ಜೂನ್ 7, 2010

ಉದ್ವಾರ್ಚನೆ: ಇದು ಕೃಷ್ಣಮಠದ ವಾರ್ಷಿಕ ಸ್ವಚ್ಛತಾ ಕಾರ್ಯಕ್ರಮ

ಉದ್ವಾರ್ಚನೆ- ಇದು ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮ. ಯತಿಗಳಿಂದಲೇ ಈ ಅಪೂರ್ವ ಕಾರ್ಯಕ್ರಮಕ್ಕೆ ಚಾಲನೆ.
ವಜ್ರ ಕವಚಧಾರಿಯಾಗಿ, ಬಾಲಕೃಷ್ಣನಾಗಿ ಕಂಗೊಳಿಪ ಪೊಡವಿಗೊಡೆಯ ರುಕ್ಮಿಣೀಕರಾರ್ಚಿತ ಉಡುಪಿ ಶ್ರೀಕೃಷ್ಣ ಮೂರುತಿ ಬೊಳ್ಗೊಡೆ (ತಾಳೆಗರಿ ಕೊಡೆ) ಸಹಿತ ಈಚಲು ಚಾಪೆ ಧರಿಸಿ ಬೆಚ್ಚನೆ ಕುಳಿತಿದ್ದಾನೆ. ಆತನ ದರ್ಶನಾಕಾಂಕ್ಷಿಗಳಾಗಿ ಬಂದ ಭಕ್ತರಿಗೆ ತನ್ನ ಮುಖವನ್ನೂ ಆತ ತೋರಿಸಲೊಲ್ಲ!
ಇದು ಉಡುಪಿ ಕೃಷ್ಣ ಕೋಪಾವಿಷ್ಟನಾದ ಸಂದರ್ಭ ಎಂದರೆ ಅದು ತಪ್ಪಾಗುತ್ತದೆ. ಇದು ಉಡುಪಿಯಲ್ಲಿ ವಾರ್ಷಿಕವಾಗಿ ನಡೆಯುವ ವಿಶಿಷ್ಟ ಸ್ವಚ್ಛತಾ ಕಾರ್ಯಕ್ರಮ. ಪರ್ಯಾಯ ಶ್ರೀಪಾದರೂ ಸೇರಿದಂತೆ ಅಷ್ಟಮಠಗಳ ಯತಿಗಳೂ ಕಲೆತು ನಡೆಸುವ ಕಾರ್ಯಕ್ರಮಕ್ಕೆ ಉದ್ವಾರ್ಚನೆ ಎಂದು ಹೆಸರು. ಪ್ರತೀ ವರ್ಷ ಆಷಾಢ ಏಕಾದಶಿ (ಪ್ರಥಮೈಕಾದಶಿ) ಸಂದರ್ಭ ಈ ವೈಶಿಷ್ಟ್ಯಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಉತ್ಸವಪ್ರಿಯ ಶ್ರೀಕೃಷ್ಣನಿಗೆ ನಿತ್ಯವೂ ವಿವಿಧ ಉತ್ಸವಗಳು. ಸಾಲದಂತೆ ಚತುರ್ದಶ ಭುವನದೊಡೆಯನಿಗೆ ದಿನವೂ 14 ಬಗೆಯ ಪೂಜೆಗಳು. ಬಹುವಿಧ ಪೂಜೆಗಳು, ಆಗಮಿಸುವ ಭಕ್ತಾದಿಗಳಿಗೆ ಆಶೀರ್ವಾದ ಇತ್ಯಾದಿಗಳಿಂದ ಸದಾ ಬ್ಯುಸಿಯಾಗಿರುವ ಪರ್ಯಾಯ ಪೀಠಸ್ಥ ಯತಿಗಳಿಗೆ ದೇವಳ ಗರ್ಭಗುಡಿ ಸಹಿತ ದೇವಳದ ವಿವಿಧ ಭಾಗಗಳನ್ನು ಸ್ವಚ್ಛಗೊಳಿಸುವುದು ಅಸಾಧ್ಯ ಮತ್ತು ಸಮಯವೂ ಕಮ್ಮಿ. ಈ ಹಿನ್ನೆಲೆಯಲ್ಲಿ ಪಾರಂಪರಿಕವಾಗಿ ಉದ್ವಾರ್ಚನೆ ಎಂಬ ವಿಶಿಷ್ಟ, ಸಾಮುದಾಯಿಕ ಕಾರ್ಯಕ್ರಮ ಜಾರಿಗೆ ಬಂದಿರಬೇಕು. ಶ್ರೀಸಾಮಾನ್ಯನೂ ಯತಿಗಳೊಂದಿಗೆ ಸೇರಿಕೊಂಡು ಈ ವಿಶಿಷ್ಟ ಸೇವೆಯಲ್ಲಿ ಭಾಗಿಯಾಗಲು ಸುವರ್ಣಾವಕಾಶ.
ಮಾತ್ರವಲ್ಲದೇ ಪ್ರಥಮೈಕಾದಶಿ ಬಳಿಕ ಶ್ರೀಕೃಷ್ಣ ಪವಡಿಸುತ್ತಾನೆ ಎಂಬ ಪ್ರತೀತಿ ಇದೆ. ಈ ದಿನಗಳಲ್ಲಿ ವಿಶೇಷ ಉತ್ಸವಾದಿಗಳಿಲ್ಲ. ಈ ಸಮಯದಲ್ಲಿ ಬರುವ ಗೌಜಿಯ ಉತ್ಸವ ಎಂದರೆ ಶ್ರೀಕೃಷ್ಣ ಜನ್ಮಾಷ್ಟಮಿ ಮಾತ್ರ. ಇನ್ನು ಭಗವಂತ ನಿದ್ದೆಯಿಂದೇಳುವುದು ಉತ್ಥಾನ ಏಕಾದಶಿಗೆ. ಅಲ್ಲಿಯ ವರೆಗೆ ಕೃಷ್ಣನ ಉತ್ಸವ ಮೂರ್ತಿಯನ್ನು ದೇವಳದಿಂದ ಹೊರಕ್ಕೆ ಕೊಂಡೊಯ್ಯುವಂತೆಯೂ ಇಲ್ಲ. ಈ ಸಂದರ್ಭದಲ್ಲಿ ಕೃಷ್ಣನ ನಿದ್ರೆಗೆ ಭಂಗವಾಗಬಾರದಲ್ಲಾ, ಆತನ ಶಯನಾಗೃಹ ಶುಚಿಯಾಗಿರಬೇಕಲ್ಲಾ? ಅದಕ್ಕೇ ಈ ಉದ್ವಾರ್ಚನೆ.
ಪುತ್ತಿಗೆ ಪರ್ಯಾಯ ಸಂದರ್ಭ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಉದ್ವಾರ್ಚನೆಯಲ್ಲಿ ಅದಮಾರು ಕಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ತೀರ್ಥಹಳ್ಳಿ ಭೀಮನಕಟ್ಟೆ ಶ್ರೀ ರಘೂತ್ತಮತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಯತಿಗಳೆಲ್ಲ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಕಾರ್ಯದಲ್ಲಿ ಭಾಗಿಗಳಾದರು. ಭಕ್ತರೂ ಅದರಲ್ಲಿ ಪಾಲ್ಗೊಂಡರು. ಬಳಿಕ ಮಧ್ವಸರೋವರದಲ್ಲಿ ಸ್ನಾನಗೈದು ಉದ್ವಾರ್ಚನೆಯನ್ನು ಕೃಷ್ಣಾರ್ಪಣಗೈದರು.

(ಸಂಯುಕ್ತ ಕರ್ನಾಟಕ: ಜು. 9, 2008)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ