡುತ್ತಾರೆ. ತಲೆಗೆ ಮುಂಡಾಸು, ಅಬ್ಬಲಿಗೆ (ಕನಕಾಂಬರ) ಹೂ ದಂಡು, `ಹಟ್ಟಿಮುದ್ದ' ಎಂಬ ಹಕ್ಕಿಯ ಗರಿ (ಇದು ಕೊಡಿಯಾಲ ಕುಡುಬಿಯರಲ್ಲಿ ಇಲ್ಲ) ತೊಡುತ್ತಾರೆ. ಗುಮ್ಟಾ ಎಂಬ ಉಡದ ಚರ್ಮ ಬಿಗಿದ ಘಟವನ್ನು ಹೋಲುವ ಮಡಕೆಯ ವಿಶಿಷ್ಟ ವಾದನವನ್ನು ನುಡಿಸಿ ರಾಮಾಯಣ ಕಥೆ ಹೇಳುತ್ತಾರೆ. ಜೊತೆಗೆ ವಿಶಿಷ್ಟ ಹೆಜ್ಜೆಹಾಕುತ್ತಾರೆ. ತಮಗೆ ಆಸರೆ ನೀಡಿದ ಸುರೇಂದ್ರ ತೋಳಾರ್ನನ್ನು ಸ್ಮರಿಸುತ್ತಾರೆ.
ಸೂರಾಲು ಕುಡುಬಿಯರ ಆರಾಧ್ಯ ದೈವ ಮಲ್ಲಿಕಾರ್ಜುನ ಅಥವಾ ಮಹಾಲಿಂಗೇಶ್ವರ ದೇವಳದಲ್ಲಿ ಪ್ರಥಮ ಗುಮ್ಟಾ ನರ್ತನ ಮಾಡಿ, ಬಳಿಕ ತಮ್ಮ ಸಮುದಾಯದ `ಗುರಿಕಾರ'ನ ಮನೆಯಲ್ಲಿ ಕುಣಿಯುತ್ತಾರೆ. ತಮ್ಮ ಸಮುದಾಯ ಹಾಗೂ ಆಹ್ವಾನಿತರ ಮನೆಗಳಿಗೆ ತೆರಳಿ ನರ್ತಿಸುತ್ತಾರೆ. ಕೋಲಾಟ ಕುಣಿಯುತ್ತಾರೆ. ಹುಣ್ಣಿಮೆಯಂದು ಹೋಳಿ ಆಚರಿಸಿ, ಮಾರಿ ಓಡಿಸಿ, ಬೆಂಕಿಹಾಯುತ್ತಾರೆ. ಈ ದಿನಗಳಲ್ಲಿ ಸಸ್ಯಾಹಾರಿಗಳಾಗಿರುವ ಅವರು, ಹೋಳಿ ಹಬ್ಬದಾಚರಣೆ ಬಳಿಕ ಕಾಡುಬೇಟೆ ನಡೆಸುತ್ತಾರೆ. ಇದು ವಾಡಿಕೆ.
ಈ ಪದ್ಧತಿಯನ್ನು ಈಗೀಗ ಸುಶಿಕ್ಷಿತರಾಗುತ್ತಿರುವ ವಿದ್ಯಾವಂತರೂ ಅನುಸರಿಸುತ್ತಿದ್ದಾರೆ. ಇದು ಮೆಚ್ಚಲೇಬೇಕಾದ ಸಂಗತಿ

(ಸಂಯುಕ್ತ ಕರ್ನಾಟಕ: ಮಾ. 11. 2009)

ಸೆಪ್ಟೆಂಬರ್ 5, 2010

ಸುರ್ಯದ `ಮೃತ್ಯುಂಜಯ'ನಿಗೆ ಮಣ್ಣೇ ಹರಕೆ!


ಬಾಗಲಕೋಟೆ ಪಾತವ್ವ (ಹೆಸರು ಬದಲಾಯಿಸಲಾಗಿದೆ)ಳಿಗೆ ಮದುವೆಯಾಗಿ ವರ್ಷ ಹತ್ತಾದರೂ ಅವಳಿಗಿನ್ನೂ ತೊಟ್ಟಿಲು ತೂಗುವ ಭಾಗ್ಯ ಬಂದೊದಗಿರಲಿಲ್ಲ. `ಬಂಜೆ' ಎಂಬ ಪಟ್ಟ ಕಟ್ಟಿಸಿಕೊಂಡ ಆಕೆಗೆ ನಾಟಿ ವೈದ್ಯರ ಮದ್ದು ಮಾಡಿದ್ದಾಯಿತು. ಕಂಡ ಕಂಡ ದೇವರಿಗೆ ಪೂಜೆ ಮಾಡಿಸಿಯಾಯಿತು. ವ್ರತ, ಪೂಜೆಗೆ ಹಣ ಖರ್ಚು ಮಾಡಿದ್ದೇ ವಿನ: ಪ್ರಯೋಜನ ಶೂನ್ಯ. ದೊಡ್ಡ ಆಸ್ಪತ್ರೆಯ ತಜ್ಞ ವೈದ್ಯರನ್ನು ಭೇಟಿ ಮಾಡಿದ್ದಾಗ ಗಂಡ- ಹೆಂಡತಿ ಇಬ್ಬರಲ್ಲೂ ದೈಹಿಕ ದೋಷವಿದ್ದು, ಮಕ್ಕಳಾಗುವ ಯೋಗ ಶೇ. 60ರಷ್ಟು ಮಾತ್ರ. ಲಕ್ಷಾಂತರ ರೂ. ಖರ್ಚು ಮಾಡಿದರೆ ಸಂತಾನಭಾಗ್ಯ ಲಭಿಸಲೂಬಹುದು. ಆದರೂ ಅದು ಗ್ಯಾರಂಟಿಯ ಮಾತಲ್ಲ ಎಂದ ವೈದ್ಯರ ಮಾತು ಕೇಳಿ ಅವರು ಸುಸ್ತಾಗಿದ್ದರು. ತಮಗೆ ವಂಶಾಭಿವೃದ್ಧಿಯ ಕುಡಿಯ ಯೋಗವಿಲ್ಲ ಎಂದು ಹತಾಶರಾದ ಆ ದಂಪತಿ ದತ್ತು ಸ್ವೀಕರಿಸಲು ಮುಂದಾಗಿದ್ದಾಗ ದೂರದ ಸಂಬಂಧಿಯೋರ್ವರು ಹೇಳಿದರು- ಸುರ್ಯಕ್ಕೆ ಹೋಗಿ ಅರಿಕೆ ಮಾಡಿಕೊಂಡು ಬಂದಲ್ಲಿ ಮಕ್ಕಳಾಗುತ್ತದೆ ಎಂದು! ಅದೇ ರೀತಿ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಬಂದು ಅಲ್ಲಿನ ದೇವರಲ್ಲಿ ಶ್ರದ್ಧಾಭಕ್ತಿಯಿಂದ ಅರಿಕೆ ಮಾಡಿಕೊಂಡ ತರುವಾಯ ಅವರಿಗೆ ಮಗುವಾಯಿತು!!
ಇದು ಕೇವಲ ಪಾತವ್ವನ ಕಥೆಯಲ್ಲ. ಸುರ್ಯ ದೇವಾಲಯಕ್ಕೆ ಇಂಥದೇ ಸುದ್ದಿ ಹೊತ್ತು ನೂರಾರು ಜನ ಬರುತ್ತಾರೆ. ಕೆಲವರು ಅರಿಕೆ ಮಾಡಲೆಂದೇ ಬಂದರೆ, ಮತ್ತೂ ಹಲವರು ತಮ್ಮ ಅರಿಕೆಯ ಫಲ ಲಭಿಸಿತು ಎಂಬ ಸಂತಸದಿಂದ ದೇವರಿಗೆ ಹರಕೆಯೊಪ್ಪಿಸಲು ಬರುತ್ತಿದ್ದಾರೆ. ಅಲ್ಲಿಗೆ ಬರುತ್ತಿರುವ ಸಾವಿರಾರು ಭಕ್ತರ ಅರಿಕೆ, ಹರಕೆಯಲ್ಲೂ ವಿಧಗಳುಂಟು.
ಸುರ್ಯದ ದೇವರಿಗೆ ಭಕ್ತರ ಹಣ, ಒಡವೆ ಇತ್ಯಾದಿ ಯಾವುದೂ ಬೇಡ. ಆತನಿಗೆ ಬೇಕಾಗಿರುವುದು ಮಣ್ಣು ಮಾತ್ರ. ಸುರ್ಯದ ಮೃತ್ಯುಂಜಯ ರೂಪಿ ಶ್ರೀ ಸದಾಶಿವ ರುದ್ರ ಮೃತ್ತಿಕೆ ಸಮರ್ಪಣೆಯಿಂದಲೇ ಸಂತೃಪ್ತ! ಭಕ್ತರ ಅರಿಕೆ ಮಣ್ಣಿನ ಮೂರ್ತರೂಪ ಪಡೆದು ಅಲ್ಲಿನ ದೇವರಿಗೆ ಸಮರ್ಪಿತವಾದಾಗಲೇ ಭಕ್ತರ ಹರಕೆ ಪರಿಪೂರ್ಣ.
ದ. ಕ. ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ `ಸುರಿಯ' ಅಥವಾ `ಸುರ್ಯ' ಕ್ಷೇತ್ರ ತನ್ನ ವೈಶಿಷ್ಟ್ಯದಿಂದಲೇ ಪ್ರಸಿದ್ಧಿ ಪಡೆದಿದೆ. ತಮ್ಮ ಅಭೀಷ್ಟಗಳು ಈಡೇರಿದಾಗ ಅವುಗಳನ್ನು ಸಂಕೇತಿಸುವ ಮಣ್ಣಿನ ಮಾದರಿಯೊಂದನ್ನು ಹರಕೆಯ ರೂಪದಲ್ಲಿ ಸಮರ್ಪಿಸುವ ಅನಾದೃಶ ಸಂಪ್ರದಾಯವೊಂದು ಅಲ್ಲಿದೆ. ಜನರ ಮನಸ್ಸಿನ ಅನೇಕಾನೇಕ ಮನಸ್ಸಿನ ಅನೇಕಾನೇಕ ಇಚ್ಛೆಗಳಂತೆ ಅಲ್ಲಿ ಸಮರ್ಪಿತವಾಗುವ ಮಣ್ಣಿನ ಗೊಂಬೆಗಳೂ ವೈವಿಧ್ಯಮಯ. ಸುರ್ಯ ಕ್ಷೇತ್ರ ಐತಿಹಾಸಿಕ ದೃಷ್ಟಿಯಿಂದಲೂ ಮಹತ್ವ ಪಡೆದ ಕಾರಣೀಕ ಕ್ಷೇತ್ರ. ಈ ಪರಿಯ ಕ್ಷೇತ್ರ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದಲ್ಲೇ ಪ್ರಾಯಶ: ಇನ್ನೊಂದೆಡೆ ಇಲ್ಲ.

ದಾರಿ ಯಾವುದಯ್ಯಾ ಸುರ್ಯಕೆ?
ಮೃಣ್ಮಯ ಮೂರ್ತಿ ಸಮರ್ಪಣೆಯ ಖ್ಯಾತಿಯ ಸುರ್ಯ ದ. ಕ. ಜಿಲ್ಲೆಯಲ್ಲಿದೆ. ಧರ್ಮಸ್ಥಳ ಸಮೀಪದ ಉಜಿರೆಯಿಂದ 4 ಕಿ. ಮೀ. ಉತ್ತರಕ್ಕೆ ಈ ಕ್ಷೇತ್ರವಿದೆ. ಉಜಿರೆಯಿಂದ ಸುರ್ಯಕ್ಕೆ ಖಾಸಗಿ ವಾಹನಗಳ ವ್ಯವಸ್ಥೆಯಿದೆ. ಸುಮಾರು 1,200 ವರ್ಷಗಳಷ್ಟು ಪುರಾತನವಾದ ಈ ದೇವಳ ಈಚೆಗಷ್ಟೇ ನವೀಕರಣಗೊಂಡಿದೆ. ಸುರಿಯ ಎಂಬ ಪುರಾತನ ಹೆಸರುಳ್ಳ ಆ ಹೆಸರು ಬರಲು ಕಾರಣ- ಹಿಂದೊಮ್ಮೆ ಹೆಂಗಸೊಬ್ಬಳು ತನ್ನ ಮಗುವಿನೊಂದಿಗೆ ಸೊಪ್ಪು ಕಡಿಯುತ್ತಿದ್ದಾಗ ಅವಳ ಕೈಯಲ್ಲಿದ್ದ ಕತ್ತಿ (ಕುಡುಗೋಲು) ಕಲ್ಲಿಗೆ ತಾಗಿ ಆ ಕಲ್ಲಿನಿಂದ ರಕ್ತ ಚಿಮ್ಮಿತು. ಅದನ್ನು ಕಂಡು ಗಾಬರಿಗೊಂಡ ಮಹಿಳೆ 'ಓ, ಸುರೆಯ...' ಎಂದು ತನ್ನ ಮಗುವನ್ನು ಕರೆದಳು. ಆ ಘಟನೆ ಬಳಿಕ ಆ ಸ್ಥಳಕ್ಕೆ ಸುರೆಯ ಎಂಬ ಹೆಸರಾಯಿತು. ಬಳಿಕ ಸುರಿಯ, ಸುರ್ಯ ಎಂದು ನಾಮಾಂತರಗೊಂಡಿತು ಎಂದು ಸ್ಥಳೀಯರು ಹೇಳುತ್ತಾರೆ. ಈ ಬಗೆಯ ಕಥೆಗಳು ದ. ಕ. ಜಿಲ್ಲೆಯ ಅನೇಕ ಪುರಾತನ ದೇವಾಲಯಗಳಲ್ಲೂ ಚಾಲ್ತಿಯಲ್ಲಿವೆ.
ಅಪ್ಪಟ ಜನಪದೀಯ ಸಂಸ್ಕೃತಿ ಸುರ್ಯದಲ್ಲಿದೆ. `ಮಣ್ಣಿನ ಹರಕೆ' ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ವಿಶಿಷ್ಟ ಹರಕೆಯ ಸಂಪ್ರದಾಯ. ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶವಿದೆ. ದೇವರ ಸೇವೆ ಮಾಡಲು ಶಕ್ತಿ ಇಲ್ಲದವರೂ ಹಿಡಿ ಮಣ್ಣನ್ನು ಸಮರ್ಪಿಸಿ ಕೃತಕೃತ್ಯತೆಯನ್ನು ಪಡೆಯುವ ವಿಶಿಷ್ಟ ಕ್ಷೇತ್ರವಿದು.
ಈ ದೇವಳದಲ್ಲಿ ಹರಕೆ ಹಾಕುವ ಸ್ಥಳವನ್ನು `ಹರಕೆ ಬನ' ಅಥವಾ `ಅಮ್ಟಾಡಿ ಬನ' ಎಂದು ಕರೆಯುತ್ತಾರೆ. ಈ ಬನದಲ್ಲಿ ಹಲವಾರು ಮರಗಳ ನಡುವೆ ವಿವಿಧ ರೀತಿಯ ಮಣ್ಣಿನ ಮೂರ್ತಿಗಳ ಒಂದು ದೊಡ್ಡ ರಾಶಿಯನ್ನೇ ಕಾಣಬಹುದು. ಭೂಮಿಯ ಮೇಲ್ಗಡೆ ಹರಡಿದ ಲಕ್ಷ ಲಕ್ಷ ಗೊಂಬೆಗಳಲ್ಲದೇ ಭೂಮಿಯ ಅಡಿಯಲ್ಲಿಯೂ 4 ಅಡಿ ಆಳದಿಂದಲೂ ಈ ಗೊಂಬೆಗಳ ರಾಶಿ ಹರಡಿದೆ. ಈ ರಾಶಿಯ ಮಧ್ಯಭಾಗದಲ್ಲಿ 2 ಲಿಂಗಗಳನ್ನು ಕಾಣಬಹುದು. ಈ ಲಿಂಗಗಳು ಶಿವ ಪಾರ್ವತಿಯರ ಲಿಂಗಗಳಾಗಿವೆ.

ಮಹರ್ಷಿಯ ತಪೋಭೂಮಿ
ಹಲವಾರು ವರ್ಷಗಳ ಹಿಂದೆ ಭೃಗು ಮಹರ್ಷಿ ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದ. ಆತನ ತಪಕ್ಕೆ ಒಲಿದು ಈಶ್ವರ ಪಾರ್ವತಿಯರು ಪ್ರತ್ಯಕ್ಷರಾದರು. ಮುಂದೆ ಆ ಸ್ಥಳದಲ್ಲಿ ಶಿವ- ಪಾರ್ವತಿಯರ ಲಿಂಗಗಳು ಉದ್ಭವವಾದವು ಎಂದು ಅಲ್ಲಿನ ಸ್ಥಳಪುರಾಣ ಹೇಳುತ್ತದೆ. ಈ ಲಿಂಗಗಳ ಸಮೀಪದಲ್ಲಿ ಎರಡು ಪಾದಗಳಿದ್ದು, ಅವು ಭೃಗು ಮಹರ್ಷಿಯದು ಎಂದು ಹೇಳುತ್ತಾರೆ. ಕಾಲಾಂತರದಲ್ಲಿ ಬನದಲ್ಲಿದ್ದ ದೇವತಾ ಸಾನ್ನಿಧ್ಯ ಸ್ಥಾನಾಂತರಗೊಂಡು ಈಗ ಕಾಣುವ ದೇವಸ್ಥಾನದಲ್ಲಿ ನೆಲೆಗೊಂಡು ಬಳಿಕ ಅದಕ್ಕೊಂದು ದೇವಸ್ಥಾನದ ರೂಪ ಬಂತೆಂದು ಹೇಳಲಾಗಿದೆ. ಇನ್ನೊಂದು ಸ್ಥಳ ಪುರಾಣ ಪ್ರಕಾರ ದೇವಳದೆದುರಿನ `ದೇವರಗುಡ್ಡ'ದಿಂದ ಈಗಿನ ಸ್ಥಳಕ್ಕೆ ದೇವರು ಬಂದರೆಂಬ ನಂಬಿಕೆಯೂ ಇದೆ.

ದೇವಸ್ಥಾನ ನಿರ್ಮಾಣ
ಶ್ರೀಕ್ಷೇತ್ರದ ಮೂಲದೈವವಾದ ಶ್ರೀ ಸದಾಶಿವ ರುದ್ರ ದೇವರ ಪ್ರತಿಷ್ಠಾಪನೆ ಸುಮಾರು 1 ಸಾವಿರ ವರ್ಷ ಹಿಂದೆ ಮಾಡಲಾಗಿದೆ ಎಂದು ತಿಳಿದುಬರುತ್ತದೆ. ಆದರೆ, ಆ ಬಗ್ಗೆ ದೇವಳದಲ್ಲಿ ಯಾವುದೇ ಸ್ಪಷ್ಟ ದಾಖಲೆ, ಪುರಾವೆಗಳಿಲ್ಲ. ದೇವರ ಸನ್ನಿಧಿಯ ತೀರ್ಥಮಂಟಪದಲ್ಲಿರುವ ನಂದಿ ಮೂರ್ತಿಯನ್ನು ಕ್ರಿ. ಶ. 1497ರಲ್ಲಿ ಪ್ರತಿಷ್ಠಾಪಿಸಲಾಯಿತೆಂಬ ಶಿಲಾಲೇಖನವಿದೆ. ಈ ಶಿಲಾ ಲೇಖನದಲ್ಲಿ ಲಕ್ಷ್ಮಪ್ಪ ಅರಸರಾದ ಬಂಗರಾಜ ಒಡೆಯರ ಕಾಲದಲ್ಲಿ ನೂಜಿ ಸಂಕಪ್ಪ ಅತಿಕಾರಿ ಮಗ ನಾರಾಯಣ ಸೇನ ಬೊವಾ ಎಂಬಾತ ಸುರ್ಯ ದೇವರ ಸನ್ನಿಧಿಯಲ್ಲಿ ನಂದಿಕೇಶ್ವರ ಪ್ರತಿಷ್ಠಾಪಿಸಿದರೆಂದು ಬರೆಯಲಾಗಿದೆ. ಅಮೃತ ಪಡಿ ನೈವೇದ್ಯಕ್ಕಾಗಿ ಇಮ್ಮಡಿ ಲಕ್ಷ್ಮಪ್ಪ ಬಂಗ ಒಡೆಯ 32 ಮುಡಿ ಹುಟ್ಟುವಳಿ ಗದ್ದೆ ಉಂಬಳಿ ಬಿಟ್ಟ ಬಗ್ಗೆ ಉಡುಪಿ ಪೇಜಾವರ ಮಠದಲ್ಲಿ ತಾಮ್ರ ಶಾಸನ ಇದೆ ಎಂದು ತಿಳಿದುಬಂದಿದೆ.

ಮಣ್ಣಿನ ಹರಕೆ
ದೇವಳದೆದುರಿನ ಬನ ಹರಕೆ ಬನವೆಂದೇ ಪ್ರಸಿದ್ಧ. ಅರಿಕೆಗಾಗಿ ಕ್ಷೇತ್ರಕ್ಕೆ ಬರುವ ಭಕ್ತರು ಮೊದಲಿಗೆ ಬನಕ್ಕೆ ತೆರಳಿ ಅಲ್ಲಿ ಅರಿಕೆ ಮಾಡಿಕೊಂಡು ಬಂದು ದೇವರ ದರ್ಶನ ಪಡೆಯಬೇಕೆಂಬುದು ಇಲ್ಲಿನ ನಿಯಮ. ಮಣ್ಣಿನ ಮೂರ್ತಿ ಹರಕೆ ಸಲ್ಲಿಸುವುದು ಇಲ್ಲಿನ ವಿಶೇಷ. ನೂರಾರು ವರ್ಷಗಳಿಂದ ಜನರು ಇಲ್ಲಿ ಸಲ್ಲಿಸಿದ ಹರಕೆಗಳ ರಾಶಿ ಬಹು ಎತ್ತರಕ್ಕೆ ಬೆಳೆದಿದೆ. ವೈವಿಧ್ಯಪೂರ್ಣವಾದ ಮಣ್ಣಿನ ಮೂರ್ತಿಗಳನ್ನಿಲ್ಲಿ ಕಾಣಬಹುದು. ನಾನಾ ವಿಧದ ಕಷ್ಟಕಾರ್ಪಣ್ಯಗಳಿಗೆ ಒಳಗಾದ ಜನ ಇಲ್ಲಿಗೆ ಬಂದು ಮೌನವಾಗಿ ಭಕ್ತಿಯಿಂದ ತಮ್ಮ ಸಮಸ್ಯೆಗಳನ್ನು ಭಗವಂತನಲ್ಲಿ ನಿವೇದಿಸಿ ಇದರ ಪರಿಹಾರವಾದೊಡನೆ ಅದಕ್ಕೆ ಸಂಬಂಧಿಸಿದ ಮಣ್ಣಿನ ಮೂರ್ತಿಯನ್ನು ಈ ಬನದಲ್ಲಿ ತಂದೊಪ್ಪಿಸುತ್ತಾರೆ. ಇದರ ವಿಧಿ ವಿಧಾನಗಳು ಬಲು ಸರಳ. ತಮ್ಮ ಊರಿನ ಕುಂಬಾರರಲ್ಲಿ ಅಪೇಕ್ಷಿತ ಮೂರ್ತಿ ಮಾಡಿಸಿ ತಂದು ಹಾಕಬಹುದು. ಅಥವಾ ತಾವೇ ತಮ್ಮಿಷ್ಟದ ಪ್ರಕಾರ ಬೊಂಬೆ ತಯಾರಿಸಿ ತಂದು ಹಾಕುವವರೂ ಇದ್ದಾರೆ. ಎರಡು ವಾರ ಮುಂಚಿತವಾಗಿ ದೇವಸ್ಥಾನದ ಆಫೀಸಿನಲ್ಲಿ ತಿಳಿಸಿದರೆ ಅಪೇಕ್ಷಿತ ವಿಗ್ರಹ ತಯಾರಿಸಿ ಒದಗಿಸುವ ವ್ಯವಸ್ಥೆ ಇದೆ.

ಮಣ್ಣಿನ ಮೂರ್ತಿಗಳ ವಿರಾಟ್ಸ್ವರೂಪ
ಸುರ್ಯ ಸದಾಶಿವ ರುದ್ರ ಪ್ರಸಿದ್ಧವಾಗಿರುವುದೇ ಇಲ್ಲಿನ ಮಣ್ಣಿನ ಮೂರ್ತಿಗಳಿಂದ. ಆತ ದುರ್ಬಲರ ದೇವತೆ. ಈತನನ್ನು ಪ್ರಾರ್ಥಿಸಿಕೊಂಡರೆ ಅಭೀಷ್ಟ ಈಡೇರುವುದು ಗ್ಯಾರಂಟಿ ಎಂಬುದು ಅಲ್ಲಿನ ಭಕ್ತಾದಿಗಳ ನಂಬುಗೆ. ಹರಕೆ ಹಾಕುವ ಬನದಲ್ಲಿ ಕಾಣುವ ನೋಟವೇ ಅದಕ್ಕೆ ಸಾಕ್ಷಿ. ವೈವಿಧ್ಯಮಯ ಮೂರ್ತಿಗಳ ಬ್ರಹ್ಮಾಂಡದ ವಿರಾಟ್ದರ್ಶನವೇ ಅಲ್ಲಿ ನೋಡುಗರಿಗಾಗುತ್ತದೆ. ಜೀವಂತ ಪ್ರಾಣಿಗಳ ಹಾಗೂ ನಿರ್ಜೀವ ವಸ್ತುಗಳ ಮಣ್ಣಿನ ಪ್ರತಿಕೃತಿಗಳು ಅಲ್ಲಿ ಕಾಣಸಿಗುತ್ತವೆ. ಅದು ಮನುಷ್ಯನ ಅಂಗಾಂಗಗಳಿರಬಹುದು, ಮನೆ ಇತ್ಯಾದಿ ಕಟ್ಟಡಗಳಿರಬಹುದು, ಕಚೇರಿ, ನೌಕರಿಯನ್ನು ಪ್ರತಿನಿಧಿಸುವ ಪೆನ್ನು- ಟೇಬಲ್- ಕುರ್ಚಿಗಳು, ಮಕ್ಕಳಾಗುವ ಬಯಕೆಯ ಅರಿಕೆ ಮಾಡಿ ಹರಕೆ ತೀರಿಸಿದ ತೊಟ್ಟಿಲು- ಮಗು ಪ್ರತಿಕೃತಿಗಳು ಕಂಡುಬರುತ್ತವೆ. ಈಚೆಗಷ್ಟೇ ಅಲ್ಲಿ ಮೊಬೈಲ್ನ ಪ್ರತಿಕೃತಿಯೊಂದನ್ನು ಹರಕೆ ತೀರಿಸಲು ತಂದಿದ್ದರು. ಕಳೆದುಹೋಗಿದ್ದ ತಮ್ಮ ಮೊಬೈಲ್ ಬೊಂಬೆಯಂತೆ ಅದು. ಹರಕೆಯ ಮಟ್ಟ ಆ ಪರಿ ತಲುಪಿದೆ!

(ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭ: ಜೂ. 15, 2008)

ಉಡುಪಿ ಪರ್ಯಾಯ ನಾಡಹಬ್ಬ ಮೆರುಗಿನ ಸಾಂಸ್ಕೃತಿಕ ಉತ್ಸವ


ಶ್ರೀಕೃಷ್ಣ, ಕಲಿಯುಗದ ಹೆದ್ದೈವ. `ನನ್ನ ಭಕ್ತರು ಎಂದೂ ನಿರಾಶರಾಗುವುದಿಲ್ಲ' ಎಂದು ಭಕ್ತನಾದ ಅರ್ಜುನನಿಂದ ಪ್ರತಿಜ್ಞೆ ಮಾಡಿಸಿದ ಕರುಣಾಳು ಆತ. ಅವನಿಗೆ ಬಲ್ಲಿದ ಭೀಷ್ಮಾಚಾರ್ಯರೂ, ಬಡವ ಸುದಾಮನೂ ಸಮಾನ. ಅದಕ್ಕಾಗಿಯೇ ಆಚಾರ್ಯ ಮಧ್ವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಉಡುಪಿಯ ಶ್ರೀಕೃಷ್ಣ, ವಿಶ್ವಕರ್ಮ ಕೆತ್ತಿದ ರುಕ್ಮಿಣೀ ಕರಾರ್ಚಿತನಾದ ಪವಿತ್ರ ಪ್ರತಿಮೆ. ಅದರಲ್ಲಿ ಶ್ರೀಮದಾಚಾರ್ಯರ ಭಕ್ತಿಯ ಕರೆಗೆ ಓಗೊಟ್ಟು ಶ್ರೀಕೃಷ್ಣ ನೆಲೆ ನಿಂತಿದ್ದಾನೆ. ಅದಕ್ಕೆ ಶ್ರೀ ವಾದಿರಾಜರು, ಕನಕ- ಪುರಂದರರು ಸಾಕ್ಷಿ. ಆದ್ದರಿಂದಲೇ ಇಲ್ಲಿ ಮಾಡಿದ ಪ್ರಾರ್ಥನೆ ಶ್ರೀಕೃಷ್ಣನ ಕಿವಿಗೆ ಮುಟ್ಟುತ್ತದೆ; ನೀಡಿದ ಸೇವೆ ಕೃಷ್ಣಾರ್ಪಣವಾಗುತ್ತದೆ ಎಂಬ ನಂಬಿಕೆ ಇದೆ.
ರೂಪ್ಯ ಪೀಠಂ ಕುಮಾರಾದ್ರಿಃ ಕುಂಭಾಶಿ ಚ ಧ್ವಜೇಶ್ವರಃ /
ಕ್ರೋಢ ಗೋಕರ್ಣ ಮೂಕಾಂಬಾಃ ಸಪ್ತೈತೇ ಮೋಕ್ಷದಾಯಿಕಾಃ //

ಪರಶುರಾಮ ಸೃಷ್ಟಿಯ ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ, ಕೊಲ್ಲೂರು, ಗೋಕರ್ಣ- ಈ ಸಪ್ತಕ್ಷೇತ್ರಗಳು ಪುಣ್ಯಕ್ಷೇತ್ರಗಳು. ಅವುಗಳಲ್ಲಿ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರೆ, ಗೋಕರ್ಣ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಉಳಿದ ಐದು ಪುಣ್ಯತಮ ತಾಣಗಳಿರುವುದು ಉಡುಪಿ ಜಿಲ್ಲೆಯಲ್ಲಿ. ಉಡುಪಿಯನ್ನು ರೂಪ್ಯಪೀಠ ಎಂದೂ, ರಜತಪೀಠ ಎಂದೂ ಕರೆಯುತ್ತಿದ್ದರು. ತುಳುವಿನಲ್ಲಿ ಉಡುಪಿಯನ್ನು ಒಡಿಪು ಎಂದೂ ಕರೆಯುತ್ತಾರೆ. ಉಡುಪಿಯಿಂದ ಸುಮಾರು ಹತ್ತು ಕಿ. ಮೀ. ದೂರದಲ್ಲಿರುವ ಪಾಜಕದಲ್ಲಿ ಜನಿಸಿ, ದ್ವೈತಮತ ಸ್ಥಾಪಿಸಿದ ಆಚಾರ್ಯ ಮಧ್ವರಿಂದ ಉಡುಪಿ ಮತ್ತಷ್ಟು ಖ್ಯಾತಿಯನ್ನು ಪಡೆಯಿತು. ಅವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಈ ಕುರಿತು ಅನೇಕ ಕಥೆಗಳಿವೆ. ಅವುಗಳಲ್ಲಿ ಪ್ರಖ್ಯಾತವಾಗಿರುವುದು ಈ ಕಥೆ.

ಉಡುಪಿ ಕೃಷ್ಣನ ಕಥೆ:
ಸರಕು ಸಾಗಿಸುವ ಹಡಗು ಸಮುದ್ರದಲ್ಲಿ ಕಲ್ಲುಬಂಡೆಗೆ ಬಡಿಯುವ ಆಘಾತಕಾರಿ ಸನ್ನಿವೇಶದಿಂದ ಪಾರುಮಾಡಿದ ಆಚಾರ್ಯ ಮಧ್ವರಿಗೆ ಅವರ ಇಚ್ಛೆಯಂತೆ ನೀಡಿದ ಗೋಪಿಚಂದನದ ಎರಡು ಹೆಂಟೆ (ಮುದ್ದೆ)ಯೊಳಗೆ ಕೃಷ್ಣ- ಬಲರಾಮರ ವಿಗ್ರಹಗಳಿದ್ದು, ಅವುಗಳಲ್ಲಿ ಒಂದನ್ನು (ಬಲರಾಮ) ವಡಭಾಂಡೇಶ್ವರದಲ್ಲಿ ಪ್ರತಿಷ್ಠಾಪಿಸಿ, ಮತ್ತೊಂದನ್ನು ಉಡುಪಿಗೆ ತಂದು ಜಲಾಧಿವಾಸ ಮಾಡಿ, ವಿಧಿವತ್ತಾಗಿ ಆಚಾರ್ಯ ಮಧ್ವರು ಈಗಿರುವ ಜಾಗದಲ್ಲಿ ಪ್ರತಿಷ್ಠಾಪಿಸಿದರು. ಶ್ರೀಕೃಷ್ಣನ ಪೂಜೆಗೆ ಉಡುಪಿ ಸುತ್ತಲಿನ ಎಂಟು ಊರುಗಳಾದ ಕಾಣಿಯೂರು, ಸೋದೆ, ಪುತ್ತಿಗೆ, ಅದಮಾರು, ಪೇಜಾವರ, ಪಲಿಮಾರು, ಕೃಷ್ಣಾಪುರ ಮತ್ತು ಶೀರೂರುಗಳಿಂದ ಬಾಲ ಸನ್ಯಾಸಿಗಳನ್ನು ಆರಿಸಿಕೊಂಡು ಅವರಿಗೆ ಶ್ರೀಕೃಷ್ಣಪೂಜೆಯ ದೀಕ್ಷೆಯಿತ್ತು ತಮ್ಮ ಆಧ್ಯಾತ್ಮ ಅಮೃತವನ್ನು ಹಂಚಿದರು.

ಪರ್ಯಾಯ ಪದ್ಧತಿ:
ಎಂಟು ಮಂದಿ ಯತಿಗಳು ಶ್ರೀಕೃಷ್ಣ ಪೂಜೆಯನ್ನು ಅನುಕ್ರಮವಾಗಿ ಮಾಡಲು ಅನುಕೂಲವಾಗುವಂತೆ ಒಂದು ವಿಶಿಷ್ಟ ಅವಧಿಯ ತನಕ ಒಬ್ಬೊಬ್ಬರು ಶ್ರೀಕೃಷ್ಣ ಪೂಜೆಯ ಹೊಣೆಯನ್ನು ವಹಿಸಿಕೊಳ್ಳುವ ಪದ್ಧತಿಯೇ ಪರ್ಯಾಯ. ಪೂಜೆಯ ಹೊಣೆ ಸ್ವೀಕರಿಸುವ ಸ್ವಾಮಿಗಳು ಪರ್ಯಾಯ ಯತಿಗಳು, ಮತ್ತವರ ಮಠ ಪರ್ಯಾಯ ಮಠ ಎಂದೆನಿಸಿಕೊಳ್ಳುತ್ತದೆ. ಯಾರ ಪೂಜೆಯ ಅವಧಿಯೋ ಅದು ಅವರ ಪರ್ಯಾಯ ಕಾಲ. ಪೂಜೆಯನ್ನು ಆರಂಭಿಸುವ ದಿನ ನಡೆಯುವ ಜಾತ್ರೆಯೇ ಪರ್ಯಾಯ ಮಹೋತ್ಸವ. ಶ್ರೀ ವಾದಿರಾಜರ ಕಾಲದ ತನಕ ಎರಡು ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು ಎಂದು ತಿಳಿದುಬರುತ್ತದೆ. ಆನಂತರ ವಾದಿರಾಜರು ಎರಡು ವರ್ಷಗಳ ಅವಧಿಯ ಪರ್ಯಾಯ ಪದ್ಧತಿಯನ್ನು ರೂಢಿಗೆ ತಂದರು. ನಂತರದ ದಿನಗಳಲ್ಲಿ ಈ ಮಹೋತ್ಸವಕ್ಕೆ ನಾಡಹಬ್ಬದ ಮೆರುಗು ಬಂತು.
ಪರ್ಯಾಯದ ಪೂರ್ವಭಾವಿ ಚಟುವಟಿಕೆಗಳು ಪರ್ಯಾಯೋತ್ಸವಕ್ಕಿಂತ ಒಂದು ವರ್ಷ ಮೊದಲೇ ಆರಂಭವಾಗುತ್ತದೆ. ಈ ಪೂರ್ವಭಾವಿ ಕಾರ್ಯಕ್ರಮಗಳಲ್ಲಿ ಮುಖ್ಯವಾದವು ನಾಲ್ಕು. ಅವುಗಳೆಂದರೆ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತ. ಪರ್ಯಾಯಕ್ಕೆ ಇನ್ನೂ ಒಂದು ವರ್ಷವಿದೆ ಎನ್ನುವಾಗ ಒಂದು ಶುಭದಿನದಂದು, ಶುಭ ಮುಹೂರ್ತದಲ್ಲಿ ಬಾಳೆ ಮುಹೂರ್ತ ನಡೆಯುತ್ತದೆ. ತುಲಸಿ ಮತ್ತು ಬಾಳೆಯ ತೋಟಗಳನ್ನು ಬೆಳೆಸುವ ಸನ್ನಾಹ ಈ ಕಾರ್ಯಕ್ರಮದಿಂದ ಆರಂಭವಾಗುತ್ತದೆ. ಕೃಷ್ಣಾರ್ಚನೆಗೆ ದಿನವೂ ತುಲಸಿ ಲಭ್ಯತೆ ಹಾಗೂ ಅನ್ನದಾನಕ್ಕೆ ಹೇರಳ ಬಾಳೆಎಲೆ, ಸಮರ್ಪಣೆಗೆ ಬಾಳೆಹಣ್ಣು ಈ ವಿಧಿಯ ಹಿಂದಿನ ಆಶಯ. ಬಾಳೆ ಮುಹೂರ್ತ ನಡೆದ ಎರಡು ತಿಂಗಳಲ್ಲಿ ಅಕ್ಕಿಮುಹೂರ್ತ ನಡೆಯುತ್ತದೆ. ಪರ್ಯಾಯ ಕಾಲದಲ್ಲಿ ದಿನವೂ ನಡೆಯುವ ಸಹಸ್ರಾರು ಜನರ ಅನ್ನಸಂತರ್ಪಣೆಗಾಗಿ ಸಾಕಷ್ಟು ಅಕ್ಕಿ ಸಂಗ್ರಹಿಸುವುದಕ್ಕಾಗಿ ಈ ಮುಹೂರ್ತ. ನಂತರದ್ದು ಕಟ್ಟಿಗೆ ಮುಹೂರ್ತ. ಪರ್ಯಾಯಕ್ಕೆ ಇನ್ನು ಆರೇಳು ತಿಂಗಳುಗಳಿವೆ ಎನ್ನುವಾಗ ಈ ಮುಹೂರ್ತ ನಡೆಯುತ್ತದೆ. ಸಂತರ್ಪಣೆಗೆ ಅಕ್ಕಿ ಸಂಗ್ರಹಿಸಿದ್ದಾಯಿತು, ಅದನ್ನು ಬೇಯಿಸಲು ಉರುವಲು ಬೇಕು. ಅದಕ್ಕಾಗಿ ಈ ಮುಹೂರ್ತ. ಮಧ್ವಸರೋವರ ಪಾರ್ಶ್ವಭಾಗದಲ್ಲಿ (ಗೋಶಾಲೆಯ ಹಿಂಬದಿ) ಕಟ್ಟಿಗೆಯನ್ನು ಕ್ರಮಬದ್ಧವಾಗಿ ಒಟ್ಟಿ 50 ಅಡಿ ಎತ್ತರದ ಮೋಹಕ ಕಟ್ಟಿಗೆ ರಥ ನಿರ್ಮಿಸುತ್ತಾರೆ. ಮುಂದಿನ ಪರ್ಯಾಯದ ಸ್ವಲ್ಪ ಸಮಯದ ಮುನ್ನ ಈ ರಥವನ್ನು ಬಿಚ್ಚಿ ಉರುವಲನ್ನು ಸಂತರ್ಪಣೆಗೆ ಬಳಸುತ್ತಾರೆ. ಪರ್ಯಾಯಪೂರ್ವ ವಿಧಿಗಳಲ್ಲಿ ಕೊನೆಯದಾದ ಮುಹೂರ್ತವೇ ಭತ್ತ ಮುಹೂರ್ತ. ಪರ್ಯಾಯಕ್ಕೆ ಏಳೆಂಟು ವಾರಗಳಿರುವಾಗ ಈ ಮುಹೂರ್ತ ನಡೆಸಲಾಗುತ್ತದೆ. ಪರ್ಯಾಯದ ಮೊದಲು ಹೊಸ ಕೊಯ್ಲಿನ ಭತ್ತವನ್ನು ಮುಂದಿನ ಅಕ್ಕಿಗಾಗಿ ಇದನ್ನು ಸಂಗ್ರಹಿಸಲಾಗುತ್ತದೆ. ಈ ಎಲ್ಲಾ ಮುಹೂರ್ತಗಳು ಅನ್ನದಾನದ ವ್ಯವಸ್ಥೆಗಾಗಿ ಇದೆ ಎನ್ನುವುದು ಗಮನಾರ್ಹ. ಅನ್ನಬ್ರಹ್ಮ ಎಂದೇ ಖ್ಯಾತಿ ಪಡೆದ ಉಡುಪಿ ಕೃಷ್ಣನ ಕೃಪಾರ್ಥವಾಗಿ ಈ ಎಲ್ಲಾ ಮುಹೂರ್ತಗಳ ಆಚರಣೆ.
ಪರ್ಯಾಯ ಪೀಠವೇರುವ ಸ್ವಾಮೀಜಿ ಪರ್ಯಾಯ ಮಹೋತ್ಸವಕ್ಕೆ ಇನ್ನು ಆರೇಳು ತಿಂಗಳಿರುವಾಗ ತೀರ್ಥಕ್ಷೇತ್ರಗಳ ಯಾತ್ರೆಗೆ ಹೊರಡುತ್ತಾರೆ. ಅದೇ ಪರ್ಯಾಯಪೂರ್ವ ಸಂಚಾರ ಅಥವಾ ಪರ್ಯಾಯ ಸಂಚಾರ. ಭಾವಿ ಪರ್ಯಾಯ ಸ್ವಾಮಿಗಳು ಪರ್ಯಾಯ ಸ್ವೀಕರಿಸಿದ ಬಳಿಕ ಎರಡು ವರ್ಷ ಕಾಲ ಉಡುಪಿ ಕೃಷ್ಣಮಠ ಬಿಟ್ಟು ಎಲ್ಲೂ ಹೋಗುವಂತಿಲ್ಲ. ಅವರ ಚಟುವಟಿಕೆಗಳೇನಿದ್ದರೂ ರಥಬೀದಿಯೊಳಗೆ ಮಾತ್ರ ಸೀಮಿತ!
ಹೀಗೆ ಪರ್ಯಾಯಪೂರ್ವ ಸಂಚಾರ ಪೂರೈಸಿ, ತಮ್ಮ ಪರ್ಯಾಯ ಮಹೋತ್ಸವಕ್ಕೆ ಆಮಂತ್ರಣ ನೀಡಿ ಆಗಮಿಸುವ ಯತಿಗಳನ್ನು ಉಡುಪಿ ಜೋಡುಕಟ್ಟೆ ಬಳಿ ಸ್ವಾಗತಿಸಲಾಗುವುದು. ಅದ್ದೂರಿ ಮೆರವಣಿಗೆ ಮೂಲಕ ಅವರನ್ನು ಕೃಷ್ಣಮಠಕ್ಕೆ ಬರಮಾಡಿಕೊಳ್ಳಲಾಗುವುದು. ಅದೇ ಪುರಪ್ರವೇಶ. ಇದು ಪರ್ಯಾಯ ಮಹೋತ್ಸವಕ್ಕೆ ಸುಮಾರು 2- 3 ವಾರಗಳಿಗೆ ಮುನ್ನ ನಡೆಯುತ್ತದೆ. ಆ ಬಳಿಕ ಪರ್ಯಾಯ ಶ್ರೀಗಳು ತಮ್ಮ ಮಠದಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಆ ಬಳಿಕ ಪರ್ಯಾಯ ಮಹೋತ್ಸವದ ತಯಾರಿ ಚಟುವಟಿಕೆಗಳು ಭರದಿಂದ ಸಾಗುತ್ತವೆ. ಪರ್ಯಾಯ ಸ್ವಾಮೀಜಿಯವರಲ್ಲಿ ಆಚಾರ್ಯ ಮಧ್ವರ ಸನ್ನಿಹಿತವಾಗಿದೆ ಎಂದೇ ಪರಿಭಾವಿಸುವ ಭಕ್ತಗಡಣ ಅವರನ್ನು ಪಾದಪೂಜೆಗೆ ಆಹ್ವಾನಿಸುತ್ತಾರೆ. ಪರ್ಯಾಯ ಮಹೋತ್ಸವದ ಯಶಸ್ಸಿಗಾಗಿ ಹೊರೆಕಾಣಿಕೆ ಸಮರ್ಪಿಸುತ್ತಾರೆ. ಅಡುಗೆಗೆ ಬೇಕಾದ ದವಸ ಧಾನ್ಯಗಳು, ತರಕಾರಿಗಳು, ಬಾಳೆಎಲೆ ಇತ್ಯಾದಿಗಳನ್ನು ಹೊರೆಗಳ ಮೂಲಕ ಮಠಕ್ಕೆ ಕಳಿಸುತ್ತಾರೆ. ವಾದಿರಾಜ ಕೃಪೆಯಿಂದ ಹುಲುಸಾಗಿ ಬೆಳೆಯುತ್ತದೆ ಎಂಬ ಪ್ರತೀತಿ ಇರುವ ಮಟ್ಟಿ ಗುಳ್ಳ ಬುಟ್ಟಿಗಳ ಸಂಖ್ಯೆಯಲ್ಲಿ ಕೃಷ್ಣ ಸನ್ನಿಧಿಗೆ ಆಗಮಿಸುತ್ತದೆ. ಪರ್ಯಾಯ ಮಹೋತ್ಸವ ಸಂತರ್ಪಣೆಯಲ್ಲಿ ಮಟ್ಟು ಗುಳ್ಳ ಸಾಂಬಾರು ವಿಶೇಷ.

ಸಂಭ್ರಮದ ಪರ್ಯಾಯ ಮಹೋತ್ಸವ:
ಮಕರ ಸಂಕ್ರಮಣದ ಮಾರನೆಯ ದಿನ ಚೂರ್ಣೋತ್ಸವ. ಅದರ ಮುಂದಿನ ಒಂದು ದಿನ ಉತ್ಸವಗಳಿಗೆ ವಿಶ್ರಾಂತಿ. ಮೂರನೆಯ ದಿನ ಪರ್ಯಾಯ ಪೀಠವನ್ನು ಬಿಟ್ಟೇಳುವ ಯತಿಗಳಿಂದ ಶ್ರೀಕೃಷ್ಣನಿಗೆ ಕೊನೆಯ ಪೂಜೆ. ಮಕರ ಸಂಕ್ರಮಣದ ನಾಲ್ಕನೆಯ ದಿನ ಪರ್ಯಾಯ ಮಹೋತ್ಸವ. ಇದು ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಉಡುಪಿಯಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಅಲಿಖಿತ ಸಂವಿಧಾನ.
ಪರ್ಯಾಯ ಪೀಠವನ್ನೇರುವ ಶ್ರೀಪಾದರು ಪರ್ಯಾಯ ಮಹೋತ್ಸವದ ಮುಂಚಿನ ದಿನ ರಾತ್ರಿ (ಜ. 17) ಉಡುಪಿಯಿಂದ ಸುಮಾರು 10 ಕಿ. ಮೀ. ದೂರದಲ್ಲಿನ ಕಾಪು ದಂಡತೀರ್ಥ ಎಂಬಲ್ಲಿ ಆಚಾರ್ಯ ಮಧ್ವರಿಂದ ಸೃಜಿಸಲ್ಪಟ್ಟ ಕೆರೆಯ ಪುಣ್ಯಜಲದಲ್ಲಿ ಮಿಂದು ಮಧ್ಯರಾತ್ರಿ ಕಳೆದ ಸುಮಾರು 3 ಗಂಟೆ ವೇಳೆಗೆ ಉಡುಪಿಗೆ ಆಗಮಿಸುತ್ತಾರೆ. 4 ಗಂಟೆ ವೇಳೆಗೆ ಉಡುಪಿಯ ಸಮಸ್ತ ಜನತೆ ಜೋಡುಕಟ್ಟೆ ಬಳಿ ತೆರಳಿ, ಶ್ರೀಪಾದರನ್ನು ಸ್ವಾಗತಿಸಲು ನೆರೆದಿರುತ್ತಾರೆ. ಅಷ್ಟರಲ್ಲಿ ಇತರ ಯತಿಗಳೂ ಅಲ್ಲಿಗೆ ಆಗಮಿಸುತ್ತಾರೆ. ಪರ್ಯಾಯ ಬಿಟ್ಟೇಳುವ ಯತಿಗಳು ಮಾತ್ರ ಕೃಷ್ಣಮಠದಲ್ಲೇ ಇದ್ದು, ಶ್ರೀಕೃಷ್ಣ ಅರ್ಚನೆಯಲ್ಲಿ ನಿರತರಾಗಿರುತ್ತಾರೆ. ಪರ್ಯಾಯ ಪೀಠವೇರುವ ಸ್ವಾಮೀಜಿ ಸಹಿತ ಎಲ್ಲಾ ಯತಿಗಳು ವಿಶೇಷವಾದ ರಾಜೋಪಚಾರದ ದಿರಿಸಿನಲ್ಲಿದ್ದು ಅವರನ್ನು ವಿಶೇಷ ಮೇನೆಯಲ್ಲಿ ಕುಳ್ಳಿರಿಸಿ, ಮಠದ ಪಟ್ಟದ ದೇವರ ಸಹಿತ ಮಕರ ತೋರಣ, ಪೂರ್ಣಕುಂಭ, ಜಾನಪದ ತಂಡಗಳು, ಟ್ಯಾಬ್ಲೊಗಳ ಸಹಿತ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು. ರಥಬೀದಿ ತಲುಪುತ್ತಲೇ ಎಲ್ಲಾ ಯತಿಗಳು ಮೇನೆಯಿಂದ ಕೆಳಗಿಳಿದು, ಅದಾಗಲೇ ನೆಲದಲ್ಲಿ ಹಾಸಿದ್ದ ಬಿಳಿಹಾಸಿನ ಮೇಲೆ ನಡೆಯ ಅಡಿಯಿಟ್ಟು ಪ್ರದಕ್ಷಿಣೆಯಾಗಿ ಎಲ್ಲಾ ಯತಿಗಳು ಆಗಮಿಸುತ್ತಾರೆ. ಕನಕ ಗೋಪುರ ಬಳಿ ಆಗಮಿಸಿ, ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನಗೈದು, ಅಲ್ಲೇ ಪುರೋಹಿತರು ನವಗ್ರಹ ಪ್ರಾರ್ಥನೆ ಮಾಡಿ ದಾನ ಕೊಡಿಸುತ್ತಾರೆ. ಬಳಿಕ ಚಂದ್ರೇಶ್ವರ- ಅನಂತೇಶ್ವರ ದೇವಳ ಸಂದರ್ಶನ, ಪ್ರಾರ್ಥನೆ ನೆರವೇರುತ್ತದೆ. ಕೃಷ್ಣಮಠದ ಬಾಗಿಲಲ್ಲಿ ಪ್ರಸಕ್ತ ಪರ್ಯಾಯ ಶ್ರೀಪಾದರು ಆಗಾಮಿ ಶ್ರೀಪಾದರನ್ನು ಹಸ್ತಲಾಘವವಿತ್ತು, ಸ್ವಾಗತಿಸಿ ಕರೆದೊಯ್ಯುತ್ತಾರೆ. ಅಲ್ಲಿಂದ ಮಧ್ವಸರೋವರದಲ್ಲಿ ಕಾಲು ತೊಳೆದ ಬಳಿಕ ಶ್ರೀಕೃಷ್ಣ ಮಠ ಪ್ರವೇಶ. ಪ್ರಸಕ್ತ ಮತ್ತು ಆಗಾಮಿ ಪರ್ಯಾಯ ಶ್ರೀಪಾದರು ಕೃಷ್ಣ ಮಂದಿರದೊಳಗೆ ಹೋಗುತ್ತಿದ್ದಂತೆಯೇ ಇತರ ಶ್ರೀಪಾದರು ಬಡಗು ಮಾಳಿಗೆಗೆ ತೆರಳಿ, ಅಲ್ಲಿ ಸಿದ್ಧಗೊಳಿಸಿದ ಅಲಂಕೃತ ಅರಳು ಗದ್ದಿಗೆಯಲ್ಲಿ ಪರ್ಯಾಯ ದೀಕ್ಷೆ ಪಡೆದಿರುವ ಯತಿಗಳ ನಿರೀಕ್ಷೆಯಲ್ಲಿದ್ದು ಆಸೀನರಾಗಿರುತ್ತಾರೆ. ಈಮಧ್ಯೆ, ಪರ್ಯಾಯ ಬಿಟ್ಟೇಳುವ ಶ್ರೀಪಾದರು ಪರ್ಯಾಯ ವಹಿಸುವ ಶ್ರೀಪಾದರನ್ನು ಕೃಷ್ಣ ಗರ್ಭಗುಡಿಗೆ ಕರೆದೊಯ್ದು ಕೃಷ್ಣನ ಅಂತರಂಗದ ದರ್ಶನ ಮಾಡಿಸಿ, ಮಧ್ವಾಚಾರ್ಯರು ನೀಡಿದ್ದ ಅಕ್ಷಯ ಪಾತ್ರೆ, ಸಟ್ಟುಗ ಹಾಗೂ ಗರ್ಭಗುಡಿಯ ಬೀಗದ ಕೀಲಿಕೈ ಹಸ್ತಾಂತರ ಇತ್ಯಾದಿ ಪ್ರಕ್ರಿಯೆಗಳು ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ನಡೆದು, ಮುಖ್ಯಪ್ರಾಣ ದರ್ಶನದ ಬಳಿಕ, ಆಗಾಮಿ ಯತಿಗಳನ್ನು ಪರ್ಯಾಯ ಶ್ರೀಪಾದರು ಸರ್ವಜ್ಞಪೀಠದಲ್ಲಿ ಕುಳ್ಳಿರಿಸುತ್ತಾರೆ. ಮಾಲಿಕಾ ಮಂಗಳಾರತಿ, ಗಂಧಾಕ್ಷತೆ ಸಮಪರ್ಪಣೆ ಇತ್ಯಾದಿ ನಡೆಯುತ್ತದೆ. ಬಡಗು ಮಾಳಿಗೆಯಲ್ಲಿ ಸಿದ್ಧಗೊಂಡ ಅರಳು ಗದ್ದುಗೆಯಲ್ಲಿ ಗಂದಾದ್ಯುಪಚಾರ ನಡೆಯುತ್ತದೆ. ವಾದಿರಾಜರ ಕಾಲದಲ್ಲಿ ಪರ್ಯಾಯ ಸಭೆ ನಡೆಯುತ್ತಿದ್ದ ತಾಣ ಇದು ಎನ್ನುವ ಸಂಕೇತವಾಗಿ ಈ ಕಾರ್ಯಕ್ರಮ ಇಲ್ಲಿ ನಡೆಯುತ್ತದೆ. ಈ ರಾಜವೈಭವದ ಕಾರ್ಯಕ್ರಮಗಳ ಸರಮಾಲೆಯ ಕೊನೆಯ ಮಜಲು ರಾಜಾಂಗಣದ ದರ್ಬಾರು ಸಭೆ. ಅಲ್ಲಿ ಎಲ್ಲಾ ಶ್ರೀಪಾದರು ವಾದ್ಯಗೋಷ್ಠಿಯ ಮೆರವಣಿಗೆಯಲ್ಲಿ ಸುಮಾರು ಮುಂಜಾನೆ 7ರ ಸಮಯಕ್ಕೆ ರಾಜಾಂಗಣದ ಬೃಹತ್ ಸಭಾಭವನವನ್ನು ಪ್ರವೇಶಿಸುತ್ತಾರೆ. ಅದಾಗಲೇ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ರಾಜಾಂಗಣದಲ್ಲಿ ಆಸೀನರಾಗಿರುತ್ತಾರೆ. ಪರ್ಯಾಯ ವಿದಾಯ ಭಾಷಣ, ಪರ್ಯಾಯ ಶ್ರೀಪಾದರಿಂದ ಉದ್ದೇಶಿತ ಯೋಜನೆಗಳ ಪ್ರಕಟಣೆ, ಪರ್ಯಾಯ ಸಂದೇಶ, ಪ್ರಮುಖರಿಂದ ಅಭಿನಂದನೆ, ಪರ್ಯಾಯ ಪ್ರಶಸ್ತಿ ಪ್ರದಾನ ಇತ್ಯಾದಿಗಳು ನಡೆಯುತ್ತವೆ.
ಬಳಿಕ ನೆರೆದ ಅಸಂಖ್ಯ ಭಕ್ತರಿಗೆ ಷಡ್ರಸೋಪೇತವಾದ ಪಂಚಭಕ್ಷ್ಯ ಸಹಿತ ಭೋಜನ ಪ್ರಸಾದ ಸಮರ್ಪಣೆಯಾಗುತ್ತದೆ.

ಪೊಡವಿಗೊಡೆಯಗೆ ಚತುರ್ದಶ ಪೂಜೆಗಳು
ಉಡುಪಿ ಶ್ರೀಕೃಷ್ಣನಿಗೆ ಯತಿಗಳಿಂದಲೇ ಪೂಜೆ ನಡೆಸಲ್ಪಡುವುದು ವಿಶೇಷ. ಅಷ್ಟಮಠಗಳ ಯತಿಗಳನ್ನು ಹೊರತುಪಡಿಸಿ ಇತರ ಯಾರಿಗೂ ಕೃಷ್ಣ ಮೂರ್ತಿಯನ್ನು ಮುಟ್ಟಿ ಅರ್ಚಿಸುವ ಅಧಿಕಾರವಿಲ್ಲ. ಯತಿ ಕರಾರ್ಚಿತ ಕೃಷ್ಣನಿಗೆ ಪ್ರತಿದಿನ 14 ವಿಧದ ಪೂಜೆಗಳು ನಡೆಯುತ್ತವೆ. ಅವುಗಳೆಂದರೆ, 1. ನಿರ್ಮಾಲ್ಯ ವಿಸರ್ಜನ ಪೂಜೆ, 2. ಉಷ:ಕಾಲ ಪೂಜೆ, 3. ಅಕ್ಷಯ ಪಾತ್ರೆ- ಗೋಪೂಜೆ, 4. ಪಂಚಾಮೃತ ಅಭಿಷೇಕ ಪೂಜೆ, 5. ಉಧ್ವರ್ತನ ಪೂಜೆ, 6. ಕಲಶ ಪೂಜೆ, 7. ತೀರ್ಥ ಪೂಜೆ, 8. ಅಲಂಕಾರ ಪೂಜೆ, 9. ಅವಸರ ಸನಕಾದಿ ಪೂಜೆ, 10. ಮಹಾಪೂಜೆ, 11. ಚಾಮರ ಸೇವಾ ಪೂಜೆ, 12. ರಾತ್ರಿ ಪೂಜೆ, 13. ಮಂಟಪ ಪೂಜೆ, 14. ಶಯನೋತ್ಸವ ಪೂಜೆ.
ಅವುಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ನಡೆಯುವ ಪೂಜೆಗಳು 10. ಸಂಜೆ ಬಳಿಕ 4 ಪೂಜೆಗಳು ನಡೆಯುತ್ತವೆ. ಹೀಗೆ, ಚತುರ್ದಶ ಭುವನಗಳ ಒಡೆಯನಾದ ಭಗವಂತನ ಸನ್ನಿಧಿಯಲ್ಲಿ ಅನುದಿನವೂ ಚತುರ್ದಶ ಪೂಜೆಗಳು ನಡೆಯುತ್ತವೆ.

(ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭ: 13.01.2008)

ಜುಲೈ 21, 2010

ಉಡುಪಿ ಯುವಕನ ಕೈಹಿಡಿದ ಜರ್ಮನಿ ಗೃಹಿಣಿ!

ಪ್ರೀತಿ- ಪ್ರೇಮಕ್ಕೆ ಜಾತಿ, ಅಂತಸ್ತು, ದೇಶಕಾಲ ಯಾವುದೂ ಅಡ್ಡಿಯಾಗದು ಎಂಬ ಮಾತಿನೊಂದಿಗೆ ಹರೆಯವೂ ತೊಡಕಾಗದು ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಅದಕ್ಕೆ ಉಡುಪಿಯಲ್ಲಿ ನಡೆದ ಮದುವೆ ಪೂರಕವಾಗಿದೆ. ಜರ್ಮನಿಯ ಗೃಹಿಣಿಯೋರ್ವಳು ಉಡುಪಿ ಯುವಕನನ್ನು ಮೋಹಿಸಿ ಮದುವೆಯಾಗಿದ್ದಾಳೆ. 52ರ ಹರೆಯದ ಗ್ಯಾಬ್ರಿಯಲ್ ಮಾರ್ತಾ ಎಂಬಾಕೆ ಉಡುಪಿ ಬನ್ನಂಜೆ ನಿವಾಸಿ ಪ್ರಾಣೇಶ ಶೇಟ್ ಎಂಬ 38ರ ಯುವಕನ ಕೈಹಿಡಿದಿದ್ದಾಳೆ! ಹಿಂದೂ ಸಂಪ್ರದಾಯ ಪ್ರಕಾರ ಉಡುಪಿ ರಥಬೀದಿಯ ರಾಘವೇಂದ್ರ ಸ್ವಾಮಿ ಮಠದ ಮಂತ್ರಾಲಯ ಸಭಾಂಗಣದಲ್ಲಿ ವಿವಾಹ ಸಮಾರಂಭ ನಡೆದಿದ್ದು, ವಧೂ- ವರರ ಕಡೆಯವರೀರ್ವರೂ ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದರು.
ಜರ್ಮನಿಯಲ್ಲಿ ರೆಸಾರ್ಟ್ವೊಂದರ ಒಡತಿಯಾಗಿರುವ ಗ್ಯಾಬ್ರಿಯಲ್, 2005ರ ಡಿಸೆಂಬರ್ನಲ್ಲಿ ಉಡುಪಿಗಾಗಮಿಸಿದ್ದಳು. ಉಡುಪಿಯಲ್ಲಿ ಪ್ರವಾಸಿಗರ ಮಾಹಿತಿದಾರ (ಟೂರಿಸ್ಟ್ ಗೈಡ್) ಆಗಿರುವ ಪ್ರಾಣೇಶ ಶೇಟ್ನ ಪರಿಚಯವಾಗಿ, ಕ್ರಮೇಣ ಪರಿಚಯ ಪ್ರೇಮಕ್ಕೆ ತಿರುಗಿತು. ಬಳಿಕ 5- 6 ಬಾರಿ ಉಡುಪಿಗಾಗಮಿಸಿದ್ದ ಆಕೆ, ಪ್ರಾಣೇಶನ ಮನೆಗೂ ಬಂದಿದ್ದಳು. ಅವರಿಬ್ಬರೂ ರಿಜಿಸ್ಟರ್ಡ್ ಮದುವೆ ಆಗಿದ್ದರು.
ಆದರೂ, ಹಿಂದೂ ಸಂಪ್ರದಾಯ ಪ್ರಕಾರ ಮದುವೆಯಾಗಬೇಕೆಂಬ ಉತ್ಕಟ ಇಚ್ಛೆ ಈರ್ವರಿಗೂ ಇದ್ದ ಕಾರಣ ರಾಘವೇಂದ್ರ ಮಠದಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಶ್ರೀನಿವಾಸ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಮದುವೆ ನಡೆಸಲಾಯಿತು. ಮದುವೆಗೆ ವಧೂ- ವರರ ಕಡೆಯಿಂದ ತಲಾ ಸುಮಾರು 20- 25 ಮಂದಿ ಆಗಮಿಸಿದ್ದರು. ವರನ ಕಡೆಯವರೇ ವಧುವನ್ನು ಧಾರೆ ಎರೆದುಕೊಡುವ ಸಂಪ್ರದಾಯ ನಡೆಸಿದರು. ಗ್ಯಾಬ್ರಿಯಲ್ ಮಾರ್ತಾ- ಪ್ರಾಣೇಶ ಸತಿ- ಪತಿಯರಾಗಿ ಸಪ್ತಪದಿ ತುಳಿದರು. ವರ ಪ್ರಾಣೇಶನ ತಾಯಿ, ತಂಗಿ, ಭಾವ, ತಮ್ಮ ಸೇರಿದಂತೆ ಸಂಬಂಧಿಗಳು, ಮಿತ್ರರು ಭಾಗವಹಿಸಿದ್ದರು. ಗ್ಯಾಬ್ರಿಯಲ್ ವಿದೇಶಿ ಮಿತ್ರರೂ ಆಗಮಿಸಿದ್ದರು.
ಗ್ಯಾಬ್ರಿಯಲ್ ವಿವಾಹಿತೆಯಾಗಿದ್ದು, ಆಕೆಗೆ 25ರ ಹರೆಯದ ಮಗನೊಬ್ಬನಿದ್ದಾನೆ. ಆದರೆ, ಆಕೆ ಈಗ ವಿಚ್ಛೇದಿತೆ. ಆಕೆಗೆ ಈರ್ವರು ಸಹೋದರಿಯರು ಮತ್ತು ಓರ್ವ ಸೋದರ ಇದ್ದಾರೆ. ಅವಿವಾಹಿತನಾಗಿರುವ ಪ್ರಾಣೇಶ ಶೇಟ್ಗೆ ಓರ್ವ ತಮ್ಮ ಮತ್ತು ಒಬ್ಬಾಕೆ ತಂಗಿ ಇದ್ದಾರೆ. ತಂಗಿಗೆ ಮದುವೆ ಆಗಿದೆ.
ಗ್ಯಾಬ್ರಿಯಲ್ ಪುತ್ರ ಜರ್ಮನಿಯಿಂದ ತಾಯಿಗೆ ಫೋನಾಯಿಸಿ, ಶುಭಾಶಯ ಕೋರಿದ್ದ ಎಂದು ಗ್ಯಾಬ್ರಿಯಲ್ ಮಾರ್ತಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದಳು. ಇನ್ನು ಪ್ರಾಣೇಶನೊಂದಿಗೆ ಬಾಳುವುದಾಗಿ ತಿಳಿಸಿದ ಆಕೆ, 6 ತಿಂಗಳು ಉಡುಪಿಯಲ್ಲಿ ಹಾಗೂ ಇನ್ನುಳಿದ 6 ತಿಂಗಳು ಜರ್ಮನಿಯಲ್ಲಿರುವುದಾಗಿ ತಿಳಿಸಿದಳು. ಪ್ರಾಣೇಶನನ್ನು ಜರ್ಮನಿಗೆ ಕರೆದೊಯ್ಯುವುದಾಗಿ ತಿಳಿಸಲು ಮರೆಯಲಿಲ್ಲ.
ಜರ್ಮನಿ ಗೃಹಿಣಿಯ ಯಾವ ಮೋಹ ಉಡುಪಿಯ ಯುವಕನನ್ನು ಮೋಡಿ ಮಾಡಿತೋ? ಎಂದು ಮದುವೆಗಾಗಮಿಸಿದವರು ತಮ್ಮ ತಮ್ಮಲ್ಲೇ ಗುಸುಗುಡುತ್ತಿದ್ದರು!

(ಸಂಯುಕ್ತ ಕರ್ನಾಟಕ: ಡಿ. 2, 2009)

ಹರಿ- ಹರರಲ್ಲಿ ಬೇಧವಿಲ್ಲವೆಂದಿನಿಪ ಕ್ಷೇತ್ರ: ಕ್ರೋಡಾಶ್ರಮ

              ಶೂಲ ಸುದರ್ಶನ ಸುರುಚಿಂ ಫಾಲೇಂದೂಜ್ವಲ ಕಿರೀಟ ಶೋಭಿತ ಶಿರಸಂ/
               ಪಂಕಜ ಮುಖಕರ ಚರಣಂ ಶ್ರೀ ಶಂಕರ ನಾರಾಯಣಂ ವಂದೇ//

ಉಡುಪಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿ ಕರಾವಳಿ ತೀರ ಸಮೀಪದ ಪ್ರಸಿದ್ದ ಧಾರ್ಮಿಕ ಯಾತ್ರಾಸ್ಥಳ ಕ್ರೋಡಾಶ್ರಮ. ಇಂದ್ರಾಳೀ ನದೀ ತೀರದಲ್ಲಿರುವ, ಪಡುದಿಕ್ಕಿನಲ್ಲಿ ಮುನ್ನೂರು ಬ್ರಾಹ್ಮಣ ಕುಲಗಳಿದ್ದ ಪಡುಮನ್ನೂರೆಂಬ ಈ ಕ್ಷೇತ್ರ ಕೊಡವೂರು ಎಂದೇ ಪ್ರಸಿದ್ದವಾಗಿದೆ.
ಹಿಂದೆ ಭೂಲೋಕದ ಜನರಲ್ಲಿ ಕೆಲವರು ವಿಷ್ಣುವನ್ನು, ಇನ್ನೂ ಕೆಲವರು ಶಿವನನ್ನೂ ಪೂಜಿಸುತ್ತಾ ತಮ್ಮ ತಮ್ಮ ದೇವರೇ ಮೇಲೆಂದು ಪರಸ್ಪರ ಕಚ್ಚಾಡುತ್ತಿದ್ದಾಗ, ತ್ಯಾಗಿಯೂ ದೈವಾರಾಧಕನೂ ಆದ ಕ್ರೋಡನೆಂಬ ಮುನಿ ಪುಂಗವ ದ್ವೈತಾದ್ವೈತಗಳ ಉದ್ದೇಶ ಸಾರ್ಥಕವಾಗುವಂತೆ ಶಂಕರ ಹಾಗೂ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಭಕ್ತರಿಗೆ ದರ್ಶನವೀಯುವಂತಾಗಬೇಕು ಎಂದು ತಪಸ್ಸಿಗೆ ಕುಳಿತರು.
ಅದೇ ಸಂದರ್ಭದಲ್ಲಿ ದಾನವರೀರ್ವರು ಶಿವ ಮತ್ತು ವಿಷ್ಣು ಒಂದೇ ರೂಪದಲ್ಲಿ ಬಂದು ಕೊಲ್ಲುವುದಿದ್ದರೆ ನಮಗೆ ಮರಣ ಬರಲಿ ಎಂದು ಶಿವನಿಂದ ವರ ಪಡೆದಿದ್ದರು. ಆ ದಾನವರೀರ್ವರೂ ದೇವಲೋಕಕ್ಕೆ ದಾಳಿ ಮಾಡಿ ದೇವೇಂದ್ರನನ್ನು ಓಡಿಸಿ ದೇವತೆಗಳನ್ನು ಸಂಕಷ್ಟಕ್ಕೀಡುಮಾಡಿದರು. ದೇವತೆಗಳೆಲ್ಲ ಬ್ರಹ್ಮನ ಆಜ್ಞೆಯಂತೆ ಶಂಕರ ನಾರಾಯಣರಿಬ್ಬರೂ ಒಂದೇ ದೇಹದಲ್ಲಿ ಬಂದು ದಾನವರನ್ನು ಸಂಹರಿಸಲು ಪ್ರಾರ್ಥಿಸಿದರು.
ಇತ್ತ, ಕ್ರೋಡ ಮುನಿಯ ಘೋರ ತಪಸ್ಸಿಗೆ ಒಲಿದ ಶಂಕರ-ನಾರಾಯಣರಿಬ್ಬರೂ ಒಂದಾಗಿ ಬಲಭಾಗದಲ್ಲಿ ಶಂಕರನೂ ಎಡಭಾಗದಲ್ಲಿ ನಾರಾಯಣನೂ ಒಟ್ಟಾಗಿ ಕಾಣಿಸಿಕೊಂಡು ತಮ್ಮೊಳಗೆ ಬೇಧವಿಲ್ಲ ಎಂದೂ, ದ್ವೈತಾದ್ವೈತಿಗಳು ಹೊಡೆದಾಡಬಾರದೆಂದು ನುಡಿದು ಮುನಿಯ ಪ್ರಾರ್ಥನೆಯಂತೆ ಶಾಶ್ವತವಾಗಿ ಅಲ್ಲೇ ನೆಲೆ ನಿಂತರು. ಕ್ರೋಡಮುನಿಯ ಉದ್ದೇಶ ಹಾಗೂ ಕಾರ್ಯಗಳು ಜನಕ್ಕೆ ಆದರ್ಶವಾಗಿದ್ದು, ಮುಂದೆ ಈ ಕ್ಷೇತ್ರ `ಕ್ರೋಡಾಶ್ರಮ' ಎಂದು ಪ್ರಸಿದ್ಧಿ ಆಗಲೆಂದು ಹರಸಿದರು.
ಅತ್ತ ದೇವತೆಗಳ ಪ್ರಾರ್ಥನೆಯಂತೆ ಶಂಕರ ನಾರಾಯಣರು ಒಂದಾಗಿ ಒಂದೇ ದೇಹ ಧರಿಸಿ ಆಯುಧ ಪಾಣಿಯಾಗಿ ದಾನವರನ್ನು ಯುದ್ದದಲ್ಲಿ ಸೋಲಿಸಿ ಮೋಕ್ಷ ಕರುಣಿಸಿದರು. ಕ್ರೋಡಾಶ್ರಮದಲ್ಲಿ ಶಂಕರ ನಾರಾಯಣನೊಂದಿಗೆ ಎಲ್ಲ ದೇವತೆಗಳೂ, ಭೂತ ಗಣಗಳೂ ನೆಲೆ ನಿಂತರು. ಎಡಬದಿಯಲ್ಲಿ ದುರ್ಗೆ, ನಂದಿಕೇಶ್ವರ, ಕ್ಷೇತ್ರಪಾಲ, ಬ್ರಹ್ಮಶಾಸ್ತಾರ. ಬಲಬದಿಯಲ್ಲಿ ಗಣಪತಿ, ಮುಖ್ಯಪ್ರಾಣ.
ದೇವಸ್ಥಾನದ ತುಸು ದೂರದಲ್ಲಿ ಬೊಬ್ಬರ್ಯ, ಕಂಗಣಬೆಟ್ಟು ಪಂಜುರ್ಲಿ, ಭಗವತಿ ಮಾರಿಯಮ್ಮ ದೇವಾಲಯ, ಕೆರೆಮಠ- ಕಲ್ಲಮಠ- ಕಂಬಳಕಟ್ಟದ ಮಾಣಿ ದೇವಾಲಯ, ಬೆಳ್ಕೆಳೆ ಮಹಾಲಿಂಗೇಶ್ವರ, ಕಾನಂಗಿ ಮದರಂಗಿ ಬೆಟ್ಟು ರಕ್ತೇಶ್ವರಿ, ವಡಭಾಂಡೇಶ್ವರದ ಬಲರಾಮ, ಮಂಡೆ ಚಾವಡಿ ಮಠ ಮುಂತಾದ ಹತ್ತು ಹಲವು ದೇವಸ್ಥಾನ- ಮಠಗಳಿರುವ ಈ ಕ್ಷೇತ್ರ ನಿಜಕ್ಕೂ ಆಸ್ತಿಕರ ಆಸಕ್ತಿ ಕೆರಳಿಸುತ್ತದೆ.
ಇಲ್ಲಿಯ ದೇವಸ್ಥಾನದ ಗರ್ಭಗುಡಿಯಲ್ಲಿ ಮೂಲಸ್ಥಾನ ದೇವತೆಯಾಗಿ ಆರಾಧಿಸುವ ಶಂಕರ ನಾರಾಯಣ ದೇವರು ಲಿಂಗಾಕಾರದಲ್ಲಿದ್ದು, ಪಾಣಿಪೀಠಕ್ಕಿಂತ ತಗ್ಗಿನಲ್ಲಿ ಒಂದಕ್ಕೊಂದು ಆಲಂಗಿಸಿಕೊಂಡಿದ್ದು, ತಳದಲ್ಲಿ ಎರಡೂ ಲಿಂಗಗಳು ಒಂದೇ ಆಗಿದ್ದು, ಮೇಲಕ್ಕೆ ಎರಡು ಪಾಲಾಗಿದೆ. ಬಲಿ ದೇವತಾಮೂರ್ತಿಯಾಗಿ ಆರಾಧಿಸುವ ಕಂಚಿನ ಶಂಕರ ನಾರಾಯಣ ವಿಗ್ರಹ ಆಕರ್ಷಕವಾಗಿದೆ. ಕೆರೆಕಟ್ಟೆಯ ಮೂಡುಗಣಪತಿ ಇಷ್ಟಾರ್ಥ ಸಿದ್ದಿಗಾಗಿ ನೆಲೆನಿಂತು ತನ್ನ ವಿಶೇಷ ಕಾರಣೀಕದಿಂದ ಪ್ರಸಿದ್ದಿಯಾಗಿದೆ.
ಗುರು ರಾಘವೇಂದ್ರ ರಾಯರ ವೃಂದಾವನ, ಮಲ್ಲಿಕಾರ್ಜುನ ದೇವರು ಹಾಗೂ ನಾಗಬನಗಳಿಂದ ಕೂಡಿದ ಈ ದೇವಸ್ಥಾನದಲ್ಲಿ ಹಿಂದೂಗಳ ಬಹುತೇಕ ಹಬ್ಬ ಹರಿದಿನಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಲಕ್ಷ ದೀಪೋತ್ಸವ, ರಾಯರ ಆರಾಧನೆ, ಶಿವರಾತ್ರಿ, ನವರಾತ್ರಿಗಳ ದಿನಗಳಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಆಕರ್ಷಿಸುತ್ತದೆ.

(ಸಂಯುಕ್ತ ಕರ್ನಾಟಕ: ಜ. 10, 2009)

ಜುಲೈ 15, 2010

ಅಪೂರ್ವ ಸೊಬಗಿನ ಕಟ್ಟಿಗೆ ರಥ

ಉಡುಪಿ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಅಲ್ಲಿನ ಶ್ರೀಕೃಷ್ಣ ಮಠ, ಅಷ್ಟ ಮಠಗಳು. ಮಠದೊಳಗಿನ ಸೊಬಗು, ಕೃಪಾಸಾಗರ ಆಚಾರ್ಯ ಮಧ್ವ ಪ್ರತಿಷ್ಠಾಪಿತ, ರುಕ್ಮಿಣೀ ಕರಾರ್ಚಿತ ಶ್ರೀಕೃಷ್ಣನ ಮೂರ್ತಿ. ಬಾಯಿ ನೀರೂರಿಸುವ ಘಮಘಮಿಸುವ ಊಟ!
ಇವಿಷ್ಟೇ ಅಲ್ಲ. ಉಡುಪಿಯಲ್ಲಿ ಇನ್ನೂ ಇದೆ. ಚತುರ್ದಶ ಭುವನದೊಡೆಯನ ಸಂಭ್ರಮಕ್ಕಾಗಿ ಚಿನ್ನ- ಬೆಳ್ಳಿ ರಥಗಳ ಹೊರತಾಗಿಯೂ ಮೂರು ತೇರುಗಳಿವೆ. ಇವೆಲ್ಲವೂ ಕೃಷ್ಣಮೂರ್ತಿಯನ್ನಿಟ್ಟು ಉತ್ಸವವನ್ನಾಚರಿಸಿ ಸಂಭ್ರಮಿಸಲು. ಆದರೆ, ಉಡುಪಿಯಲ್ಲಿ ಇನ್ನೂ ಒಂದು ರಥವಿದೆ. ಅದೇ ಕಟ್ಟಿಗೆ ರಥ!
ಅನ್ನಬ್ರಹ್ಮ ಎಂದೇ ಕರೆಯಲ್ಪಡುವ ಕೃಷ್ಣ ಸನ್ನಿಧಿಗೆ ಬರುವ ಲಕ್ಷಾಂತರ ಮಂದಿ ಭಕ್ತರ ಅಶನ ಸಮಸ್ಯೆಯನ್ನು ತಣಿಸಿ, ಘಡ್ರಸೋಪೇತವಾದ ಭೋಜನ ನಿರಾತಂಕವಾಗಿ ನಡೆಸಲು ಪೂರಕವಾದ ಉರುವಲು ವ್ಯವಸ್ಥೆಗೆ ಸುಗಮವನ್ನಾಗಿಸಲು ಈ ರಥ! ಸಣ್ಣ ವಿಚಾರವಾದರೂ ಆ ಕುರಿತು ಚಿಂತಿಸಿ, ಅದಕ್ಕೊಂದು ಆಧ್ಯಾತ್ಮಿಕ ಸ್ಪರ್ಷ ನೀಡಿದ ಆ ಮಹೋದಯನಿಗೆ ನಮೋ ನಮ: ಎನ್ನೋಣವೇ?
ಕೃಷ್ಣಮಠದೆದುರಿನ ಮಧ್ವಸರೋವರದ ಪಾರ್ಶ್ವಭಾಗದಲ್ಲಿ ಕಟ್ಟಿಗೆ ರಥದ ಶಾಶ್ವತ ಸ್ಥಾನ. ಅಲ್ಲಿಯೇ ಸಮೀಪ ಅನ್ನಬ್ರಹ್ಮನ ನೈವೇದ್ಯ ಸಿದ್ಧಗೊಳ್ಳುವ ಪಾಕಶಾಲೆ. ಅದಕ್ಕೆ ಹೊಂದಿಕೊಂಡಂತೆ ಕಟ್ಟಿಗೆ ರಥಕ್ಕೊಂದು ನೆಲೆಯನ್ನು ಒದಗಿಸಲಾಗಿದೆ. ನಿರಂತರ ಅನ್ನದಾನಕ್ಕೆ ಉರುವಲು ಸಮಸ್ಯೆಯಾಗದಿರಲಿ ಎಂಬ ಸದಾಶಯದಿಂದ ಕಟ್ಟಿಗೆ ರಥ ನಿರ್ಮಾಣ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು, ಅದನ್ನು ಪರ್ಯಾಯಪೂರ್ವ ವಿಧಿಗಳಲ್ಲಿ ಒಂದಾಗಿಸಿದ್ದಾರೆ. ಈ ಕ್ರಮವನ್ನು ಜಾರಿಗೆ ತಂದವರು ಪ್ರಾಯಶ: ಉಡುಪಿ ಪರ್ಯಾಯ ಮಹೋತ್ಸವಕ್ಕೆ ನಾಡಹಬ್ಬದ ರೂಪಕೊಟ್ಟ ವಾದಿರಾಜ ಸಾರ್ವಭೌಮರೇ ಇರಬೇಕು.
ಪರ್ಯಾಯ ವಹಿಸಿ ಕೃಷ್ಣಪೂಜಾ ದೀಕ್ಷೆ ವಹಿಸಿಕೊಳ್ಳುವ ಅಷ್ಟಮಠಗಳ ಯತಿಗಳು ಕಟ್ಟಿಗೆ ಮುಹೂರ್ತ ಅಂದರೆ, ಕಟ್ಟಿಗೆ ಒಟ್ಟುವ ಕಾರ್ಯವನ್ನು ಮಾಡಲೇಬೇಕು. ಪರ್ಯಾಯಪೂರ್ವ ವಿಧಿಗಳಲ್ಲಿ ಬಾಳೆ ಮುಹೂರ್ತ (ಬಾಳೆಗಿಡ ನೆಡುವುದು) ಪ್ರಥಮದ್ದಾದರೆ, ಕಟ್ಟಿಗೆ ಮುಹೂರ್ತ ಎರಡನೆಯದು. ಪರ್ಯಾಯ ವಹಿಸಿಕೊಳ್ಳುವ ಸ್ವಾಮೀಜಿಯವರು ತಮ್ಮ ಮುಂದಿನ 2 ವರ್ಷಗಳಿಗೆ ಬೇಕಾಗುವಷ್ಟು ಉರುವಲನ್ನು ಸಂಗ್ರಹಿಸಿ, ರಥದ ಮಾದರಿಯಲ್ಲಿ ಒಟ್ಟುಮಾಡುತ್ತಾರೆ. ತಮ್ಮ ಪರ್ಯಾಯ ಕಾಲದಲ್ಲಿ ಒಟ್ಟಿಟ್ಟಿರುವ ಆ ಕಟ್ಟಿಗೆಯನ್ನು ಬಳಸಬಹದು. ಮುಂದಿನ ರಥ ನಿಮರ್ಾಣ ಭಾವೀ ಪರ್ಯಾಯ ಶ್ರೀಗಳಿದ್ದು. ಈ ಚಕ್ರ ಮುಂದುವರಿಯುತ್ತಲೇ ಇರುತ್ತದೆ. ಇದುವರೆಗೆ ಅನೂಚಾನವಾಗಿ ನಡೆದುಬಂದಿದೆ.
ಈಗ ಅನಿಲಾಧಾರಿತ ಅಡುಗೆ ವ್ಯವಸ್ಥೆ ಜಾರಿಗೆ ಬಂದಿದ್ದರೂ ಕಟ್ಟಿಗೆ ಮುಹೂರ್ತ ಕೈಬಿಟ್ಟಿಲ್ಲ. ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಕೃಷ್ಣಮಠ ಪ್ರಾಂಗಣ ಪರಿಸರದಲ್ಲಿ ಕಟ್ಟಿಗೆ ರಥಕ್ಕೊಂದು ಶೋಭೆ ಇದೆ.

(ಸಂಯುಕ್ತ ಕರ್ನಾಟಕ: ನ. 9, 2008)