ಮಾರ್ಚ್ 18, 2010

ಉದಿಯಾವರದ ಸಿದ್ಧಿವಿನಾಯಕ ಕ್ಷಿಪ್ರಫಲದಾಯಕ


ದೇವಾಲಯಗಳು ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯ ಸಂಗಮ. ನಮ್ಮ ಸಂಸ್ಕೃತಿಯ ಕೇಂದ್ರಬಿಂದು. ದಿವ್ಯತೆಯ ಅರಿವನ್ನುಂಟುಮಾಡಿ, ಬದುಕಿಗೆ ಚೈತನ್ಯವನ್ನು, ಪ್ರೇರಣೆಯನ್ನು, ಜೀವನೋತ್ಸಾಹವನ್ನು ತಂದೀಯುವ ದಿವ್ಯ ತಾಣ. ಪರಶುಧರ ಸೃಷ್ಟಿಯೆಂದೇ ಪರಿಗಣಿತವಾದ ಉಡುಪಿ ಜಿಲ್ಲೆ ಅನೇಕ ಕಾರಣೀಕ ದೇವಸ್ಥಾನಗಳಿಂದ ಮಹಾಕ್ಷೇತ್ರವೆಂದು ಪ್ರಸಿದ್ಧಿ. ಅಂಥವುಗಳಲ್ಲಿ ಅಳುಪರ ರಾಜಧಾನಿಯಾಗಿ ಮೆರೆದ ಉದಿಯಾವರ ಅಥವಾ ಉದ್ಯಾವರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಈ ಪರಿಸರದ ಪ್ರಾಚೀನ ಕಾರಣೀಕ ದಿವ್ಯಸಾನ್ನಿಧ್ಯಗಳಲ್ಲೊಂದು.

ವಾಗೀಶಾದ್ಯ: ಸುಮನಸ: ಸವರ್ಾರ್ಥಾನುಮುಪಕ್ರಮೇ /
ಯಂ ನತ್ವಾ ಕೃತಕೃತ್ಯಾಸ್ಸ್ಯು: ತಂ ನಮಾಮಿ ಗಜಾನನಂ //

ಸುಮಾರು 7-8ನೇ ಶತಮಾನಕ್ಕೆ ಸೇರಿದ ಅತ್ಯಂತ ವಿರಳವಾದ ದ್ವಿಬಾಹು ಗಣಪತಿಯ ಮೂರ್ತಿಯಿರುವ ದೇವಳ ಇದಾಗಿದ್ದು, ಇತಿಹಾಸ ಸಂಶೋಧಕ ದಿ. ಡಾ. ಪಿ. ಗುರುರಾಜ ಭಟ್ ಪ್ರಕಾರ, ಇದು ಅಳುಪರ ಕಾಲದ ಆಲಯ. ಜೈನ- ಹಿಂದೂ ಧರ್ಮಗಳ ಮಿಶ್ರಿತ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಅದರ ಕುರುಹಾಗಿ ದೇವಳದೆದುರಿನ ಧ್ವಜಸ್ತಂಭದ ಬಳಿ ಇರುವ ಮಾನಸ್ತಂಭವನ್ನು ಹೋಲುವ ಕಲ್ಲುಗಂಬ ಸಾಕ್ಷಿಯಾಗಿದೆ.
15ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ದೇವಳಕ್ಕೆ ಉಂಬಳಿ ನೀಡಿದ, ಕದಂಬ ವಂಶಜ ಮಯೂರವರ್ಮನ ಆಳ್ವಿಕೆಗೊಳಪಟ್ಟಿರುವ ಬಗೆಗೆ ಶಾಸನಗಳು ದಾಖಲೆ ನೀಡುತ್ತವೆ. ಈ ದೇವಳ ಪ್ರಾಚೀನ ರಾಜರುಗಳ ಆಳ್ವಿಕೆಗೊಳಪಟ್ಟು ರಾಜಾಶ್ರಯದಲ್ಲಿ ನಡೆದಿರುವ ಕುರಿತು ದೃಢಪಡಿಸುತ್ತವೆ.
ಉದ್ಯಾವರ, ಕುತ್ಪಾಡಿ, ನಿಡಂಬೂರು, ಕಿದಿಯೂರು, ಅಂಬಲಪಾಡಿ, ಕನ್ನರ್ಪಾಡಿ, ಮಟ್ಟು, ಕಟಪಾಡಿಗಳೆಂಬ ಅಷ್ಟಗ್ರಾಮಗಳ ಅಧಿದೇವತೆಯಾದ ಉದಿಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಶಿಥಿಲಗೊಂಡಿದ್ದು, ಅದರ ನವೀಕರಣ ಮಾಡಲಾಗಿದೆ.
ಈ ದೇವಳದಲ್ಲಿ ವಿವಿಧ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ದೋಣಿ ಪಂಚಕಜ್ಜಾಯ ಇಲ್ಲಿನ ವಿಶೇಷ ಸೇವೆ. ದೋಣಿಯಾಕಾರದ ಲೋಹಪಾತ್ರೆಯಲ್ಲಿ ಪಂಚಕಜ್ಜಾಯ ಸಮರ್ಪಣೆ ಇದರ ವಿಶೇಷ. ಇದು ಕೃಷಿ, ಮೀನುಗಾರಿಕೆಯನ್ನು ಬಿಂಬಿಸುವ ದ್ಯೋತಕ. ವರ್ಷಂಪ್ರತಿ ಲಕ್ಷದೀಪೋತ್ಸವ, ವಿವಿಧ ಹಬ್ಬಹರಿದಿನಗಳ ಆಚರಣೆ ಇತ್ಯಾದಿಗಳೂ ನಡೆಯುತ್ತವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ