ಜೂನ್ 9, 2010

ಅಪೂರ್ವ ದ್ವಿಭುಜ ಗಣಪತಿ ಆಲಯ

ಸಾಮಾನ್ಯವಾಗಿ ಗೌರಿತನಯ ವಿನಾಯಕ ಚತುಃಹಸ್ತ, ನಾಲ್ಕು ಕೈಗಳುಳ್ಳವ. ಅಪೂರ್ವವಾಗಿ ಕೆಲವೆಡೆಗಳಲ್ಲಿ ಆತ ದ್ವಿಬಾಹು ಉಳ್ಳವನಾಗಿಯೂ ಕಂಡುಬರುತ್ತಾನೆ. ಇಡಗುಂಜಿ ವಿನಾಯಕ, ಗೋಕರ್ಣದ ಗಣಪ ಮೊದಲಾದ ಗಣೇಶಾಲಯಗಳಲ್ಲಿನ ವಿಗ್ರಹಗಳು ಎರಡು ಕೈಗಳುಳ್ಳವುಗಳು. ಉಡುಪಿ ಜಿಲ್ಲೆಯಲ್ಲಿಯೂ ದ್ವಿಬಾಹು ಗಣಪನ ವಿಗ್ರಹಗಳಿರುವ ಅಪೂರ್ವ ತಾಣಗಳಿವೆ. ಅವುಗಳಲ್ಲಿ ಒಂದು ಆನೆಗುಡ್ಡೆ ಕುಂಭಾಶಿಯಲ್ಲಿದ್ದರೆ, ಇನ್ನೊಂದು ಹಟ್ಟಿಯಂಗಡಿಯಲ್ಲಿದೆ. ಆನೆಗುಡ್ಡೆ ಗಣಪತಿ ನಿಂತ ಭಂಗಿಯಲ್ಲಿದ್ದರೆ, ಹಟ್ಟಿಯಂಗಡಿ ಗಣೇಶ ಕುಳಿತ ವಿಶಿಷ್ಟ ಭಂಗಿಯಲ್ಲಿದೆ. ದ್ವಿಭುಜ ಗಣಪತಿ ಕ್ಷಿಪ್ರ ಫಲದಾಯಕ ಎಂಬುದು ಆಸ್ತಿಕರ ನಂಬುಗೆ. ಈ ಎರಡೂ ಕಾರಣೀಕ ಕ್ಷೇತ್ರಗಳು ಕುಂದಾಪುರ ತಾಲ್ಲೂಕಿನಲ್ಲಿವೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಉಡುಪಿ- ಕುಂದಾಪುರ ನಡುವೆ ರಸ್ತೆಯಿಂದ ಸುಮಾರು ಒಂದು ಕಿ. ಮೀ. ಪೂರ್ವದಲ್ಲಿ ಆನೆಗುಡ್ಡೆ ಎಂಬ ಕ್ಷೇತ್ರವಿದೆ. ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಇದೂ ಒಂದು. ಇದನ್ನು ಕೃತಯುಗದಲ್ಲಿ ಹರಿಹರ ಕ್ಷೇತ್ರವೆಂದೂ, ತ್ರೇತಾಯುಗದಲ್ಲಿ ಮಧು ಕಾನನ, ದ್ವಾಪರ ಯುಗದಲ್ಲಿ ಗೌತಮ ಕ್ಷೇತ್ರ ಎಂದೂ ಕರೆಯುತ್ತಿದ್ದು ಈಗಿನ ಕಲಿಯುಗದಲ್ಲಿ ಕುಂಭಾಶಿ ಎಂದು ಕರೆಯಲಾಗುತ್ತಿದೆ. ಹಿಂದೊಮ್ಮೆ ಅನಾವೃಷ್ಟಿಯಾಗಿದ್ದಾಗ ಗೌತಮ ಮುನಿಗಳು ಈ ಕ್ಷೇತ್ರದಲ್ಲಿ ನೆಲೆಸಿ ಯಜ್ಞಯಾಗಾದಿಗಳನ್ನು ನಡೆಸಿದ್ದರು. ಹೀಗೆ ಈ ಕ್ಷೇತ್ರ ಯುಗಾಂತರಗಳಿಂದಲೂ ಪವಿತ್ರವಾದುದು, ಪ್ರಸಿದ್ಧವಾದುದುದು ಎಂಬುದು ಪುರಾಣಗಳ ಉಲ್ಲೇಖ.
ವರಬಲ ಪ್ರಮತ್ತನಾದ ಕುಂಭಾಸುರನಿಂದ ತಪೋನುಷ್ಠಾನ ನಿರತರಾದ ಗೌತಮ ಮುನಿಗಳ ಯಜ್ಞಯಾಗಾದಿ ನಿತ್ಯಾಹ್ನಿಕಗಳಿಗೆ ಭಂಗ ಬರತೊಡಗಿತು. ವನವಾಸ ನಿರತರಾಗಿದ್ದ ಪಾಂಡವರ ಆಗಮನವನ್ನು ತಿಳಿದು ಗೌತಮರು ಧರ್ಮರಾಜನಲ್ಲಿ ಕುಂಭಾಸುರನ ಪೀಡೆಯ ಕುರಿತು ಅರುಹಿದಾಗ, ಲೋಕಕಂಠಕನಾದ ಕುಂಭಾಸುರನನ್ನು ಸಂಹರಿಸಲು ಭೀಮಸೇನನಿಗೆ ಧರ್ಮಜ ಅಪ್ಪಣೆ ಕೊಟ್ಟ. ಕೂಡಲೇ ಭೀಮ ಯುದ್ಧ ಸನ್ನದ್ಧನಾದ. ಭೀಮ- ಕುಂಭರೊಳಗೆ ಘನಘೋರ ಯುದ್ಧ ನಡೆಯಿತಾದರೂ, ಯುದ್ಧದಲ್ಲಿ ಕುಂಭಾಸುರ ಅವಧ್ಯನಾಗಿಯೇ ಉಳಿದ. ಅವನನ್ನು ಸಂಹರಿಸುವ ಪರಿ ಬಗೆಗೆ ಚಿಂತಿಸುತ್ತಾ ಭೀಮಸೇನ ಶಿಬಿರಕ್ಕೆ ಹಿಂದಿರುಗುತ್ತಲೇ ವಿಘ್ನೇಶ್ವರಾನುಗ್ರಹದಿಂದ ಪಡೆದ ಕತ್ತಿಯಿಂದ ಮಾತ್ರ ಕುಂಭನ ವಧೆ ಸಾಧ್ಯ ಎಂಬ ಅಶರೀರವಾಣಿ ಕೇಳಿಸಿತು.
ಭೀಮಸೇನ ವಿಶ್ವಂಭರ ರೂಪಿ ವಿನಾಯಕನನ್ನು ಧ್ಯಾನಿಸಿದ. ಆನೆ ರೂಪದಲ್ಲಿ ಭಗವಂತ ಪ್ರತ್ಯಕ್ಷನಾಗಿ ಕತ್ತಿಯೊಂದನ್ನು ದಯಪಾಲಿಸಿದ. ಅದರಿಂದಲೇ ಭೀಮಸೇನ ಕುಂಭಾಸುರನನ್ನು ಸಂಹರಿಸಿದ ಎಂಬುದು ಕುಂಭಾಸಿ ಸ್ಥಳಪುರಾಣ ತಿಳಿಸುವ ಕ್ಷೇತ್ರದ ಕಥೆ. ಅದನ್ನೇ ವಾದಿರಾಜ ಯತಿವರೇಣ್ಯರು ತಮ್ಮ `ತೀರ್ಥ ಪ್ರಬಂಧ'ದಲ್ಲಿ ಭೀಮಸೇನ ಕುಂಭಾಸುರನನ್ನು ಅಸಿ (ಕತ್ತಿ)ಯಿಂದ ಸಂಹರಿಸಿದುದರಿಂದಲೇ ಕುಂಭಾಸಿ ಎಂದಾಯಿತೆಂದು ವರ್ಣಿಸಿದ್ದಾರೆ. ಮುಂದಕ್ಕೆ ಅಪಭ್ರಂಶವಾಗಿ ಕುಂಭಾಶಿ ಎಂಬ ಹೆಸರೂ ಆ ಊರಿಗೆ ಬಂತು. ಈ ಪ್ರದೇಶಕ್ಕೆ ನಾಗಾಚಲ ಎಂಬ ಹೆಸರೂ ಇತ್ತು. ಗಣಪತಿ ಆನೆರೂಪದಲ್ಲಿ ಭೀಮನಿಗೆ ಕಂಡು ಕತ್ತಿ ಅನುಗ್ರಹಿಸಿದ ಪ್ರದೇಶದಲ್ಲಿ ಗಣಪತಿ ಉದ್ಭವಿಸಿದ. ಸೊಂಡಿಲಿನ ಆಕಾರವಿರುವ ಮುಖಕ್ಕೆ ಮಾತ್ರ ಅಲ್ಲಿ ನಿತ್ಯ ಪೂಜಾದಿ ವಿನಿಯೋಗಗಳು ನಡೆಯುತ್ತವೆ. ಉಳಿದ ಭಾಗ ಗೋಡೆಯಿಂದ ಆವೃತವಾಗಿದೆ. ಆನೆ ರೂಪದಿಂದ ಪ್ರತ್ಯಕ್ಷನಾದ ಗಣಪತಿ ಭಕ್ತಾಭೀಷ್ಟ ಪ್ರದಾತ ಎಂಬುದು ನಂಬಿಕೆ.
ಸುಮಾರು ಏಳು ತಲೆಮಾರಿನಿಂದ ಶಿವಳ್ಳಿ ಬ್ರಾಹ್ಮಣ ಪಂಗಡದ ಉಪಾಧ್ಯಾಯ ಎಂಬ ವರ್ಗಕ್ಕೆ ಇಲ್ಲಿನ ಪೂಜೆ, ಆಡಳಿತ ಇದೆ. ದೇವಳದ ಸರ್ವಾಂಗೀಣ ಅಭಿವೃದ್ಧಿ ಗ್ರಾಮಸ್ಥರು ಹಾಗೂ ಭಜಕರ ನೆರವಿನೊಂದಿಗೆ ಈ ವರ್ಗ ಮಾಡಿದೆ. ಪಂಚಕಜ್ಜಾಯ, ಹರಿವಾಣ ನೈವೇದ್ಯ, ಪಂಚಾಮೃತ, ಕಡುಬಿನ ಸೇವೆ, ಗಣಹೋಮ ಇತ್ಯಾದಿಗಳು ಈ ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆಗಳು. ಇಲ್ಲಿನ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ ಕ್ಷೇತ್ರದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.

ವಾರಾಹಿ ನದಿಯ ಉತ್ತರ ದಂಡೆಯ ಮೇಲಿರುವ ಪುಟ್ಟ ಗ್ರಾಮ ಹಟ್ಟಿಯಂಗಡಿ. ಸುಮಾರು ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಈ ಸ್ಥಳ ಪ್ರಾಚೀನ ರಾಜಧಾನಿಯಾಗಿ, ಹಲವು ಧರ್ಮಗಳ ನೆಲೆಯಾಗಿ ಕಲೆ- ಸಾಹಿತ್ಯ ಸಂಸ್ಕೃತಿಗಳ ತವರೂರಾಗಿಯೂ ಪ್ರಸಿದ್ಧ. ಜಿಲ್ಲಾ ಕೇಂದ್ರ ಉಡುಪಿಯಿಂದ ಉತ್ತರಕ್ಕೆ 45 ಕಿ. ಮೀ., ಕುಂದಾಪುರದಿಂದ ಈಶಾನ್ಯಕ್ಕೆ 8 ಕಿ. ಮೀ. ದೂರದಲ್ಲಿರುವ ಹಟ್ಟಿಯಂಗಡಿಯ ಪ್ರಮುಖ ಆಕರ್ಷಣೆ ಇಲ್ಲಿನ ವಿನಾಯಕ ದೇವಸ್ಥಾನ.
ಪಟ್ಟಿ, ಹಟ್ಟಿ ನಗರ ಎಂದೆಲ್ಲಾ ಕರೆದುಕೊಳ್ಳುತ್ತಿದ್ದ ಹಟ್ಟಿಯಂಗಡಿ, ತುಳುನಾಡನ್ನು ಆಳಿದ ಅಳುಪರ ರಾಜಧಾನಿ. ಇಲ್ಲಿನ ಗಣಪತಿ ದೇವಾಲಯದ ವಿನಾಯಕ ಮೂರ್ತಿ ಕರ್ನಾಟಕದ ಪ್ರಾಚೀನ ಗಣಪತಿ ಮೂರ್ತಿಗಳಲ್ಲಿ ಎರಡನೆಯದು. (ಮೊದಲನೆಯದು ಗೋಕರ್ಣ ಗಣಪತಿ). ಗಾಣಪತ್ಯರ ಪ್ರಾಬಲ್ಯವಿದ್ದ ಕಾಲಘಟ್ಟದಲ್ಲಿ ಈ ದೇವಳದ ಉಗಮವಾಯಿತೆಂದು ಇತಿಹಾಸಜ್ಞ ಡಾ. ಪಿ. ಎನ್. ನರಸಿಂಹಮೂರ್ತಿ ಅಭಿಪ್ರಾಯಪಡುತ್ತಾರೆ. ಇಲ್ಲಿನ ವಿನಾಯಕ ವಿಗ್ರಹ ಸುಮಾರು 5- 6ನೇ ಶತಮಾನಕ್ಕೆ ಸೇರಿದುದು. ಸುಮಾರು ಒಂದು ಸಾವಿರದ ಐನೂರು ವರ್ಷಗಳಿಂದ ಭಕ್ತರಿಂದ ಪೂಜೆಗೊಂಡ ವಿಗ್ರಹ.
ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ವಿನಾಯಕ ದೇವಾಲಯ ಚತುರಸ್ರ ಆಕಾರದಲ್ಲಿದೆ. ಗರ್ಭಗೃಹದಲ್ಲಿರುವ ವಿನಾಯಕ ದ್ವಿಬಾಹು. ಕೃಷ್ಣಶಿಲಾ ವಿಗ್ರಹ. ಬಾಲಗಣೇಶನ ವಿಗ್ರಹ ಇದಾಗಿದೆ ಎಂಬುದು ವಿಗ್ರಹ ತಜ್ಞರ ಅಭಿಪ್ರಾಯ. ಕುಳಿತ ಭಂಗಿಯ ಅಪೂರ್ವ ವಿಗ್ರಹವಿದು. ಪಾಣಿಪೀಠದ ಮೇಲ್ಘಾಗದಲ್ಲಿ ಎಡದಿಂದ ಬಲಕ್ಕೆ ಸುವರ್ಣರೇಖೆಯಿದೆ. ಆಗಮ ತಂತ್ರ ವೈದಿಕ ವಿಧಾನದಂತೆ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನಿತ್ಯ ಅಷ್ಟದ್ರವ್ಯ ಗಣಪತಿ ಹವನ ಇಲ್ಲಿನ ವಿಶೇಷ. ಗಣಪತಿ ಇಷ್ಟಪ್ರದಾಯಕ ಎಂದೇ ಪ್ರಸಿದ್ಧಿ. ಭಕ್ತರ ಪ್ರಾರ್ಥನೆಗೆ ಹೂ ಪ್ರಸಾದ ನೀಡುವುದು ಈ ದೇವಳದ ವಿಶೇಷ. ದೇವಳದ ಆಡಳಿತ ಮೊಕ್ತೇಸರ ಎಚ್. ರಾಮಚಂದ್ರ ಭಟ್ಟ ದೇವಳದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.

(ಸಂಯುಕ್ತ ಕರ್ನಾಟಕ: ಆ. 30, 2008)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ