ಮಾರ್ಚ್ 18, 2010

ಕಡಲ ತಡಿಯ ರಕ್ಷಕ- ಕಾಂಡ್ಲಾ

ಉಪ್ಪುನೀರಲ್ಲಿ ಬೆಳೆಯುವ ಕಾಂಡ್ಲಾ ಸಸ್ಯ ಪ್ರವಾಹ ಕಾಲಕ್ಕೆ ನುಗ್ಗಿಬರುವ ನೀರನ್ನು ತಡೆಯುವ, ಭೂ ಸವಕಳಿಯನ್ನು ಸಂರಕ್ಷಿಸುವ ವಿಶಿಷ್ಟ ಸಸ್ಯ. ವಿವಿಧ ಜಾತಿಯ ಹಕ್ಕಿಗಳಿಗೆ ಆಸರೆ ನೀಡುವ, ಜಲಚರಗಳಿಗೆ ರಕ್ಷಣೆ ಒದಗಿಸುವ ಈ ಸಸ್ಯವನ್ನು ಸಂರಕ್ಷಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯುದ್ದಕ್ಕೂ ಬೆಳೆಸಲು ಇಲಾಖೆ ಯೋಜನೆ ರೂಪಿಸಿದೆ.
ಅರಣ್ಯ ಇಲಾಖೆ ಕುಂದಾಪುರ ಉಪ ವಿಭಾಗ ವತಿಯಿಂದ ಉಡುಪಿ ಹಾಗೂ ದ. ಕ. ಜಿಲ್ಲೆಯ ಕಡಲತೀರದ ಹಿನ್ನೀರು ಪ್ರದೇಶದಲ್ಲಿ ಕಾಂಡ್ಲಾ ಸಸ್ಯ ಬೆಳೆಯಲು ಒಂದು ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.
ಭಾರತದ ಪಶ್ಚಿಮ ಬಂಗಾಲದ ಸುಂದರ ಬನದಲ್ಲಿ ವಿವಿಧ ಜಾತಿಯ ಕಾಂಡ್ಲಾ ಸಸ್ಯಗಳಿವೆ. ಆ ಬಳಿಕ ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದಲ್ಲಿ ವಿಪುಲವಾಗಿ ಈ ಸಸ್ಯಗಳನ್ನು ಕಾಣಬಹುದು. ಉಡುಪಿ ಹಾಗೂ ದ. ಕ. ಜಿಲ್ಲೆಗಳಲ್ಲಿ ಸುಮಾರು 14 ವಿಧದ ಕಾಂಡ್ಲಾ ಸಸ್ಯಗಳನ್ನು ಕಾಣಬಹುದಾಗಿದೆ. ಅರಣ್ಯ ಇಲಾಖೆಯ ಕುಂದಾಪುರ, ಮಂಗಳೂರು, ಹೊನ್ನಾವರ ಮತ್ತು ಕಾರವಾರ ವಿಭಾಗಗಳ ಪೈಕಿ ಕಾರವಾರ ವಿಭಾಗದಲ್ಲಿ ಈಗಾಗಲೇ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾ ಬೆಳೆಸಲಾಗಿದ್ದು, ಕುಂದಾಪುರ ವಿಭಾಗದಲ್ಲಿಯೂ 300 ಹೆಕ್ಟೇರ್ ಪ್ರದೇಶದಲ್ಲಿ ಈ ಸಸಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಸುಮಾರು 900 ಹೆಕ್ಟೇರ್ ಪ್ರದೇಶದಲ್ಲಿ ಈ ವಿಶಿಷ್ಟ ತಳಿಯಿದೆ ಎಂಬುದು ಇಲಾಖೆ ಅಂಬೋಣ.
ಉಡುಪಿ ಜಿಲ್ಲೆಯ ಹೆಮ್ಮಾಡಿ ಗ್ರಾಮದ ಜಾಲಾಡಿಯಲ್ಲಿ ರಾಜ್ಯದಲ್ಲೇ ಪ್ರಥಮದ್ದಾದ ಕಾಂಡ್ಲಾ ಸಂಶೋಧನಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಖಾಸಗಿಯವರಿಗೂ ಈ ಅಪೂರ್ವ ಸಸಿ ಬೆಳೆಸಲು ಉತ್ತೇಜನ ನೀಡಲಾಗುತ್ತಿದ್ದು, ಅಂಥವರಿಗೂ ಸಹಾಯ ಒದಗಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.

ಸಂಯುಕ್ತ ಕರ್ನಾಟಕ: ಫೆ. 6, 2008

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ