ಜೂನ್ 7, 2010

ವರುಣ ಕೃಪೆಗೆ ಮಂಡೂಕ ಪರಿಣಯ!

ಕಿವಿಗಡಚಿಕ್ಕುವ ಬ್ಯಾಂಡ್- ವಾದ್ಯಗಳ ಸದ್ದು, ನಭವನ್ನು ಬೇಧಿಸುವ ತೆರದಿ ಸಿಡಿಯುವ ಪಟಾಕಿ ಸದ್ದು, ಹರ್ಷಚಿತ್ತ ಮಂದಿಯ ಸಾಲು ಸಾಲು.... ಸಾಲಂಕೃತ ಮಂಟಪದಲ್ಲಿ ಸಾಗಿಬರುತ್ತಿರುವ ವಧೂ-ವರರು!
ಇದು ಉಡುಪಿಯಲ್ಲಿ ನಡೆದ ವಿವಾಹ ಸಂಭ್ರಮದ ದೃಶ್ಯ. ಇದು ಅಂತಿಂಥ ಮದುವೆಯಲ್ಲ. ಸಾಕ್ಷಾತ್ ಮಂಡೂಕ ಪರಿಣಯ! ರಟ್ಟಿನ ಪೆಟ್ಟಿಗೆಯೊಳಗೆ ಬಂಧಿತವಾಗಿದ್ದ ಹೆಣ್ಣು ಕಪ್ಪೆಯೊಂದು ಅಂಥದೇ ಇನ್ನೊಂದು ಪೆಟ್ಟಿಗೆಯಲ್ಲಿ ಅಡಗಿ ಕುಳಿತಿದ್ದ ಗಂಡು ಕಪ್ಪೆಯನ್ನು ಕಾಣುವ (ನೆಗೆಯುವ!) ತವಕ! ಈ ಅಪೂರ್ವ ಸನ್ನಿವೇಶವನ್ನು ತಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಲು ಅನೇಕ ಮಂದಿಗೆ ಕುತೂಹಲ.
ವೈಶಾಖವನ್ನು ಹೋಲುವ ಬಿಸಿಲು ಹಾಗೂ ಸೆಖೆ ಆಷಾಢ ಮಾಸದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಾಧಿಸುತ್ತಿದ್ದು, ಮಳೆಗಾಗಿ ವರುಣನಿಗಾಗಿ ಮೊರೆಯಿಡುವ ವಿನೂತನ ಮಾದರಿಯಾಗಿ ಮಂಡೂಕ ಪರಿಣಯ (ಕಪ್ಪೆಗಳ ಮದುವೆ)ವನ್ನು ಏರ್ಪಡಿಸಲಾಯಿತು. ಸದಾ ಹೊಸತೇನನ್ನಾದರೂ ಮಾಡಿ ತನ್ಮೂಲಕ ಪ್ರಚಾರ ಪಡೆಯುವ ವಿಚಿತ್ರ ಮನೋಭಾವದ ಉಡುಪಿ ಜಿಲ್ಲಾ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಉಡುಪಿ ಜಿಲ್ಲೆಯೂ ಸೇರಿದಂತೆ ಅವಿಭಜಿತ ದ. ಕ. ಜಿಲ್ಲೆಯಲ್ಲೇ ಪ್ರಥಮದ್ದಾದ ಹಾಗೂ ವಿನೂತನವಾದ ಕಪ್ಪೆಗಳ ವಿವಾಹವನ್ನು ಏರ್ಪಡಿಸುವುದರೊಂದಿಗೆ ಹಲವರ ಗಮನ ಸೆಳೆದರು.
ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡರ ತಲಾಷೆಗಾಗಿ ಸಾಕಷ್ಟು ಪರಿಶ್ರಮ ಪಡಲಾಯಿತು. ಕೊನೆಗೂ ಗಣೇಶರಾಜ್ ಸರಳೇಬೆಟ್ಟು ಗಂಡು ಹಾಗೂ ಹೆಣ್ಣು ಕಪ್ಪೆಗಳೆರಡನ್ನು ತಂದು (ಪ್ರಾಣಿಶಾಸ್ತ್ರಜ್ಞರಿಂದ ದೃಢೀಕರಿಸಿ?) ಅವುಗಳನ್ನು ಪ್ರತ್ಯೇಕವಾದ ರಟ್ಟಿನ ಪೆಟ್ಟಿಗೆಯಲ್ಲಿಟ್ಟು, ತಳ್ಳುಗಾಡಿಯಲ್ಲಿ ಸಾಲಂಕೃತ ಮಂಟಪವೊಂದನ್ನು ನಿರ್ಮಿಸಿ, ಇಲ್ಲಿನ ಡಯಾನಾ ವೃತ್ತದಿಂದಾರಂಭಿಸಿ, ಬಸ್ ನಿಲ್ದಾಣ ವರೆಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ವಾದ್ಯ, ಧ್ವನಿವರ್ಧಕ, ಗರ್ನಾಲು (ಪಟಾಕಿ), ಸಾಲದೆಂಬಂತೆ ಕಪ್ಪೆಗಳ ಮದುವೆಗಾಗಿಯೇ ಬಂದ ಕೆಲವರಿಂದ ಕೇಕೇ ನೃತ್ಯ ಇತ್ಯಾದಿ ಎಲ್ಲವೂ ಇತ್ತು. ಮದುವೆ ಸುಸಾಂಗವಾಗಿ ನಡೆಯಲು ಆರಕ್ಷಕರ ರಕ್ಷಣೆಯೂ ದೊರಕಿತ್ತು!
ಬಸ್ ನಿಲ್ದಾಣವೇ ಮದುವೆ ಮಂಟಪವಾಗಿ ರೂಪುಗೊಂಡು ನಿತ್ಯಾನಂದ ಒಳಕಾಡು ಗಂಡು ಕಪ್ಪೆಯ ಪರವಾಗಿ ಹೆಣ್ಣು ಕಪ್ಪೆಯ ಕಾಲಿಗೆ ಕಾಲುಂಗುರ ತೊಡಿಸಿ, ಮಾಂಗಲ್ಯ ಬಿಗಿದರು. ಅರಿಶಿಣ- ಕುಂಕುಮ, ಸೇಸೆ ಹಾಕಲಾಯಿತು. ಅಕ್ಷತಾರೋಪಣವೂ ನಡೆಯಿತು. ಹೂಹಾರ ಹಾಕಲಾಯಿತು. ಈ ಎಲ್ಲಾ ಧಾರ್ಮಿಕ ವಿಧಿಗಳನ್ನು ಅಲ್ಲಿ ನೆರೆದಿದ್ದವರು ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದರು. ಸುಮಾರು ಅರ್ಧ ಗಂಟೆ ಕಾಲ ನಡೆದ ಕಪ್ಪೆ ಮದುವೆ ಕಾರ್ಯಕ್ರಮ ನಡೆಯಿತು. ಮದುವೆ ಊಟ ಎಲ್ಲಿ ಎಂದು ಅಲ್ಲಿ ನೆರೆದಿದ್ದವರೋರ್ವರು ದೊಡ್ಡ ದನಿಯಲ್ಲಿ ಕೇಳಿದ್ದು ಕುಚೋದ್ಯವಾಗಿತ್ತು!
ಇದೆಲ್ಲವೂ ನಡೆದದ್ದು ಮಳೆಗಾಗಿ. ಈ ಮೊರೆ ವರುಣನಿಗೆ ಕೇಳಿಸೀತೇ ಎಂದು ಕಾದುನೋಡಬೇಕಷ್ಟೇ!!

(ಸಂಯುಕ್ತ ಕರ್ನಾಟಕ: ಜು. 16, 2008)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ