ಶ್ರೀಕೃಷ್ಣ, ಕಲಿಯುಗದ ಹೆದ್ದೈವ. `ನನ್ನ ಭಕ್ತರು ಎಂದೂ ನಿರಾಶರಾಗುವುದಿಲ್ಲ' ಎಂದು ಭಕ್ತನಾದ ಅರ್ಜುನನಿಂದ ಪ್ರತಿಜ್ಞೆ ಮಾಡಿಸಿದ ಕರುಣಾಳು ಆತ. ಅವನಿಗೆ ಬಲ್ಲಿದ ಭೀಷ್ಮಾಚಾರ್ಯರೂ, ಬಡವ ಸುದಾಮನೂ ಸಮಾನ. ಅದಕ್ಕಾಗಿಯೇ ಆಚಾರ್ಯ ಮಧ್ವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಉಡುಪಿಯ ಶ್ರೀಕೃಷ್ಣ, ವಿಶ್ವಕರ್ಮ ಕೆತ್ತಿದ ರುಕ್ಮಿಣೀ ಕರಾರ್ಚಿತನಾದ ಪವಿತ್ರ ಪ್ರತಿಮೆ. ಅದರಲ್ಲಿ ಶ್ರೀಮದಾಚಾರ್ಯರ ಭಕ್ತಿಯ ಕರೆಗೆ ಓಗೊಟ್ಟು ಶ್ರೀಕೃಷ್ಣ ನೆಲೆ ನಿಂತಿದ್ದಾನೆ. ಅದಕ್ಕೆ ಶ್ರೀ ವಾದಿರಾಜರು, ಕನಕ- ಪುರಂದರರು ಸಾಕ್ಷಿ. ಆದ್ದರಿಂದಲೇ ಇಲ್ಲಿ ಮಾಡಿದ ಪ್ರಾರ್ಥನೆ ಶ್ರೀಕೃಷ್ಣನ ಕಿವಿಗೆ ಮುಟ್ಟುತ್ತದೆ; ನೀಡಿದ ಸೇವೆ ಕೃಷ್ಣಾರ್ಪಣವಾಗುತ್ತದೆ ಎಂಬ ನಂಬಿಕೆ ಇದೆ.
ರೂಪ್ಯ ಪೀಠಂ ಕುಮಾರಾದ್ರಿಃ ಕುಂಭಾಶಿ ಚ ಧ್ವಜೇಶ್ವರಃ /
ಕ್ರೋಢ ಗೋಕರ್ಣ ಮೂಕಾಂಬಾಃ ಸಪ್ತೈತೇ ಮೋಕ್ಷದಾಯಿಕಾಃ //
ಪರಶುರಾಮ ಸೃಷ್ಟಿಯ ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ, ಶಂಕರನಾರಾಯಣ, ಕೊಲ್ಲೂರು, ಗೋಕರ್ಣ- ಈ ಸಪ್ತಕ್ಷೇತ್ರಗಳು ಪುಣ್ಯಕ್ಷೇತ್ರಗಳು. ಅವುಗಳಲ್ಲಿ ಸುಬ್ರಹ್ಮಣ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರೆ, ಗೋಕರ್ಣ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಉಳಿದ ಐದು ಪುಣ್ಯತಮ ತಾಣಗಳಿರುವುದು ಉಡುಪಿ ಜಿಲ್ಲೆಯಲ್ಲಿ. ಉಡುಪಿಯನ್ನು ರೂಪ್ಯಪೀಠ ಎಂದೂ, ರಜತಪೀಠ ಎಂದೂ ಕರೆಯುತ್ತಿದ್ದರು. ತುಳುವಿನಲ್ಲಿ ಉಡುಪಿಯನ್ನು ಒಡಿಪು ಎಂದೂ ಕರೆಯುತ್ತಾರೆ. ಉಡುಪಿಯಿಂದ ಸುಮಾರು ಹತ್ತು ಕಿ. ಮೀ. ದೂರದಲ್ಲಿರುವ ಪಾಜಕದಲ್ಲಿ ಜನಿಸಿ, ದ್ವೈತಮತ ಸ್ಥಾಪಿಸಿದ ಆಚಾರ್ಯ ಮಧ್ವರಿಂದ ಉಡುಪಿ ಮತ್ತಷ್ಟು ಖ್ಯಾತಿಯನ್ನು ಪಡೆಯಿತು. ಅವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಈ ಕುರಿತು ಅನೇಕ ಕಥೆಗಳಿವೆ. ಅವುಗಳಲ್ಲಿ ಪ್ರಖ್ಯಾತವಾಗಿರುವುದು ಈ ಕಥೆ.
ಉಡುಪಿ ಕೃಷ್ಣನ ಕಥೆ:
ಸರಕು ಸಾಗಿಸುವ ಹಡಗು ಸಮುದ್ರದಲ್ಲಿ ಕಲ್ಲುಬಂಡೆಗೆ ಬಡಿಯುವ ಆಘಾತಕಾರಿ ಸನ್ನಿವೇಶದಿಂದ ಪಾರುಮಾಡಿದ ಆಚಾರ್ಯ ಮಧ್ವರಿಗೆ ಅವರ ಇಚ್ಛೆಯಂತೆ ನೀಡಿದ ಗೋಪಿಚಂದನದ ಎರಡು ಹೆಂಟೆ (ಮುದ್ದೆ)ಯೊಳಗೆ ಕೃಷ್ಣ- ಬಲರಾಮರ ವಿಗ್ರಹಗಳಿದ್ದು, ಅವುಗಳಲ್ಲಿ ಒಂದನ್ನು (ಬಲರಾಮ) ವಡಭಾಂಡೇಶ್ವರದಲ್ಲಿ ಪ್ರತಿಷ್ಠಾಪಿಸಿ, ಮತ್ತೊಂದನ್ನು ಉಡುಪಿಗೆ ತಂದು ಜಲಾಧಿವಾಸ ಮಾಡಿ, ವಿಧಿವತ್ತಾಗಿ ಆಚಾರ್ಯ ಮಧ್ವರು ಈಗಿರುವ ಜಾಗದಲ್ಲಿ ಪ್ರತಿಷ್ಠಾಪಿಸಿದರು. ಶ್ರೀಕೃಷ್ಣನ ಪೂಜೆಗೆ ಉಡುಪಿ ಸುತ್ತಲಿನ ಎಂಟು ಊರುಗಳಾದ ಕಾಣಿಯೂರು, ಸೋದೆ, ಪುತ್ತಿಗೆ, ಅದಮಾರು, ಪೇಜಾವರ, ಪಲಿಮಾರು, ಕೃಷ್ಣಾಪುರ ಮತ್ತು ಶೀರೂರುಗಳಿಂದ ಬಾಲ ಸನ್ಯಾಸಿಗಳನ್ನು ಆರಿಸಿಕೊಂಡು ಅವರಿಗೆ ಶ್ರೀಕೃಷ್ಣಪೂಜೆಯ ದೀಕ್ಷೆಯಿತ್ತು ತಮ್ಮ ಆಧ್ಯಾತ್ಮ ಅಮೃತವನ್ನು ಹಂಚಿದರು.
ಪರ್ಯಾಯ ಪದ್ಧತಿ:
ಎಂಟು ಮಂದಿ ಯತಿಗಳು ಶ್ರೀಕೃಷ್ಣ ಪೂಜೆಯನ್ನು ಅನುಕ್ರಮವಾಗಿ ಮಾಡಲು ಅನುಕೂಲವಾಗುವಂತೆ ಒಂದು ವಿಶಿಷ್ಟ ಅವಧಿಯ ತನಕ ಒಬ್ಬೊಬ್ಬರು ಶ್ರೀಕೃಷ್ಣ ಪೂಜೆಯ ಹೊಣೆಯನ್ನು ವಹಿಸಿಕೊಳ್ಳುವ ಪದ್ಧತಿಯೇ ಪರ್ಯಾಯ. ಪೂಜೆಯ ಹೊಣೆ ಸ್ವೀಕರಿಸುವ ಸ್ವಾಮಿಗಳು ಪರ್ಯಾಯ ಯತಿಗಳು, ಮತ್ತವರ ಮಠ ಪರ್ಯಾಯ ಮಠ ಎಂದೆನಿಸಿಕೊಳ್ಳುತ್ತದೆ. ಯಾರ ಪೂಜೆಯ ಅವಧಿಯೋ ಅದು ಅವರ ಪರ್ಯಾಯ ಕಾಲ. ಪೂಜೆಯನ್ನು ಆರಂಭಿಸುವ ದಿನ ನಡೆಯುವ ಜಾತ್ರೆಯೇ ಪರ್ಯಾಯ ಮಹೋತ್ಸವ. ಶ್ರೀ ವಾದಿರಾಜರ ಕಾಲದ ತನಕ ಎರಡು ತಿಂಗಳಿಗೊಮ್ಮೆ ಪರ್ಯಾಯ ನಡೆಯುತ್ತಿತ್ತು ಎಂದು ತಿಳಿದುಬರುತ್ತದೆ. ಆನಂತರ ವಾದಿರಾಜರು ಎರಡು ವರ್ಷಗಳ ಅವಧಿಯ ಪರ್ಯಾಯ ಪದ್ಧತಿಯನ್ನು ರೂಢಿಗೆ ತಂದರು. ನಂತರದ ದಿನಗಳಲ್ಲಿ ಈ ಮಹೋತ್ಸವಕ್ಕೆ ನಾಡಹಬ್ಬದ ಮೆರುಗು ಬಂತು.

ಪರ್ಯಾಯದ ಪೂರ್ವಭಾವಿ ಚಟುವಟಿಕೆಗಳು ಪರ್ಯಾಯೋತ್ಸವಕ್ಕಿಂತ ಒಂದು ವರ್ಷ ಮೊದಲೇ ಆರಂಭವಾಗುತ್ತದೆ. ಈ ಪೂರ್ವಭಾವಿ ಕಾರ್ಯಕ್ರಮಗಳಲ್ಲಿ ಮುಖ್ಯವಾದವು ನಾಲ್ಕು. ಅವುಗಳೆಂದರೆ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತ. ಪರ್ಯಾಯಕ್ಕೆ ಇನ್ನೂ ಒಂದು ವರ್ಷವಿದೆ ಎನ್ನುವಾಗ ಒಂದು ಶುಭದಿನದಂದು, ಶುಭ ಮುಹೂರ್ತದಲ್ಲಿ ಬಾಳೆ ಮುಹೂರ್ತ ನಡೆಯುತ್ತದೆ. ತುಲಸಿ ಮತ್ತು ಬಾಳೆಯ ತೋಟಗಳನ್ನು ಬೆಳೆಸುವ ಸನ್ನಾಹ ಈ ಕಾರ್ಯಕ್ರಮದಿಂದ ಆರಂಭವಾಗುತ್ತದೆ. ಕೃಷ್ಣಾರ್ಚನೆಗೆ ದಿನವೂ ತುಲಸಿ ಲಭ್ಯತೆ ಹಾಗೂ ಅನ್ನದಾನಕ್ಕೆ ಹೇರಳ ಬಾಳೆಎಲೆ, ಸಮರ್ಪಣೆಗೆ ಬಾಳೆಹಣ್ಣು ಈ ವಿಧಿಯ ಹಿಂದಿನ ಆಶಯ. ಬಾಳೆ ಮುಹೂರ್ತ ನಡೆದ ಎರಡು ತಿಂಗಳಲ್ಲಿ ಅಕ್ಕಿಮುಹೂರ್ತ ನಡೆಯುತ್ತದೆ. ಪರ್ಯಾಯ ಕಾಲದಲ್ಲಿ ದಿನವೂ ನಡೆಯುವ ಸಹಸ್ರಾರು ಜನರ ಅನ್ನಸಂತರ್ಪಣೆಗಾಗಿ ಸಾಕಷ್ಟು ಅಕ್ಕಿ ಸಂಗ್ರಹಿಸುವುದಕ್ಕಾಗಿ ಈ ಮುಹೂರ್ತ. ನಂತರದ್ದು ಕಟ್ಟಿಗೆ ಮುಹೂರ್ತ. ಪರ್ಯಾಯಕ್ಕೆ ಇನ್ನು ಆರೇಳು ತಿಂಗಳುಗಳಿವೆ ಎನ್ನುವಾಗ ಈ ಮುಹೂರ್ತ ನಡೆಯುತ್ತದೆ. ಸಂತರ್ಪಣೆಗೆ ಅಕ್ಕಿ ಸಂಗ್ರಹಿಸಿದ್ದಾಯಿತು, ಅದನ್ನು ಬೇಯಿಸಲು ಉರುವಲು ಬೇಕು. ಅದಕ್ಕಾಗಿ ಈ ಮುಹೂರ್ತ. ಮಧ್ವಸರೋವರ ಪಾರ್ಶ್ವಭಾಗದಲ್ಲಿ (ಗೋಶಾಲೆಯ ಹಿಂಬದಿ) ಕಟ್ಟಿಗೆಯನ್ನು ಕ್ರಮಬದ್ಧವಾಗಿ ಒಟ್ಟಿ 50 ಅಡಿ ಎತ್ತರದ ಮೋಹಕ ಕಟ್ಟಿಗೆ ರಥ ನಿರ್ಮಿಸುತ್ತಾರೆ. ಮುಂದಿನ ಪರ್ಯಾಯದ ಸ್ವಲ್ಪ ಸಮಯದ ಮುನ್ನ ಈ ರಥವನ್ನು ಬಿಚ್ಚಿ ಉರುವಲನ್ನು ಸಂತರ್ಪಣೆಗೆ ಬಳಸುತ್ತಾರೆ. ಪರ್ಯಾಯಪೂರ್ವ ವಿಧಿಗಳಲ್ಲಿ ಕೊನೆಯದಾದ ಮುಹೂರ್ತವೇ ಭತ್ತ ಮುಹೂರ್ತ. ಪರ್ಯಾಯಕ್ಕೆ ಏಳೆಂಟು ವಾರಗಳಿರುವಾಗ ಈ ಮುಹೂರ್ತ ನಡೆಸಲಾಗುತ್ತದೆ. ಪರ್ಯಾಯದ ಮೊದಲು ಹೊಸ ಕೊಯ್ಲಿನ ಭತ್ತವನ್ನು ಮುಂದಿನ ಅಕ್ಕಿಗಾಗಿ ಇದನ್ನು ಸಂಗ್ರಹಿಸಲಾಗುತ್ತದೆ. ಈ ಎಲ್ಲಾ ಮುಹೂರ್ತಗಳು ಅನ್ನದಾನದ ವ್ಯವಸ್ಥೆಗಾಗಿ ಇದೆ ಎನ್ನುವುದು ಗಮನಾರ್ಹ. ಅನ್ನಬ್ರಹ್ಮ ಎಂದೇ ಖ್ಯಾತಿ ಪಡೆದ ಉಡುಪಿ ಕೃಷ್ಣನ ಕೃಪಾರ್ಥವಾಗಿ ಈ ಎಲ್ಲಾ ಮುಹೂರ್ತಗಳ ಆಚರಣೆ.
ಪರ್ಯಾಯ ಪೀಠವೇರುವ ಸ್ವಾಮೀಜಿ ಪರ್ಯಾಯ ಮಹೋತ್ಸವಕ್ಕೆ ಇನ್ನು ಆರೇಳು ತಿಂಗಳಿರುವಾಗ ತೀರ್ಥಕ್ಷೇತ್ರಗಳ ಯಾತ್ರೆಗೆ ಹೊರಡುತ್ತಾರೆ. ಅದೇ ಪರ್ಯಾಯಪೂರ್ವ ಸಂಚಾರ ಅಥವಾ ಪರ್ಯಾಯ ಸಂಚಾರ. ಭಾವಿ ಪರ್ಯಾಯ ಸ್ವಾಮಿಗಳು ಪರ್ಯಾಯ ಸ್ವೀಕರಿಸಿದ ಬಳಿಕ ಎರಡು ವರ್ಷ ಕಾಲ ಉಡುಪಿ ಕೃಷ್ಣಮಠ ಬಿಟ್ಟು ಎಲ್ಲೂ ಹೋಗುವಂತಿಲ್ಲ. ಅವರ ಚಟುವಟಿಕೆಗಳೇನಿದ್ದರೂ ರಥಬೀದಿಯೊಳಗೆ ಮಾತ್ರ ಸೀಮಿತ!

ಹೀಗೆ ಪರ್ಯಾಯಪೂರ್ವ ಸಂಚಾರ ಪೂರೈಸಿ, ತಮ್ಮ ಪರ್ಯಾಯ ಮಹೋತ್ಸವಕ್ಕೆ ಆಮಂತ್ರಣ ನೀಡಿ ಆಗಮಿಸುವ ಯತಿಗಳನ್ನು ಉಡುಪಿ ಜೋಡುಕಟ್ಟೆ ಬಳಿ ಸ್ವಾಗತಿಸಲಾಗುವುದು. ಅದ್ದೂರಿ ಮೆರವಣಿಗೆ ಮೂಲಕ ಅವರನ್ನು ಕೃಷ್ಣಮಠಕ್ಕೆ ಬರಮಾಡಿಕೊಳ್ಳಲಾಗುವುದು. ಅದೇ ಪುರಪ್ರವೇಶ. ಇದು ಪರ್ಯಾಯ ಮಹೋತ್ಸವಕ್ಕೆ ಸುಮಾರು 2- 3 ವಾರಗಳಿಗೆ ಮುನ್ನ ನಡೆಯುತ್ತದೆ. ಆ ಬಳಿಕ ಪರ್ಯಾಯ ಶ್ರೀಗಳು ತಮ್ಮ ಮಠದಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಆ ಬಳಿಕ ಪರ್ಯಾಯ ಮಹೋತ್ಸವದ ತಯಾರಿ ಚಟುವಟಿಕೆಗಳು ಭರದಿಂದ ಸಾಗುತ್ತವೆ. ಪರ್ಯಾಯ ಸ್ವಾಮೀಜಿಯವರಲ್ಲಿ ಆಚಾರ್ಯ ಮಧ್ವರ ಸನ್ನಿಹಿತವಾಗಿದೆ ಎಂದೇ ಪರಿಭಾವಿಸುವ ಭಕ್ತಗಡಣ ಅವರನ್ನು ಪಾದಪೂಜೆಗೆ ಆಹ್ವಾನಿಸುತ್ತಾರೆ. ಪರ್ಯಾಯ ಮಹೋತ್ಸವದ ಯಶಸ್ಸಿಗಾಗಿ ಹೊರೆಕಾಣಿಕೆ ಸಮರ್ಪಿಸುತ್ತಾರೆ. ಅಡುಗೆಗೆ ಬೇಕಾದ ದವಸ ಧಾನ್ಯಗಳು, ತರಕಾರಿಗಳು, ಬಾಳೆಎಲೆ ಇತ್ಯಾದಿಗಳನ್ನು ಹೊರೆಗಳ ಮೂಲಕ ಮಠಕ್ಕೆ ಕಳಿಸುತ್ತಾರೆ. ವಾದಿರಾಜ ಕೃಪೆಯಿಂದ ಹುಲುಸಾಗಿ ಬೆಳೆಯುತ್ತದೆ ಎಂಬ ಪ್ರತೀತಿ ಇರುವ ಮಟ್ಟಿ ಗುಳ್ಳ ಬುಟ್ಟಿಗಳ ಸಂಖ್ಯೆಯಲ್ಲಿ ಕೃಷ್ಣ ಸನ್ನಿಧಿಗೆ ಆಗಮಿಸುತ್ತದೆ. ಪರ್ಯಾಯ ಮಹೋತ್ಸವ ಸಂತರ್ಪಣೆಯಲ್ಲಿ ಮಟ್ಟು ಗುಳ್ಳ ಸಾಂಬಾರು ವಿಶೇಷ.
ಸಂಭ್ರಮದ ಪರ್ಯಾಯ ಮಹೋತ್ಸವ:
ಮಕರ ಸಂಕ್ರಮಣದ ಮಾರನೆಯ ದಿನ ಚೂರ್ಣೋತ್ಸವ. ಅದರ ಮುಂದಿನ ಒಂದು ದಿನ ಉತ್ಸವಗಳಿಗೆ ವಿಶ್ರಾಂತಿ. ಮೂರನೆಯ ದಿನ ಪರ್ಯಾಯ ಪೀಠವನ್ನು ಬಿಟ್ಟೇಳುವ ಯತಿಗಳಿಂದ ಶ್ರೀಕೃಷ್ಣನಿಗೆ ಕೊನೆಯ ಪೂಜೆ. ಮಕರ ಸಂಕ್ರಮಣದ ನಾಲ್ಕನೆಯ ದಿನ ಪರ್ಯಾಯ ಮಹೋತ್ಸವ. ಇದು ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಉಡುಪಿಯಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಅಲಿಖಿತ ಸಂವಿಧಾನ.
ಪರ್ಯಾಯ ಪೀಠವನ್ನೇರುವ ಶ್ರೀಪಾದರು ಪರ್ಯಾಯ ಮಹೋತ್ಸವದ ಮುಂಚಿನ ದಿನ ರಾತ್ರಿ (ಜ. 17) ಉಡುಪಿಯಿಂದ ಸುಮಾರು 10 ಕಿ. ಮೀ. ದೂರದಲ್ಲಿನ ಕಾಪು ದಂಡತೀರ್ಥ ಎಂಬಲ್ಲಿ ಆಚಾರ್ಯ ಮಧ್ವರಿಂದ ಸೃಜಿಸಲ್ಪಟ್ಟ ಕೆರೆಯ ಪುಣ್ಯಜಲದಲ್ಲಿ ಮಿಂದು ಮಧ್ಯರಾತ್ರಿ ಕಳೆದ ಸುಮಾರು 3 ಗಂಟೆ ವೇಳೆಗೆ ಉಡುಪಿಗೆ ಆಗಮಿಸುತ್ತಾರೆ. 4 ಗಂಟೆ ವೇಳೆಗೆ ಉಡುಪಿಯ ಸಮಸ್ತ ಜನತೆ ಜೋಡುಕಟ್ಟೆ ಬಳಿ ತೆರಳಿ, ಶ್ರೀಪಾದರನ್ನು ಸ್ವಾಗತಿಸಲು ನೆರೆದಿರುತ್ತಾರೆ. ಅಷ್ಟರಲ್ಲಿ ಇತರ ಯತಿಗಳೂ ಅಲ್ಲಿಗೆ ಆಗಮಿಸುತ್ತಾರೆ. ಪರ್ಯಾಯ ಬಿಟ್ಟೇಳುವ ಯತಿಗಳು ಮಾತ್ರ ಕೃಷ್ಣಮಠದಲ್ಲೇ ಇದ್ದು, ಶ್ರೀಕೃಷ್ಣ ಅರ್ಚನೆಯಲ್ಲಿ ನಿರತರಾಗಿರುತ್ತಾರೆ. ಪರ್ಯಾಯ ಪೀಠವೇರುವ ಸ್ವಾಮೀಜಿ ಸಹಿತ ಎಲ್ಲಾ ಯತಿಗಳು ವಿಶೇಷವಾದ ರಾಜೋಪಚಾರದ ದಿರಿಸಿನಲ್ಲಿದ್ದು ಅವರನ್ನು ವಿಶೇಷ ಮೇನೆಯಲ್ಲಿ ಕುಳ್ಳಿರಿಸಿ, ಮಠದ ಪಟ್ಟದ ದೇವರ ಸಹಿತ ಮಕರ ತೋರಣ, ಪೂರ್ಣಕುಂಭ, ಜಾನಪದ ತಂಡಗಳು, ಟ್ಯಾಬ್ಲೊಗಳ ಸಹಿತ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು. ರಥಬೀದಿ ತಲುಪುತ್ತಲೇ ಎಲ್ಲಾ ಯತಿಗಳು ಮೇನೆಯಿಂದ ಕೆಳಗಿಳಿದು, ಅದಾಗಲೇ ನೆಲದಲ್ಲಿ ಹಾಸಿದ್ದ ಬಿಳಿಹಾಸಿನ ಮೇಲೆ ನಡೆಯ ಅಡಿಯಿಟ್ಟು ಪ್ರದಕ್ಷಿಣೆಯಾಗಿ ಎಲ್ಲಾ ಯತಿಗಳು ಆಗಮಿಸುತ್ತಾರೆ. ಕನಕ ಗೋಪುರ ಬಳಿ ಆಗಮಿಸಿ, ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನಗೈದು, ಅಲ್ಲೇ ಪುರೋಹಿತರು ನವಗ್ರಹ ಪ್ರಾರ್ಥನೆ ಮಾಡಿ ದಾನ ಕೊಡಿಸುತ್ತಾರೆ. ಬಳಿಕ ಚಂದ್ರೇಶ್ವರ- ಅನಂತೇಶ್ವರ ದೇವಳ ಸಂದರ್ಶನ, ಪ್ರಾರ್ಥನೆ ನೆರವೇರುತ್ತದೆ. ಕೃಷ್ಣಮಠದ ಬಾಗಿಲಲ್ಲಿ ಪ್ರಸಕ್ತ ಪರ್ಯಾಯ ಶ್ರೀಪಾದರು ಆಗಾಮಿ ಶ್ರೀಪಾದರನ್ನು ಹಸ್ತಲಾಘವವಿತ್ತು, ಸ್ವಾಗತಿಸಿ ಕರೆದೊಯ್ಯುತ್ತಾರೆ. ಅಲ್ಲಿಂದ ಮಧ್ವಸರೋವರದಲ್ಲಿ ಕಾಲು ತೊಳೆದ ಬಳಿಕ ಶ್ರೀಕೃಷ್ಣ ಮಠ ಪ್ರವೇಶ. ಪ್ರಸಕ್ತ ಮತ್ತು ಆಗಾಮಿ ಪರ್ಯಾಯ ಶ್ರೀಪಾದರು ಕೃಷ್ಣ ಮಂದಿರದೊಳಗೆ ಹೋಗುತ್ತಿದ್ದಂತೆಯೇ ಇತರ ಶ್ರೀಪಾದರು ಬಡಗು ಮಾಳಿಗೆಗೆ ತೆರಳಿ, ಅಲ್ಲಿ ಸಿದ್ಧಗೊಳಿಸಿದ ಅಲಂಕೃತ ಅರಳು ಗದ್ದಿಗೆಯಲ್ಲಿ ಪರ್ಯಾಯ ದೀಕ್ಷೆ ಪಡೆದಿರುವ ಯತಿಗಳ ನಿರೀಕ್ಷೆಯಲ್ಲಿದ್ದು ಆಸೀನರಾಗಿರುತ್ತಾರೆ. ಈಮಧ್ಯೆ, ಪರ್ಯಾಯ ಬಿಟ್ಟೇಳುವ ಶ್ರೀಪಾದರು ಪರ್ಯಾಯ ವಹಿಸುವ ಶ್ರೀಪಾದರನ್ನು ಕೃಷ್ಣ ಗರ್ಭಗುಡಿಗೆ ಕರೆದೊಯ್ದು ಕೃಷ್ಣನ ಅಂತರಂಗದ ದರ್ಶನ ಮಾಡಿಸಿ, ಮಧ್ವಾಚಾರ್ಯರು ನೀಡಿದ್ದ ಅಕ್ಷಯ ಪಾತ್ರೆ, ಸಟ್ಟುಗ ಹಾಗೂ ಗರ್ಭಗುಡಿಯ ಬೀಗದ ಕೀಲಿಕೈ ಹಸ್ತಾಂತರ ಇತ್ಯಾದಿ ಪ್ರಕ್ರಿಯೆಗಳು ಆಚಾರ್ಯ ಮಧ್ವರ ಸನ್ನಿಧಿಯಲ್ಲಿ ನಡೆದು, ಮುಖ್ಯಪ್ರಾಣ ದರ್ಶನದ ಬಳಿಕ, ಆಗಾಮಿ ಯತಿಗಳನ್ನು ಪರ್ಯಾಯ ಶ್ರೀಪಾದರು ಸರ್ವಜ್ಞಪೀಠದಲ್ಲಿ ಕುಳ್ಳಿರಿಸುತ್ತಾರೆ. ಮಾಲಿಕಾ ಮಂಗಳಾರತಿ, ಗಂಧಾಕ್ಷತೆ ಸಮಪರ್ಪಣೆ ಇತ್ಯಾದಿ ನಡೆಯುತ್ತದೆ. ಬಡಗು ಮಾಳಿಗೆಯಲ್ಲಿ ಸಿದ್ಧಗೊಂಡ ಅರಳು ಗದ್ದುಗೆಯಲ್ಲಿ ಗಂದಾದ್ಯುಪಚಾರ ನಡೆಯುತ್ತದೆ. ವಾದಿರಾಜರ ಕಾಲದಲ್ಲಿ ಪರ್ಯಾಯ ಸಭೆ ನಡೆಯುತ್ತಿದ್ದ ತಾಣ ಇದು ಎನ್ನುವ ಸಂಕೇತವಾಗಿ ಈ ಕಾರ್ಯಕ್ರಮ ಇಲ್ಲಿ ನಡೆಯುತ್ತದೆ. ಈ ರಾಜವೈಭವದ ಕಾರ್ಯಕ್ರಮಗಳ ಸರಮಾಲೆಯ ಕೊನೆಯ ಮಜಲು ರಾಜಾಂಗಣದ ದರ್ಬಾರು ಸಭೆ. ಅಲ್ಲಿ ಎಲ್ಲಾ ಶ್ರೀಪಾದರು ವಾದ್ಯಗೋಷ್ಠಿಯ ಮೆರವಣಿಗೆಯಲ್ಲಿ ಸುಮಾರು ಮುಂಜಾನೆ 7ರ ಸಮಯಕ್ಕೆ ರಾಜಾಂಗಣದ ಬೃಹತ್ ಸಭಾಭವನವನ್ನು ಪ್ರವೇಶಿಸುತ್ತಾರೆ. ಅದಾಗಲೇ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ರಾಜಾಂಗಣದಲ್ಲಿ ಆಸೀನರಾಗಿರುತ್ತಾರೆ. ಪರ್ಯಾಯ ವಿದಾಯ ಭಾಷಣ, ಪರ್ಯಾಯ ಶ್ರೀಪಾದರಿಂದ ಉದ್ದೇಶಿತ ಯೋಜನೆಗಳ ಪ್ರಕಟಣೆ, ಪರ್ಯಾಯ ಸಂದೇಶ, ಪ್ರಮುಖರಿಂದ ಅಭಿನಂದನೆ, ಪರ್ಯಾಯ ಪ್ರಶಸ್ತಿ ಪ್ರದಾನ ಇತ್ಯಾದಿಗಳು ನಡೆಯುತ್ತವೆ.
ಬಳಿಕ ನೆರೆದ ಅಸಂಖ್ಯ ಭಕ್ತರಿಗೆ ಷಡ್ರಸೋಪೇತವಾದ ಪಂಚಭಕ್ಷ್ಯ ಸಹಿತ ಭೋಜನ ಪ್ರಸಾದ ಸಮರ್ಪಣೆಯಾಗುತ್ತದೆ.
ಪೊಡವಿಗೊಡೆಯಗೆ ಚತುರ್ದಶ ಪೂಜೆಗಳು
ಉಡುಪಿ ಶ್ರೀಕೃಷ್ಣನಿಗೆ ಯತಿಗಳಿಂದಲೇ ಪೂಜೆ ನಡೆಸಲ್ಪಡುವುದು ವಿಶೇಷ. ಅಷ್ಟಮಠಗಳ ಯತಿಗಳನ್ನು ಹೊರತುಪಡಿಸಿ ಇತರ ಯಾರಿಗೂ ಕೃಷ್ಣ ಮೂರ್ತಿಯನ್ನು ಮುಟ್ಟಿ ಅರ್ಚಿಸುವ ಅಧಿಕಾರವಿಲ್ಲ. ಯತಿ ಕರಾರ್ಚಿತ ಕೃಷ್ಣನಿಗೆ ಪ್ರತಿದಿನ 14 ವಿಧದ ಪೂಜೆಗಳು ನಡೆಯುತ್ತವೆ. ಅವುಗಳೆಂದರೆ, 1. ನಿರ್ಮಾಲ್ಯ ವಿಸರ್ಜನ ಪೂಜೆ, 2. ಉಷ:ಕಾಲ ಪೂಜೆ, 3. ಅಕ್ಷಯ ಪಾತ್ರೆ- ಗೋಪೂಜೆ, 4. ಪಂಚಾಮೃತ ಅಭಿಷೇಕ ಪೂಜೆ, 5. ಉಧ್ವರ್ತನ ಪೂಜೆ, 6. ಕಲಶ ಪೂಜೆ, 7. ತೀರ್ಥ ಪೂಜೆ, 8. ಅಲಂಕಾರ ಪೂಜೆ, 9. ಅವಸರ ಸನಕಾದಿ ಪೂಜೆ, 10. ಮಹಾಪೂಜೆ, 11. ಚಾಮರ ಸೇವಾ ಪೂಜೆ, 12. ರಾತ್ರಿ ಪೂಜೆ, 13. ಮಂಟಪ ಪೂಜೆ, 14. ಶಯನೋತ್ಸವ ಪೂಜೆ.
ಅವುಗಳಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ನಡೆಯುವ ಪೂಜೆಗಳು 10. ಸಂಜೆ ಬಳಿಕ 4 ಪೂಜೆಗಳು ನಡೆಯುತ್ತವೆ. ಹೀಗೆ, ಚತುರ್ದಶ ಭುವನಗಳ ಒಡೆಯನಾದ ಭಗವಂತನ ಸನ್ನಿಧಿಯಲ್ಲಿ ಅನುದಿನವೂ ಚತುರ್ದಶ ಪೂಜೆಗಳು ನಡೆಯುತ್ತವೆ.
(ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭ: 13.01.2008)