ಉಡುಪಿ ಜಿಲ್ಲೆಯೂ ಸೇರಿಕೊಂಡಂತೆ ಅವಿಭಜಿತ ದ. ಕ. ಜಿಲ್ಲೆಯ ಪತ್ರಿಕೋದ್ಯಮಕ್ಕೆ ಸುಮಾರು 150 ವರ್ಷಗಳ ದೀರ್ಘ ಇತಿಹಾಸವಿದೆ. ಜಿಲ್ಲೆಯಲ್ಲಿ ಧೀಮಂತ ಪತ್ರಕರ್ತರಾಗಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಇತಿಹಾಸ ಸೇರಿದವರು ನೂರಾರು ಮಂದಿ. ಈ ಕ್ಷೇತ್ರದಲ್ಲಿ ದುಡಿದು ನಿವೃತ್ತರಾದವರು, ಈಗ ಕಾರ್ಯಪ್ರವೃತ್ತರಾಗಿರುವವರ ಸಂಖ್ಯೆಯೂ ಅಪಾರ. ಇಲ್ಲಿನ ಪತ್ರಿಕೋದ್ಯಮದ ಇತಿಹಾಸವೂ ರೋಚಕ.
ಹುರುಳಿ ಭೀಮರಾಯರು ಪತ್ರಿಕಾ ಕ್ಷೇತ್ರದ ಮೊದಲ ತಲೆಮಾರಿನವರು. `ನವಯುಗ'ದ ಕೆ. ಹೊನ್ನಯ್ಯ ಶೆಟ್ಟಿ, `ಪ್ರಭಾತ'ದ ಕುಡ್ಪಿ ವಾಸುದೇವ ಶೆಣೈ, `ನವಭಾರತ'ದ ವಿ. ಎಸ್. ಕುಡ್ವ, `ಪಂಚ್ಕದಾಯಿ'ಯ ಬಿ. ವಿ. ಬಾಳಿಗ, `ಸುಪ್ರಭಾತ'ದ ಸರಸ್ವತಿಬಾಯಿ ರಾಜವಾಡೆ, `ಕಸ್ತೂರಿ'ಯ ಪಾ. ವೆಂ. ಆಚಾರ್ಯ, ಬೆ. ಸು. ನಾ. ಮಲ್ಯ ನಂತರದ ತಲೆಮಾರಿನವರು.
ಇದೀಗ ನಮ್ಮೊಡನಿರುವ ಧೀಮಂತ ಪತ್ರಕರ್ತರೂ ಪತ್ರಿಕಾ ಕ್ಷೇತ್ರದಲ್ಲಿ ಮಾಡಿರುವ ವ್ಯವಸಾಯ ಕಡಿಮೆ ಏನಲ್ಲ.
ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಮಾಧವ ವಿಠಲ ಕಾಮತ್ ಪತ್ರಿಕಾರಂಗದಲ್ಲಿ ಜನಮನದಲ್ಲಿ ನೆಲೆನಿಲ್ಲಬಲ್ಲ ಕೆಲವೇ ಕೆಲವು ಪತ್ರಿಕೋದ್ಯಮಿಗಳಲ್ಲಿ ಒಬ್ಬರು. `ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಪ್ರಮುಖ ವರದಿಗಾರರಾಗಿ ಸುಮಾರು 3 ದಶಕಗಳಿಗೂ ಕಾಲ ಸೇವೆ ಸಲ್ಲಿಸಿ ಪತ್ರಿಕಾ ರಂಗದ ಒಳಹೊರಗುಗಳ ಖಚಿತಾನುಭವ ಪಡೆದು `ಇಲ್ಲಸ್ಟ್ರೇಡ್ ವೀಕ್ಲಿ ಆಫ್ ಇಂಡಿಯಾ'ದ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. 12ಕ್ಕೂ ಅಧಿಕ ಪತ್ರಿಕೆಗಳಿಗೆ ಅಂಕಣಕಾರರಾದ ಅವರು ಕರ್ನಾಟಕ ರಾಜ್ಯ ಪ್ರಶಸ್ತಿ, ತಿಲಕ್ ಮೊಹರ್ರಿ ಪತ್ರಿಕೋದ್ಯಮ ಪ್ರಶಸ್ತಿ, ವಿದ್ಯಾಧಿರಾಜ ಪ್ರಶಸ್ತಿ, ಸಮಾಜ ಭೂಷಣ ಪ್ರಶಸ್ತಿಯಂತಹ ಹೆಮ್ಮೆಯ ಪುರಸ್ಕಾರ ಪಡೆದು ನಾಡಿಗೇ ಹೆಮ್ಮೆ ಎನಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಮತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಇತಿಹಾಸ, ಜೀವನ ಚರಿತ್ರೆ, ಪತ್ರಿಕಾರಂಗ ಹಾಗೂ ಸೃಜನಶೀಲ ಸಾಹಿತ್ಯ ಕುರಿತು 40ಕ್ಕೂ ಅಧಿಕ ಪುಸ್ತಕಗಳನ್ನು ಡಾ. ಎಂ. ವಿ. ಕಾಮತ್ ಬರೆದಿದ್ದಾರೆ.
ಮಣಿಪಾಲ ಇನ್ಸ್ಟಿಟ್ಯೂಟ್ ಅಫ್ ಕಮ್ಯುನಿಕೇಶನ್ನ ಆಡಳಿತ ಮಂಡಳಿ ಸದಸ್ಯರಾಗಿ ಮಣಿಪಾಲದಲ್ಲೇ ಡಾ. ಕಾಮತ್ ನೆಲೆಸಿದ್ದಾರೆ.
ಬನ್ನಂಜೆ ರಾಮಾಚಾರ್ಯ ಹಿರಿಯ ಪತ್ರಿಕೋದ್ಯಮಿ. ಉದಯವಾಣಿ ಪತ್ರಿಕೆ ಆರಂಭದ ದಿನಗಳಿಂದಲೂ ಆ ಪತ್ರಿಕೆ ಜೊತೆಗಿದ್ದ ರಾಮಾಚಾರ್ಯ ಸುಮಾರು 15 ವರ್ಷಗಳ ಕಾಲ ಸಂಪಾದಕರೂ ಆಗಿದ್ದರು. ಅದಕ್ಕೂ ಮುಂಚೆ ನವ ಭಾರತ ಪತ್ರಿಕೆಯಲ್ಲಿ ಸುಮಾರು ಒಂದು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದರು. ಉತ್ತಮ ಬರೆಹಗಾರರೂ ಅಗಿದ್ದ ಅವರು, ಅನೇಕ ಮಂದಿ ಉದಯೋನ್ಮುಖರಿಗೆ ಮಾರ್ಗದರ್ಶಕರಾಗಿದ್ದರು. ಉಡುಪಿಯಲ್ಲಿ ಅವರ ಅಭಿಮಾನಿಗಳಿಂದ ಅದ್ದೂರಿ ಸನ್ಮಾನ ಏರ್ಪಟ್ಟಿತ್ತು.
ಅವರು 2010ರ ಫೆ. 6ರಂದು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.
`ವಿದ್ಯಾವಾಚಸ್ಪತಿ' ಬಿರುದಾಂಕಿತ ಬನ್ನಂಜೆ ಗೋವಿಂದಾಚಾರ್ಯ ಕೂಡಾ ಪತ್ರಕರ್ತರಾಗಿದ್ದವರು. ಉದಯವಾಣಿ ಆರಂಭದ ದಿನಗಳಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದ ಅವರು, ಸಪ್ತಾಹಿಕ ಪುರವಣಿಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು. ಏಕಪಾಠಿಯಾಗಿರುವ ಅವರಿಗೆ ಯಾವುದೇ ವಿಷಯ ಕುರಿತು ತಕ್ಷಣದಲ್ಲಿ ಗ್ರಹಿಸುವ ಶಕ್ತಿ ಇದೆ. ಶಾಲೆಯಲ್ಲಿ ಅವರು ಕಲಿತದ್ದು ಬಹಳ ಕಡಿಮೆ. ಆದರೆ, ಸ್ವತ: ಅಧ್ಯಯನ ನಡೆಸಿ ಪ್ರಬುದ್ಧರಾಗಿರುವುದು ಅವರ ವಿಶೇಷತೆ. ಕನ್ನಡ, ಸಂಸ್ಕೃತಗಳ ಜೊತೆಗೆ ಆಂಗ್ಲಭಾಷೆಯಲ್ಲೂ ಅವರು ಪ್ರಭುತ್ವ ಸಾಧಿಸಿದ್ದಾರೆ. ಪ್ರವಚನಕಾರರಾಗಿ, ಲೇಖಕರಾಗಿ ನಮ್ಮ ನಡುವಿರುವ ಹಿರಿಯ ಪತ್ರಕರ್ತ ಬನ್ನಂಜೆ ಗೋವಿಂದಾಚಾರ್ಯ ಪತ್ರಿಕೋದ್ಯಮದಲ್ಲಿ ಒಂದು ದಂತಕತೆ.
1972ರ ಸುಮಾರಿಗೆ ಉದಯವಾಣಿ ಸೇರಿದ ಎ. ಈಶ್ವರಯ್ಯ, ಆಂಗ್ಲಭಾಷೆಯಲ್ಲಿ ಬಿ. ಎ. ಪದವೀಧರರು. ಉದಯವಾಣಿ ಸಾಪ್ತಾಹಿಕ ವಿಭಾಗದ ಸಂಪಾದಕತ್ವವನ್ನು ವಹಿಸಿದ ಅವರು ಕಲೆ, ಸಂಸ್ಕೃತಿ, ಸಾಹಿತ್ಯ, ನಾಟಕ, ಯಕ್ಷಗಾನ ಇತ್ಯಾದಿಗಳ ಪ್ರಚಾರ ಮತ್ತು ಪ್ರಸಾರಕ್ಕೆ ಸಲ್ಲಿಸಿದ ಕೊಡುಗೆ ಮನನೀಯ. ಲಲಿತ ರಂಗಗಳ ವಿಮರ್ಶೆಗೆ ವೇದಿಕೆ ಒದಗಿಸಿಕೊಟ್ಟ ಈಶ್ವರಯ್ಯ ಮೊದಲ ಬಾರಿಗೆ ಧ್ವನಿಮುದ್ರಿಕೆಗಳ ಬಗ್ಗೆ ವಿಮರ್ಶೆ ಬರೆದವರು ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 1973ರಲ್ಲಿ ತುಷಾರ ಮಾಸ ಪತ್ರಿಕೆ ಸ್ಥಾಪಕ ಸಂಪಾದಕರಾಗಿ, ಕನ್ನಡ ಚಿತ್ರ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದವರು. ಫೋಕಲ್ ಫೋಟೊ ಕ್ಲಬ್ ಸ್ಥಾಪಕ ಅಧ್ಯಕ್ಷರಾಗಿ ಬೆಂಗಳೂರು, ಸಾಗರ, ಮುಂಬೈ ಮೊದಲಾದೆಡೆಗಳಲ್ಲಿ 50ಕ್ಕೂ ಹೆಚ್ಚು ಛಾಯಾಗ್ರಹಣ ತರಬೇತಿ ನೀಡಿದ್ದಾರೆ. ಮಣಿಪಾಲ ವಿಶ್ವವಿದ್ಯಾನಿಲಯ ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ ಪತ್ರಿಕೋದ್ಯಮ ವಿಭಾಗದ ಗೌರವ ಉಪನ್ಯಾಸಕರೂ ಆಗಿದ್ದಾರೆ.
ಸಂಗೀತ ವಿಮರ್ಶಕರೂ ಆಗಿರುವ ಈಶ್ವರಯ್ಯ, ಮಂಗಳೂರಿನ ಸಂಗೀತ ಪ್ರತಿಷ್ಠಾನ ಅಧ್ಯಕ್ಷ. ಸಣ್ಣ ಕತೆಗಳು, ವಿಮರ್ಶೆ, ಲಲಿತ ಪ್ರಬಂಧ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪೊಲ್ಯ ಯಕ್ಷಗಾನ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ, ರಂಗ ವಾಚಸ್ಪತಿ ಪ್ರಶಸ್ತಿ, ಪರಶುರಾಮ ಪ್ರಶಸ್ತಿ ಮೊದಲಾದ ಅನೇಕ ಪ್ರಶಸ್ತಿಗಳು ಅವರನ್ನರಸಿ ಬಂದಿವೆ.
ಉದಯವಾಣಿ ಪತ್ರಿಕೆ ಆರಂಭದ ದಿನಗಳಿಂದಲೂ ಆ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ಎನ್. ಗುರುರಾಜ್, ಪತ್ರಿಕೆ ಸಂಪಾದಕರೂ ಆಗಿದ್ದರು. ಪ್ರಸ್ತುತ ಸದ್ರಿ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿ ಪತ್ರಿಕೆಯ ಪುಟ ಕಟ್ಟುವಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಉತ್ತಮ ನಾಟಕಕಾರ, ದಿಗ್ದರ್ಶಕ, ಲೇಖಕರಾಗಿರುವ ಎನ್. ಗುರುರಾಜ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಮೊದಲಾದವುಗಳು ಪ್ರಾಪ್ತವಾಗಿವೆ. ನಿಗರ್ವಿ, ಸ್ನೇಹಜೀವಿಯಾಗಿರುವ ಗುರುರಾಜ್ ಅನೇಕ ಮಂದಿ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ.
ಕರ್ನಾಟಕದಿಂದ ದೂರದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ಬಾ. ಸಾಮಗ ಅಲ್ಲಿಯೂ ಕನ್ನಡ ಪತ್ರಿಕೋದ್ಯಮ ನಡೆಸುತ್ತಿದ್ದಾರೆ. ವಿಶಿಷ್ಟ ವ್ಯಕ್ತಿತ್ವದ ಸಾಮಗ, ತನ್ನ ವಿದ್ಯೆಗೆ ಸೂಕ್ತವಾದ ಉದ್ಯೋಗ ಸಿಗದಿದ್ದಾಗ ಸ್ವತಂತ್ರ ಕಾಯಕ ಕೈಗೊಳ್ಳುವ ದಿಟ್ಟತನ ಮೆರೆದವರು. ಅದಕ್ಕೆ ಅವರು ಆಯ್ದುಕೊಂಡದ್ದು ಪತ್ರಿಕೋದ್ಯಮ!
ಕನ್ನಡಕ್ಕಾಗಿ ಕೆಲಸ ಮಾಡಿದವರನ್ನು ಸನ್ಮಾನಿಸುವುದು, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು, ಕನ್ನಡ ಸೇನಾನಿಗಳ ಸಂಸ್ಮರಣೆ ಇತ್ಯಾದಿಗಳನ್ನು ದೆಹಲಿಯಲ್ಲಿ ನಿರ್ವಹಿಸುವ ಅವರಿಗೆ ಸಾಕಷ್ಟು ಪ್ರಶಂಸೆಯೂ ಲಭಿಸಿದೆ. ಕಳೆದ 25 ವರ್ಷಗಳ ಹಿಂದೆ `ದೆಹಲಿ ಕನ್ನಡಿಗ' ಎಂಬ ಪತ್ರಿಕೆ ಆರಂಭಿಸಿರುವ ಸಾಮಗ, ಇಂದಿಗೂ ಅವಿಚ್ಛಿನ್ನವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. `ತುಳುವೆರ್' ತುಳು ಪತ್ರಿಕೆ ದೆಹಲಿ ಕನ್ನಡಿಗ ಪತ್ರಿಕೆಯ ಸಂಗಾತಿ.
ಹಿರಿಯ ಯಕ್ಷಗಾನ ಕಲಾವಿದ ಮಲ್ಪೆ ಶಂಕರನಾರಾಯಣ ಸಾಮಗ ಅವರ ಪುತ್ರರಾಗಿರುವ ಬಾಲಕೃಷ್ಣ ಸಾಮಗ, ತಮ್ಮ ತಂದೆಯವರ ಕುರಿತ ಪುಸ್ತಕವೊಂದನ್ನು ಪ್ರಕಟಿಸುವ ಇಚ್ಛೆ ಹೊಂದಿದ್ದಾರೆ.
(ಸಂಯುಕ್ತ ಕರ್ನಾಟಕ: ಜು. 1, 2008)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ