ಕನ್ನಡಿಗರಿಗೆ ಬಿಡಿ, ಉಡುಪಿಯವರಿಗೇ ಹೆರ್ಗ ಗೋಪಾಲ ಭಟ್ಟರೆಂದರೆ ಯಾರಿಗೂ ತಿಳಿಯುವುದಿಲ್ಲ. ಆದರೆ, ಕು. ಗೋ. ಎಲ್ಲರಿಗೂ ಸುಪರಿಚಿತ. ಎಲ್ಲೇ ಸಾಹಿತ್ಯಿಕ ಕಾರ್ಯಕ್ರಮಗಳಿರಲಿ, ಅಲ್ಲಿ ಕು. ಗೋ. ಹಾಜರ್. ಮಾತ್ರವಲ್ಲದೇ ಆ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದು ತನ್ನದೇ ಸ್ವಂತ ಕಾರ್ಯಕ್ರಮ ಎಂಬಷ್ಟು ಮಟ್ಟಿಗೆ ತಾದಾತ್ಮ್ಯತೆಯನ್ನು ಪಡೆದುಕೊಳ್ಳುವವರು. ಕಪ್ಪು ಫ್ರೇಮಿನ ಕನ್ನಡಕಧಾರಿ, ಬಿಳುಪಿಗೆ ಮಾಗಿದ ಕೂದಲಿನ ತೆಳ್ಳನೆಯ ಶರೀರದ ಎಚ್. ಗೋಪಾಲ ಭಟ್ಟ ಹೆಚ್ಚಾಗಿ ಕಪ್ಪು ಪ್ಯಾಂಟ್, ಚೆಕ್ಸ್ ಅಂಗಿ ಧರಿಸುವುದೇ ಹೆಚ್ಚು. ಆದರೆ, ಅವರ ಬಗಲಲ್ಲಿ ಜೋಳಿಗೆಯೊಂದು ತಪ್ಪಿದ್ದಲ್ಲ. ಅದರಲ್ಲಿ ಪುಸ್ತಕಗಳ ರಾಶಿಯೇ ಇರುತ್ತದೆ. ಯಾರಾದರೂ ಸಿಕ್ಕಿದರೆ ಜೋಳಿಗೆಯೊಳಗಿಂದ ಪುಸ್ತಕವೊಂದು ಹೊರಬಂದು ತನ್ನ ಎದುರಿಗಿರುವ ವ್ಯಕ್ತಿಯ ಕೈಗೆ ಕೊಡುತ್ತಾರೆ. ಅದಕ್ಕೆ ಪ್ರತಿಯಾಗಿ ಅವರು ಹಣ ಕೊಟ್ಟರೂ ಸೈ, ಇಲ್ಲವಾದರೂ ಜೈ. ಪುಸ್ತಕ ಹಂಚುವುದು ಅವರಿಗೆ ಒಂದು ಹುಚ್ಚು! ಇದು ಕು. ಗೋ. ಅವರ ಪಾರ್ಶ್ವ ಪರಿಚಯವಷ್ಟೇ!
ಕು. ಗೋ. ಜೊತೆಯಲ್ಲಿದ್ದರೆ ನಗುವಿಗೆ ಕೊರತೆ ಇಲ್ಲ. ಖುಷಿಯ ಗಳಿಗೆಗಳಿಗೆ ಮೋಸವಿಲ್ಲ. ಅವರು ನಗುತ್ತಾ, ನಗಿಸುತ್ತಾ ನ್ಮನ್ನು ಆಕ್ರಮಿಸಿಬಿಡುತ್ತಾರೆ. ಮಗುವಿನ ಮನಸ್ಸಿನ ಕು. ಗೋ. ಅವರಿಗೆ ನಗಿಸುವುದೇ ಹವ್ಯಾಸ. ಅವರು ತನ್ನ ಸ್ವಂತ ಬದುಕಿನಲ್ಲಿ ಅದೆಷ್ಟೋ ನೋವನ್ನುಂಡರೂ ಇತರರನ್ನು ನಗಿಸುತ್ತಲೇ ಇರುತ್ತಾರೆ, ತಮ್ಮ ಅಳು ನುಂಗಿ. ಸ್ವತ: ಸಾಹಿತಿ, ಲಘು ಹಾಸ್ಯ, ಪ್ರಬಂಧಗಳ ಬರೆಹಗಾರ. ಅವರೋರ್ವ ಸಾಹಿತ್ಯ ಪರಿಚಾರಕ.
ಎಲ್ಐಸಿಯಲ್ಲಿ ಉದ್ಯೋಗಿಯಾಗಿದ್ದ ಅವರು, ಸುಮಾರು 38 ವರ್ಷಗಳ ಸುಧೀರ್ಘ ಸೇವೆಯ ಬಳಿಕ ಸ್ವಯಂ ನಿವೃತ್ತಿ ಪಡೆದವರು. ಆ ಬಳಿಕ ಅವರ ಜೀವನವೆಲ್ಲಾ ಬರಿಯ ಸಾಹಿತ್ಯ ಮತ್ತು ಸಾಹಿತ್ಯ ಪರಿಚಾರಿಕೆಯಲ್ಲಿ. ಉಡುಪಿಯಲ್ಲಿ `ಸುಹಾಸ' ಎಂಬ ಹಾಸ್ಯಪ್ರಿಯರ ಸಂಘಟನೆಯೊಂದನ್ನು ಕಟ್ಟಿ ಅವರು ಅದರ ಕಾರ್ಯದರ್ಶಿಯಾಗಿದ್ದಾರೆ. ನಡುಮನೆ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸುತ್ತಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ನವಿರು ಹಾಸ್ಯದ ಕು. ಗೋ. ಅವರ ಲೇಖನಗಳು ಅಪ್ಪಟ ಹರಟೆಗಾರನ ಜೊತೆ ನಡೆಸುವ ಸಂಭಾಷಣೆಯಂತಿರುತ್ತವೆ.
ಅವರ `ಲೊಳಲೊಳಾಯಿ' ಕೃತಿಗೆ 2002ರಲ್ಲಿ ಗೋರೂರು ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕೇರಳ ಸರಕಾರದ 8ನೇ ತರಗತಿಗೆ ಅದು ಪಠ್ಯವಾಗಿದೆ. 2003ರಲ್ಲಿ ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿ, ದೆಹಲಿ ಕನ್ನಡಿಗ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ಹಾಸ್ಯದ ಚಿಲುಮೆಯಂತಿರುವ ಕು. ಗೋ. ನೂರ್ಕಾಲ ಬಾಳಲಿ. ಅವರ ನಗುವಿನ ಒರತೆ ಎಂದಿಗೂ ಬತ್ತದಿರಲಿ.
(ಸಂಯುಕ್ತ ಕರ್ನಾಟಕ: ಜೂ. 2, 2008)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ