ಮಾರ್ಚ್ 17, 2010

ನೋಡಬನ್ನಿರೊ ಪ್ರಕೃತಿ ಸಿರಿಯ ಆಡುಂಬೊಲ

ಕೇರಳ ರಾಜ್ಯ `ದೇವರ ನಾಡು' ಎಂದೇ ಜನಜನಿತವಾಗಿದ್ದರೆ, ದೇವಳ ನಗರ ಉಡುಪಿ ಕೇಂದ್ರಸ್ಥಾನ ಹೊಂದಿರುವ ಉಡುಪಿ ಜಿಲ್ಲೆಯನ್ನು ಪ್ರಾಕೃತಿಕ ಸೊಬಗಿನ ಬೀಡು ಎಂದು ಕರೆಯಲಡ್ಡಿಯಿಲ್ಲ. ಪ್ರವಾಸಿಗರನ್ನು ಕೈಬೀಸಿ ಕರೆವ ಅದೆಷ್ಟೋ ತಾಣಗಳು ಉಡುಪಿ ಜಿಲ್ಲೆಯಲ್ಲಿವೆ. ಆದರೆ, ನೋಡುವ ಕಣ್ಣುಗಳು ಬೇಕಷ್ಟೇ!
ನಿಸರ್ಗ ಚೆಲುವೆಣ್ಣಿನ ನಿಟ್ಟನಡುಗುಂಕುಮದ ಬೊಟ್ಟಂತೆಸೆವ ಉಡುಪಿ ಜಿಲ್ಲೆ, ತನ್ನದೇ ಆದ ಪ್ರಾಕೃತಿಕ ಸೊಬಗು ಹೊಂದಿದೆ. ಇಲ್ಲಿನ ಪ್ರವಾಸಿ ತಾಣಗಳು ಉಳಿದೆಡೆಗಳಿಗಿಂತ ಭಿನ್ನವಾಗಿ ತನ್ನದೇ ಆದ ವೈಶಿಷ್ಟ್ಯತೆ ಮೆರೆದಿವೆ. ಇಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ, ಸಾಹಸಿ ಪ್ರವಾಸೋದ್ಯಮ, ಕಡಲತೀರದ ಪ್ರವಾಸೋದ್ಯಮ..... ಹೀಗೆ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಕಷ್ಟು ಅವಕಾಶಗಳಿವೆ.
ಪ್ರವಾಸೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಕೇರಳ ಹಾಗೂ ಗೋವಾ ರಾಜ್ಯಗಳ ನಡುವಿರುವ ಉಡುಪಿ ಜಿಲ್ಲೆಯಲ್ಲಿಯೇ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳಬೇಕಾದ ಕೆಲಸ ಆಗಬೇಕಿದೆ. ದ್ವೈತ ಸಿದ್ಧಾಂತದ ಕೇಂದ್ರಬಿಂದುವಾದ ಉಡುಪಿ ಶ್ರೀಕೃಷ್ಣ ಮಠ ದರ್ಶನಾರ್ಥಿಗಳಾಗಿ ಬರುವ ಪ್ರವಾಸಿಗರು, ತಮ್ಮ ಪ್ರವಾಸದ ರಸಕ್ಷಣಗಳನ್ನು ಮತ್ತಷ್ಟು ಗಟ್ಟಿಯಾಗಿಸಲು ನೆರೆಯ ಗೋವಾಕ್ಕೆ ತೆರಳುತ್ತಿರುವುದನ್ನು ಕಾಣುತ್ತೇವೆ. ಅಲ್ಲಿನ ಎಲ್ಲಾ ಸವಲತ್ತುಗಳು ಉಡುಪಿ ಜಿಲ್ಲೆಯಲ್ಲಿ ಲಭಿಸುವಂತಾಗಬೇಕಾಗಿರುವುದು ಅಪೇಕ್ಷಣೀಯ.
ಆಧ್ಯಾತ್ಮಿಕವಾಗಿ ಕೀರ್ತಿ ಪತಾಕೆಯನ್ನು ದಿಗ್ದಿಗಂತದಲ್ಲಿ ಆರೋಹಿಸಿರುವ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪ್ರೇಕ್ಷಣೀಯ ದೇವಾಲಯಗಳಿವೆ, ಚರ್ಚು- ಬಸದಿಗಳಿವೆ. ಆಚಾರ್ಯ ಮಧ್ವರಿಂದ ಪ್ರತಿಷ್ಠಾಪಿತ ಸಾಲಿಗ್ರಾಮ ಶಿಲೆಯ ಕೃಷ್ಣ ಮೂರ್ತಿ ಕೃಷ್ಣಮಠದಲ್ಲಿದ್ದರೆ, ಈ ಮಠದ ಪ್ರಾಂಗಣ ಪರಿಸರದಲ್ಲಿರುವ ಅಷ್ಟಮಠಗಳು, ಗೀತಾಮಂದಿರ, ಕಟ್ಟಿಗೆ ರಥ ಇತ್ಯಾದಿಗಳೂ ನೋಡತಕ್ಕಂಥವುಗಳೇ. ಪ್ರತೀ ಎರಡು ವರ್ಷಗಳಿಗೊಮ್ಮೆ ಬರುವ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಪರ್ಯಾಯವೇ ಸಾಟಿ. ಜೊತೆಗೆ ಅಂಬಲಪಾಡಿ, ಕಡಿಯಾಳಿ, ಕೋಟೇಶ್ವರ ಕೋಟಿಲಿಂಗೇಶ್ವರ, ಕುಂಭಾಶಿ ಆನೆಗುಡ್ಡೆ ವಿನಾಯಕ, ಹಟ್ಟಿಯಂಗಡಿ ಗಣೇಶ ಸನ್ನಿಧಿ, ಕೊಲ್ಲೂರು ಮೂಕಾಂಬಿಕೆ ಕ್ಷೇತ್ರ ಮೊದಲಾದವುಗಳು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಮುಕುಟ ಮಣಿಗಳು. ಜೈನಧರ್ಮ ಕ್ಷೇತ್ರಗಳಾದ ಕಾರ್ಕಳ ಬಸದಿಗಳು, ವರಂಗ ಬಸದಿ ಇತ್ಯಾದಿಗಳೂ, ಕಾರ್ಕಳ ಅತ್ತೂರು ಚರ್ಚ್ ಕ್ರೈಸ್ತಧರ್ಮ ಕ್ಷೇತ್ರವಾಗಿ ಗಮನೀಯ ಮನ್ನಣೆ ಪಡೆದ ತಾಣಗಳು. ಶೈಕ್ಷಣಿಕ ಕೇಂದ್ರವಾಗಿರುವ ಮಣಿಪಾಲದಲ್ಲಿ ಆಸ್ಪತ್ರೆ ವಠಾರದಲ್ಲಿರುವ ವಸ್ತುಸಂಗ್ರಹಾಲಯ, ಪ್ಲಾನಿಟೋರಿಯಂ, ಇದುವರೆಗೆ ಸಾರ್ವಜನಿಕರಿಗೆ ಮುಕ್ತವಾಗಿಲ್ಲದಿದ್ದರೂ ಮುಂದೊಂದು ದಿನ ಈ ಅವಕಾಶ ಕಲ್ಪಿಸುವ ಮಣಿಪಾಲದ ಸಂಸ್ಕೃತಿ ಗ್ರಾಮ (ಹೆರಿಟೇಜ್ ವಿಲೇಜ್) ಪ್ರವಾಸಿಗರಿಗೆ ಮುದ ನೀಡುವ ಸ್ಥಳಗಳು.
ಜಿಲ್ಲೆಯ ಪಡುವಣ ಬದಿಯಲ್ಲಿ ಉದ್ದಕ್ಕೂ ಚಾಚಿಕೊಂಡಿರುವ ಅರಬ್ಬೀ ಸಮುದ್ರತೀರ ಕಡಲು ಪ್ರವಾಸೋದ್ಯಮದ ಹೆಬ್ಬಾಗಿಲು. ಕಾಪು, ಮಲ್ಪೆ, ಮರವಂತೆ, ಒತ್ತಿನಾಣೆ ಇತ್ಯಾದಿ ಹೆಸರಿಸಬೇಕಾದ ತಾಣಗಳು. ಪ್ರಕೃತಿ ವೈಚಿತ್ರ್ಯದ ಸೈಂಟ್ ಮೇರಿಸ್ ದ್ವೀಪ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುವ ತಾಣ.
ಸಾಹಸಿ ಪ್ರವಾಸೋದ್ಯಮಕ್ಕೂ ವಿಫುಲ ಅವಕಾಶವಿರುವ ಉಡುಪಿ ಜಿಲ್ಲೆ ಚಾರಣಿಗರಿಗೂ ಅವಕಾಶ ಕಲ್ಪಿಸಿಕೊಟ್ಟಿದೆ. ಕೊಡಚಾದ್ರಿ ಚಾರಣಕ್ಕೆ ಹೆಸರಾದರೆ, ಸೀತಾನದಿ ವಾಟರ್ರ್ಯಾಫ್ಟಿಂಗ್ ಸಾಹಸಿ ಪ್ರವಾಸೋದ್ಯಮಕ್ಕೆ ತೆರೆದ ಬಾಗಿಲು. ಜೊಮ್ಲುತೀರ್ಥ, ಆನೆಝರಿ ಮೊದಲಾದವುಗಳನ್ನು ಈ ಸಾಲಿಗೆ ಸೇರಿಸಬಹುದು. ಅರಣ್ಯ ಪ್ರವಾಸೋದ್ಯಮಕ್ಕೆ ಆನೆಝರಿ, ಒತ್ತಿನಾಣೆ ಇತ್ಯಾದಿಗಳು ಉದಾಹರಣೆ.
ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ವೃದ್ಧಿಪಡಿಸಲು ಕೇವಲ ರಸ್ತೆ ಸಂಪರ್ಕವನ್ನು ಉತ್ತಮಪಡಿಸಿದರಷ್ಟೇ ಸಾಕು. ಮಿಕ್ಕೆಲ್ಲವೂಗಳೂ ತನ್ನಷ್ಟಕ್ಕೆ ತಾನೇ ಸಾಕಾರಗೊಳ್ಳುತ್ತದೆ. ಅತಿಥಿ ಸತ್ಕಾರಕ್ಕೆ ಪರಂಪರೆಯ ಸ್ಪರ್ಷ ಜಿಲ್ಲೆಯಲ್ಲಿ ಅನಾದಿಕಾಲದಿಂದಲೂ ಇರುವುದರಿಂದ ಸರ್ವೇಸಾಮಾನ್ಯವಾಗಿ ಎಲ್ಲಾ ದೇವಳಗಳಲ್ಲಿ ಉತ್ತಮ ಊಟ, ತಂಗಲು ಸೂಕ್ತ ವ್ಯವಸ್ಥೆ ಇತ್ಯಾದಿಗಳು ಲಭ್ಯವಿದೆ.
ಆದರೆ, ಎಲ್ಲವೂ ಕಮರ್ಷಿಯಲ್ ಆಗಿರುವ ಈ ದಿನಗಳಲ್ಲಿ ಹಣ ನೋಡಿ ಸವಲತ್ತು ಕೊಡುವಂತಾಗಬಾರದು. ಸವಲತ್ತಿಗೆ ತಕ್ಕಂತೆ ಹಣ ನೀಡುವಂತಾಗಬೇಕು, ಸೇವಾಮನೋಭಾವ ಮನೆಮಾಡಬೇಕು. ಪ್ರವಾಸೋದ್ಯಮ ಉಳ್ಳವರಿಗೆ ಮಾತ್ರ ಎಂಬಂತಾಗದೇ ಜನಸಾಮಾನ್ಯರಿಗೂ ಅದು ಲಭಿಸಬೇಕು, ಅದರ ಲಾಭ ಸಿಗುವಂತಾಗಬೇಕು. ಅದಾದಾಗ ಮಾತ್ರ ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಸಾಧ್ಯ. ಇದು ಪ್ರತಿಯೋರ್ವರ ಕರ್ತವ್ಯವೂ ಆಗಿದೆ.

ಉಡುಪಿ ಮಸಾಲೆ ದೋಸೆಗೆ ತವರು!
ಹೋಟೆಲ್ ಉದ್ಯಮಕ್ಕೆ ಉಡುಪಿ ಹೆಸರುವಾಸಿ. ಉಡುಪಿ ಹೋಟೆಲ್ ಎಂದಾಕ್ಷಣ ಪಕ್ಕನೇ ನೆನಪಿಗೆ ಬರುವುದು ಮಸಾಲೆ ದೋಸೆ. ಅದರ ಉಗಮ ಉಡುಪಿಯಿಂದಲೇ ಆದದ್ದು. ವುಡ್ಲ್ಯಾಂಡ್ಸ್ ಹೋಟೆಲ್ ಮಾಲೀಕ ಕಡಂದಲೆ ಕೃಷ್ಣಭಟ್ ಮಸಾಲೆ ದೋಸೆ ಜನಕ. ಮಸಾಲೆ ದೋಸೆ ಕಲ್ಪನೆಗೆ ಸ್ಯಾಂಡ್ವಿಚ್ ಪ್ರೇರಣೆ. ಮಸಾಲೆ ದೋಸೆಯ ಸೋದರ ಉತ್ತಪ್ಪ ಕೂಡಾ ಹುಟ್ಟಿದ್ದು ಇಲ್ಲಿಯೇ.
ಸಿದ್ಧ ಆಹಾರವನ್ನು ಪೊಟ್ಟಣದಲ್ಲಿ ತುಂಬಿಸಿ, ಎಂದು ಬೇಕಾಗಿದ್ದಾಗ ಅಂದೇ ಬಳಸಲು ಅವಕಾಶ ಕಲ್ಪಿಸುವ ಜಾಗತಿಕ ಖ್ಯಾತಿಯ ಎಂಟಿಆರ್ ಪ್ರವರ್ತಕ ಸದಾನಂದ ಮಯ್ಯ ಕೂಡಾ ಉಡುಪಿ ಜಿಲ್ಲೆಯವರೇ.

ಸಂಯುಕ್ತ ಕರ್ನಾಟಕ: ಫೆ. 4, 2008

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ